ಕಿರುಸೇತುವೆಯಲ್ಲಿ ಸಂಚಾರ ಕಿರಿಕಿರಿ

bridge
ಶಿಥಿಲ ವ್ಯವಸ್ಥೆಗೆ ತಲುಪಿದೆ ಬೊಳ್ಳೆಟ್ಟು ಕಿರು ಸೇತುವೆ
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಆಧುನಿಕತೆಯ ಈ ಯುಗದಲ್ಲಿ ನಾಲ್ಕು ಹೆಜ್ಜೆಗೊಂದು ಅಲ್ಲಲ್ಲಿ ಶಿಕ್ಷಣ ಸಂಸ್ಥೆಗಳು, ಶಾಲಾ ಮಕ್ಕಳು ಶಾಲೆಗೆ ತೆರಳಲು ಮನೆ ಬಾಗಿಲಿಗೆ ವಾಹನಗಳು ಬರುವ ಈ ಕಾಲದಲ್ಲೂ ಈ ಪುಟ್ಟ ಗ್ರಾಮದ ಮಕ್ಕಳು ಪಾಠ ಕಲಿಯಬೇಕಾದರೇ ಕಾಡು ದಾರಿಯ ನಡುವೆ ಹೊಳೆ ದಾಟಿಕೊಂಡು ಹೋಗುವುದು ಅನಿವಾರ್ಯ...

ನಕ್ಸಲ್ ಪೀಡಿತ ಪ್ರದೇಶವೆನ್ನುವ ಹಣೆಪಟ್ಟಿ ಹೊತ್ತುಕೊಂಡು ರಾಜ್ಯದಲ್ಲೇ ಗುರುತಿಸಿಕೊಂಡ ಕಾರ್ಕಳ ತಾಲೂಕಿನ ಈದು ಗ್ರಾಮದ ಜನರ ಕಣ್ಣೀರ ಕಥೆಯಿದು. ಈದು ಗ್ರಾಮದ ಬೊಳ್ಳೆಟ್ಟು ಪರಿಸರದಲ್ಲಿರುವ ಸುಮಾರು 65ಕ್ಕೂ ಹೆಚ್ಚಿನ ಕುಟುಂಬಗಳ ಮನೆಯ ಮಕ್ಕಳು ವಿದ್ಯೆ ಕಲಿಯಬೇಕಾದರೇ ದೂರದ ಈದುವಿನಲ್ಲಿರುವ ಪ್ರಾಥಮಿಕ ಶಾಲೆ ಸೇರಬೇಕು. ಬೊಳ್ಳೆಟ್ಟು ಭಾಗದ ಶಾಲಾ ಮಕ್ಕಳು ಪ್ರತಿದಿನ ಕಾಲುನಡಿಗೆಯಲ್ಲಿ ಈ ಕಿರುಸೇತುವೆ ದಾಟಿಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ. ಅಲ್ಲದೇ ಖಾಸಗಿ ಮಾಲೀಕರ ತೆಂಗು, ಅಡಕೆ ತೋಟಗಳ ನಡುವೆ ಸಾಗಿ ಕಾಡು ದಾರಿಯಲ್ಲೇ ಎರಡು ಹೊತ್ತು ವಿದ್ಯಾರ್ಥಿಗಳು ಸುಮಾರು 4-5 ಕಿ.ಮೀ ಕ್ರಮಿಸುವುದು ಅನಿವಾರ್ಯ.

ಶಿಥಿಲಗೊಂಡ ಸೇತುವೆ

ಹಲವು ದಶಕದ ಹಿಂದೆ ಬೊಳ್ಳೆಟ್ಟು ಜನತೆ ಮುಖ್ಯ ಪಟ್ಟಣದ ಸಂಪರ್ಕಕ್ಕಾಗಿ ಸುವರ್ಣ ನದಿಗೆ ಅಡ್ಡಲಾಗಿ ಕಾಲು ನಡಿಗೆಗಾಗಿ ಕಟ್ಟಲಾದ ಕಿರು ಸೇತುವೆ ಇದೀಗ ಶಿಥಿಲ ವ್ಯವಸ್ಥೆಗೆ ತಲುಪಿದೆ. ಈ ಸೇತುವೆ ಬೈಕ್ ಓಡಾಟಕ್ಕೂ ಯೋಗ್ಯವಾಗಿಲ್ಲ. ಸೇತುವೆಯ ಪಿಲ್ಲರ್‌ಗಳ ಕಲ್ಲುಗಳು ಬಿರುಕು ಬಿಟ್ಟಿದೆ. ಹೀಗಾಗಿ ಯಾವುದೇ ಸಂದರ್ಭದಲ್ಲಿಯೂ ಈ ಸೇತುವೆ ಕುಸಿದು ಬೀಳುವ ಸಾಧ್ಯತೆಗಳಿವೆ ಎನ್ನುವುದು ಗ್ರಾಮಸ್ಥರ ಮಾತು.

ಪ್ರಾಣಭಯದಲ್ಲೇ ಪಯಣ

ಬೊಳ್ಳೆಟ್ಟು ಪರಿಸರದ ಮಕ್ಕಳು ಪ್ರಾಥಮಿಕ ಶಾಲೆಗೆ ಈದು ಗ್ರಾಮಕ್ಕೆ ಹೋಗಬೇಕು ಪ್ರೌಢ ಶಿಕ್ಷಣಕ್ಕೆ ನಾರಾವಿ ಇಲ್ಲವೇ ಕಾರ್ಕಳಕ್ಕೆ ಹೋಗಬೇಕು. ಪ್ರತಿ ನಿತ್ಯ ಮುಂಜಾನೆ ಸುವರ್ಣ ನದಿ ದಾಟಿಕೊಂಡು ಸುಮಾರು 4-5 ಕಿ.ಮೀ ಕಾಲು ನಡಿಗೆಯಲ್ಲೇ ಸಾಗುತ್ತಾರೆ. ಸಿರಿವಂತರು ಆಟೋ ರಿಕ್ಷಾ ಅಥವಾ ಕಾರಿನಲ್ಲಿ ಸುಮಾರು 8-9 ಕಿ.ಮೀ ಸುತ್ತಿ ಬಳಸಿಕೊಂಡು ಸಂಚಾರ ನಡೆಸುತ್ತಾರೆ. ಆದರೆ ಇದು ತೀರ ಗ್ರಾಮೀಣ ಭಾಗವಾಗಿದ್ದು, ಅಷ್ಟೊಂದು ಸ್ಥಿತಿವಂತರು ಇಲ್ಲದೆ ಇಲ್ಲಿನ ಮಕ್ಕಳು ವಿದ್ಯೆಗಾಗಿ ನಿತ್ಯ ಪ್ರಾಣಭಯದಲ್ಲೇ ಶಿಥಿಲಗೊಂಡ ನದಿಯ ಕಿರು ಸೇತುವೆಯನ್ನು ದಾಟಿಕೊಂಡು ಹೋಗುವುದು ಅನಿವಾರ್ಯ.

ಸಾಲು ಸಾಲು ಸಮಸ್ಯೆ

ಮಳೆಗಾಲದಲ್ಲಿ ಇಲ್ಲಿನ ಸುವರ್ಣ ನದಿ ತುಂಬಿ ಹರಿಯುತ್ತದೆ. ಈ ಸಂದರ್ಭದಲ್ಲಿ ಅನಾರೋಗ್ಯ ಪೀಡಿತರನ್ನು ಹೊಳೆಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ನಿದರ್ಶನವೂ ಇಲ್ಲಿ ಸಾಕಷ್ಟಿವೆ. ಇದೀಗ ಒಂದೆಡೆ ಸಾಲು ಸಾಲು ಸಮಸ್ಯೆಗಳ ನಡುವೆ ನಕ್ಸಲ್ ಚಟುವಟಿಕೆಯ ಸುದ್ದಿಗಳು ಹಬ್ಬುತ್ತಿದ್ದಂತೆ ಇಲ್ಲಿನ ವಿದ್ಯಾರ್ಥಿಗಳು ಕಾಡು ದಾರಿಯಲ್ಲಿ ನಡೆದಾಡಲು ಭಯಪಡುವಂತಾಗಿದೆ.

ಬೊಳ್ಳೆಟ್ಟು ಪರಿಸರದ ಜನ ಪಟ್ಟಣ ಸೇರಬೇಕಾದರೆ ಕಾಡು ದಾರಿಯಲ್ಲೇ ಸಾಗುವುದು ಅನಿವಾರ್ಯ. ಈ ಭಾಗದ ಜನರ ಓಡಾಟಕ್ಕೆ ನದಿ ದಾಟಲು ಇರುವುದು ಒಂದು ಕಿರು ಸೇತುವೆ ಮಾತ್ರ. ಅದು ಕೂಡ ಕಾಲು ನಡಿಗೆಗೆ ಮಾತ್ರ ಯೋಗ್ಯವಾಗಿದೆ. ಇದೀಗ ಈ ಸೇತುವೆಯೂ ಶಿಥಿಲಾವಸ್ಥೆ ತಲುಪಿದೆ. -ಶೈಲೇಶ್ ಗ್ರಾಮಸ್ಥ ನಿತ್ಯಾ ವಿದ್ಯಾರ್ಥಿಗಳು ಭಾರದ ಬ್ಯಾಗ್ ಹಿಡಿದು ಹೊಳೆ ದಾಟಿಕೊಂಡು ಕಾಡು ದಾರಿಯಲ್ಲಿ ಸಾಗಬೇಕಾಗಿದ್ದು ತುಂಬಾ ಅಪಾಯಕಾರಿಯಾಗಿದೆ. ಒಂದೆಡೆ ಕಾಡು ಪ್ರಾಣಿಗಳ ಭಯವೂ ಇದೆ. ಇದರ ನಡುವೆ ನಕ್ಸಲ್ ಭಯವೂ ಇದೀಗ ಗ್ರಾಮದ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. -ಪೂಜಾ, ಸ್ಥಳೀಯರು. https://www.vijayavani.net/pratibha-puraskar-distribution-of-scholarships https://www.vijayavani.net/rescue-the-leopard-that-fell-into-the-well-4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net