ಮೈಸೂರು ರೋಡ್‌ನಲ್ಲಿ ಟ್ರಾಫಿಕ್​: ನೈಸ್ ಲಿಂಕ್ ರಸ್ತೆ ಕಾಮಗಾರಿಗಿಲ್ಲ ಗಮನ

link road
Published on

ಆರ್​.ತುಳಸಿಕುಮಾರ್​

ಬೆಂಗಳೂರು: ದಿನವಿಡೀ ವಾಹನ ದಟ್ಟಣೆ ಇರುವ ಮೈಸೂರು ರಸ್ತೆಯಲ್ಲಿ ಸಂಚಾರ ಹಳಿ ತಪ್ಪಿದೆ. ಸರಾಗ ಸಂಚರಕ್ಕಾಗಿ ನಗರ ಪೊಲೀಸರು ಹಲವು ಉಪಕ್ರಮ ಕೈಗೊಂಡಿದ್ದರೂ, ನಿರೀಕ್ಷಿತ ಫಲಿತಾಂಶ ಕಂಡಿಲ್ಲ. ಇದಕ್ಕೆ ಪರಿಹಾರ ಒದಗಿಸಲು ಬಿಎಚ್‌ಇಎಲ್ ಜಂಕ್ಷನ್‌ನಿಂದ ರಿಂಗ್ ರಸ್ತೆ ಕಡೆ ಧಾವಿಸಲು ನೈಸ್ ಲಿಂಕ್ ರಸ್ತೆ ಯೋಜನೆ ಕೈಗೆತ್ತಿಗೊಂಡಿದ್ದರೂ, ವರ್ಷಗಳಿಂದ ಅರ್ಧಕ್ಕೆ ನಿಂತಿರುವ ಕಾಮಗಾರಿಯಿಂದಾಗಿ ಈ ಭಾಗದ ಟ್ರಾಫಿಕ್ ಕಿರಿಕಿರಿ ತಪ್ಪಿಲ್ಲ.

ಮೈಸೂರು ರಸ್ತೆ ಅಗಲೀಕರಣದ ಬಳಿಕ ಸ್ವಲ್ಪಮಟ್ಟಿಗೆ ದಟ್ಟಣೆ ಕಡಿಮೆಯಾಗಿದೆ. ಆದರೆ, ಪೀಕ್ ಅವರ್‌ನಲ್ಲಿ ವಾಹನ ಸವಾರರು ಟ್ರಾಫಿಕ್‌ನಲ್ಲಿ ಸಿಲುಕಿ ಹೈರಾಣರಾಗುತ್ತಿದ್ದಾರೆ. ನಗರದಿಂದ ನಿರ್ಗಮನ ಹಾಗೂ ಪ್ರವೇಶ ದುಸ್ತರವಾಗಿದ್ದು, ಐದಾರು ಕಡೆಗಳಲ್ಲಿ ಕೃತಕ ಟ್ರಾಫಿಕ್ ಉಂಟಾಗುತ್ತಿದೆ. ಇದನ್ನು ನಿವಾರಿಸಲು ಅವಕಾಶ ಇದ್ದರೂ, ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳು ಸಮನ್ವಯ ಸಾಧಿಸದ ಕಾರಣ ಆ ಭಾಗದಲ್ಲಿ ಸಂಚಾರ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.

ದಶಕದ ಹಿಂದೆಯೇ ಮೈಸೂರು ರಸ್ತೆಯಿಂದ ಹೊಸಕೆರೆಹಳ್ಳಿಯ ನೈಸ್ ಲಿಂಕ್ ರಸ್ತೆಯತ್ತ ಸಾಗಲು ಬಿಎಚ್‌ಇಎಲ್ ಜಂಕ್ಷನ್‌ನಿಂದ ಹೊಸದಾಗಿ ರಸ್ತೆ ನಿರ್ಮಿಸಲು ಅವಕಾಶ ನೀಡಲಾಗಿತ್ತು. ಇದಕ್ಕಾಗಿ ಬಿಎಚ್‌ಇಎಲ್ ಜಂಕ್ಷನ್‌ನಿಂದ ವೀರಭದ್ರನಗರದವರೆಗಿನ 1 ಕಿ.ಮೀ. ಉದ್ದದಷ್ಟು ಲಿಂಕ್ ರಸ್ತೆಯ ಕಾಮಗಾರಿ ಆರಂಭಗೊಂಡರೂ, ಅರ್ಧದಲ್ಲೇ ಸ್ಥಗಿತಗೊಂಡಿದೆ. ಬಿಎಚ್‌ಇಎಲ್ ಜಂಕ್ಷನ್ ಆರಂಭದಲ್ಲಿ 50 ಮೀ. ಹಾಗೂ ಲಿಂಕ್ ರೋಡ್ ಮಧ್ಯೆ 450 ಮೀ. ಹೊರತುಪಡಿಸಿ ಉಳಿದೆಡೆ ರಸ್ತೆ ಪೂರ್ಣಗೊಂಡಿದೆ. ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲು ಬಿಬಿಎಂಪಿ ಹಾಗೂ ಸಂಚಾರ ಪೊಲೀಸರಿಂದ ಸಹಕಾರ ಸಿಕ್ಕಿಲ್ಲ. ಇದರಿಂದಾಗಿ ಮೈಸೂರು ರಸ್ತೆಯ ಮೇಲಿನ ಟ್ರಾಫಿಕ್ ಒತ್ತಡವನ್ನು ನಿವಾರಿಸಲು ಸಾಧ್ಯವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಮುಖ್ಯಮಂತ್ರಿ ಸೂಚನೆಗೆ ಬೆನ್ನು:

ಇತ್ತೀಚಿಗೆ ಸಿಎಂ ನಗರ ಪ್ರದಕ್ಷಿಣೆ ಕೈಗೊಂಡಿದ್ದ ವೇಳೆ ಬಿಎಚ್‌ಇಎಲ್ ಜಂಕ್ಷನ್, ನಾಯಂಡಹಳ್ಳಿ ಸ್ಥಳ ಪರಿಶೀಲನೆ ಸಮಯದಲ್ಲಿ ಮೈಸೂರು ರಸ್ತೆಯಲ್ಲಿನ ಸಂಚಾರ ದಟ್ಟಣೆ ನಿವಾರಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅರ್ಧಕ್ಕೆ ನಿಂತಿರುವ ಲಿಂಕ್ ರಸ್ತೆಯನ್ನು ಪೂರ್ಣಗೊಳಿಸಿ ಒಂದಿಷ್ಟು ರಿಲೀಫ್​ ನೀಡುವಂತೆ ತಾಕೀತು ಮಾಡಿದ್ದರು. ಡಿಸಿಎಂ ಕೂಡ ಈ ಸಮಸ್ಯೆಯನ್ನು ಬೇಗನೆ ನಿವಾರಿಸಲು ನಿರ್ದೇಶಿಸಿದ್ದರು. ಆದರೂ ಎರಡು ತಿಂಗಳು ಕಳೆಯುತ್ತಾ ಬಂದಿದ್ದರೂ, ಸಿಎಂ ಹಾಗೂ ಡಿಸಿಎಂ ಸೂಚನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಮೈಸೂರು ರಸ್ತೆಯನ್ನು ದಟ್ಟಣೆಮುಕ್ತಗೊಳಿಸಲು ಅವಕಾಶ ಇದ್ದರೂ, ಲಿಂಕ್ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಮೀನಮೇಷ ಏಕೆ ಎಂದು ವಾಹನ ಸವಾರರು ಪ್ರಶ್ನಿಸಿದ್ದಾರೆ.

ಟೋಲ್ ಇಲ್ಲದ ರಸ್ತೆ ಮಾರ್ಗ:

ಬಿಎಚ್‌ಇಎಲ್ ಜಂಕ್ಷನ್‌ನಿಂದ ವೀರಭದ್ರನಗರದವರೆಗಿನ 1 ಕಿ.ಮೀ. ಉದ್ದದಷ್ಟು ಲಿಂಕ್ ರಸ್ತೆಯಲ್ಲಿ ಟೋಲ್ ಪಾವತಿಸದೆ ಸವಾರರು ಸಂಚರಿಸಬಹುದಾಗಿದೆ. ಇದರಿಂದಾಗಿ ನಗರದಿಂದ ಮೈಸೂರಿನತ್ತ ಸಾಗುವವರು ಬಿಎಚ್‌ಇಎಲ್ ಜಂಕ್ಷನ್ ಮೂಲಕ ಹಾಲಿ ನೈಸ್ ರಸ್ತೆ, ರಿಂಗ್ ರಸ್ತೆ ಹಾದು ಕೆಂಗೇರಿಯತ್ತ ಸುಲಭವಾಗಿ ಸಾಗಬಹುದು. ವಾಹನಗಳು ಬೇರೆ ಬೇರೆ ರಸ್ತೆಗಳಲ್ಲಿ ಸಾಗಲು ಅವಕಾಶ ಇರುವುದರಿಂದ ಮೈಸೂರು ರಸ್ತೆಯ ದಟ್ಟಣೆ ಕಡಿಮೆಯಾಗಲಿದೆ. ಜತೆಗೆ ಲಿಂಕ್ ರಸ್ತೆಯು ತಲಾ 2 ಪಥಗಳನ್ನು ಹೊಂದಿರುವುದರಿಂದ ಟ್ರಾಫಿಕ್ ಜಾಮ್‌ಗೆ ಅವಕಾಶ ಇರದು ಎಂಬ ಮಾತು ಕೇಳಿಬಂದಿದೆ.

ಮೈಸೂರು ರಸ್ತೆಯಲ್ಲಿ ಎಲ್ಲೆಲ್ಲಿ ಸಂಚಾರ ದಟ್ಟಣೆ?:

* ಹಳೇ ಗುಡ್ಡದಹಳ್ಳಿ (2 ಸ್ಥಳಗಳಲ್ಲಿ)

* ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ

* ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಬಳಿ

* ಬಿಎಚ್‌ಇಎಲ್ ಜಂಕ್ಷನ್

* ನಾಯಂಡಹಳ್ಳಿ

* ಆರ್.ಆರ್.ನಗರ ಪ್ರವೇಶ ದ್ವಾರ

* ಜ್ಞಾನಭಾರತಿ ಕ್ಯಾಂಪಸ್ ಪ್ರವೇಶ ದ್ವಾರ

* ಕೆಂಗೇರಿ ಬಸ್ ಟರ್ಮಿನಲ್

* ಕೆಂಗೇರಿ ಪೊಲೀಸ್ ಠಾಣೆ

* ಕದಂಬ ಹೋಟೆಲ್ (ನೈಸ್ ಜಂಕ್ಷನ್)

ನಾನು ಮೇಯರ್ ಆಗಿದ್ದ ಅವಧಿಯಲ್ಲಿ ಬಿಎಚ್‌ಇಎಲ್ ಜಂಕ್ಷನ್ ಬಳಿಯಿರುವ ಮಳೆಗಾಲುವೆ ಬಳಿ ಬ್ರಿಡ್ಜ್ ನಿರ್ಮಿಸಿ ನೈಸ್ ಲಿಂಕ್ ರಸ್ತೆಗೆ ಸಂಪರ್ಕಿಸುವಂತೆ ಸರ್ಕಾರಕ್ಕೆ ಕೋರಿದ್ದೆ. ಕಾರಣಾಂತರದಿಂದ ಈ ರಸ್ತೆ ಅರ್ಧಕ್ಕೆ ನಿಂತಿದ್ದು, ಈಗಲಾದರೂ ಸರ್ಕಾರ ಹಾಗೂ ಬಿಬಿಎಂಪಿ ಕಾಮಗಾರಿಗೆ ಅವಕಾಶ ನೀಡಿ ನಾಗರಿಕರಿಗೆ ಅನುಕೂಲ ಕಲ್ಪಿಸಲಿ.

- ಕಟ್ಟೆ ಸತ್ಯನಾರಾಯಣ, ಬಿಬಿಎಂಪಿ ಮಾಜಿ ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net