ನಿತ್ಯ ಟ್ರಾಫಿಕ್ ಜಾಂ ಕಿರಿಕಿರಿ : ಬಿ.ಸಿ.ರೋಡ್ ಮುಖ್ಯವೃತ್ತದ ಬಳಿ ಕಾಮಗಾರಿಯಿಂದ ಸಮಸ್ಯೆ ಸಂಚಾರ ನಿಯಂತ್ರಣಕ್ಕೆ ಸಿಬ್ಬಂದಿಯಿಲ್ಲ

Published on

ಸಂದೀಪ್ ಸಾಲ್ಯಾನ್ ಬಂಟ್ವಾಳ

ಬಂಟ್ವಾಳ: ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ಹೆದ್ದಾರಿಯ ಭಾಗವಾಗಿ ಕಳೆದ ಹಲವು ದಿನಗಳಿಂದ ಬಿ.ಸಿ.ರೋಡಿನ ಮುಖ್ಯ ವೃತ್ತದ ಬಳಿ ರಸ್ತೆ ನಿರ್ಮಾಣ ಕೆಲಸ ನಡೆಯುತ್ತಿದೆ. ಕಾಮಗಾರಿಗಾಗಿ ಪದೇಪದೆ ವಾಹನ ಸಂಚಾರಕ್ಕೆ ರಸ್ತೆ ಬದಲಾವಣೆ ಮಾಡುತ್ತಿರುವುದರಿಂದ ವಾಹನ ಸವಾರರು ಗೊಂದಲಕ್ಕೀಡಾಗುತ್ತಿದ್ದಾರೆ. ಮುಖ್ಯ ವೃತ್ತದ ಬಳಿ ಏಳು ರಸ್ತೆಗಳು ಸಂಗಮಿಸುತ್ತಿದ್ದು, ಚತುಷ್ಪಥ ಹೆದ್ದಾರಿ ಕಾಮಗಾರಿ ಹಾಗೂ ವೃತ್ತ ನಿರ್ಮಾಣದ ಕೆಲಸ ಪೂರ್ಣಗೊಳ್ಳುವವರೆಗೆ ವಾಹನ ಚಾಲಕರರು ಇಲ್ಲಿ ಎಚ್ಚರಿಕೆಯಿಂದ ಚಲಿಸಬೇಕಾಗಿದೆ. ಮಂಗಳವಾರ ರಸ್ತೆ ಗೊಂದಲದಿಂದಾಗಿ ಕೆಲವೊಂದು ಅವಾಂತರಗಳು ಈ ಸ್ಥಳದಲ್ಲಿ ನಡೆದು ಟ್ರಾಫಿಕ್ ಜಾಂ ಉಂಟಾಗಿ ಜನರು ಪರಿತಪಿಸಬೇಕಾಯಿತು.

*ಸಿಮೆಂಟ್ ಕಲ್ಲಿಗೆ ಡಿಕ್ಕಿಯಾದ ಕಾರು: ಮುಖ್ಯವೃತ್ತದ ಬಳಿ ಒಂದೆಡೆ ಜೆಸಿಬಿಯಿಂದ ಹಳೇ ರಸ್ತೆಯನ್ನು ಅಗೆದು ಹೊಸ ರಸ್ತೆ ನಿರ್ಮಾಣದ ಕೆಲಸ ನಡೆಯುತ್ತಿದೆ. ಕಿರಿದಾದ ಒಂದು ರಸ್ತೆಯನ್ನು ನಿರ್ಮಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ಧೂಳಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ನೀರು ಹಾಕಿ ರಸ್ತೆಯಿಡೀ ಕಂಬಳದ ಗದ್ದೆಯಂತಾಗಿದೆ. ಈ ಹೊಸ ರಸ್ತೆಯಲ್ಲಿ ಧರ್ಮಸ್ಥಳ, ಬಂಟ್ವಾಳ ಪೇಟೆ, ರಾಷ್ಟ್ರೀಯ ಹೆದ್ದಾರಿ ಹಾಗೂ ಪಾಣೆಮಂಗಳೂರು ಪೇಟೆಯಿಂದ ಸಂಪರ್ಕಿಸುವ 4 ರಸ್ತೆಗಳಿಂದ ಬರುವ ವಾಹನಗಳು ಜತೆಯಾಗಿ ಸಾಗಬೇಕಾಗಿದೆ.

ಮಂಗಳವಾರ ಟಿಪ್ಪರ್ ಹಾಗೂ ಹೊರ ಜಿಲ್ಲೆಯ ಟೂರಿಸ್ಟ್ ಕಾರೊಂದು ಜತೆಯಲ್ಲಿಯೇ ನುಗ್ಗಿ ಕಾರು ಸಿಮೆಂಟ್ ಕಲ್ಲಿಗೆ ಡಿಕ್ಕಿಯಾಗಿ ಜಖಂಗೊಂಡಿತ್ತು. ಇಬ್ಬರು ಚಾಲಕರ ನಡುವೆ ರಸ್ತೆಯಲ್ಲಿಯೇ ಮಾತಿನ ಚಕಮಕಿ ಆರಂಭಗೊಂಡು ಕೆಲಹೊತ್ತು ಟ್ರಾಫಿಕ್ ಜಾಂ ಉಂಟಾಯಿತು. ರಾಷ್ಟ್ರೀಯ ಹೆದ್ದಾರಿ, ಪಾಣೆಮಂಗಳೂರು ಪೇಟೆಯಿಂದ ಬರುವ ವಾಹನಗಳು ಧರ್ಮಸ್ಥಳ ಅಥವಾ ಬಂಟ್ವಾಳ ಪೇಟೆಗೆ ಹೋಗಬೇಕಾದರೆ ಬಿ.ಸಿ.ರೋಡಿಗೆ ಬಂದು ಸುತ್ತುಬಳಸಿ ಹೋಗಬೇಕಾಗಿದೆ.

ರಸ್ತೆಯಲ್ಲಿ ಬಂದ್ ಬಿದ್ದ ಕಾರು

ಕಾರು ಸಿಮೆಂಟ್ ಕಲ್ಲಿಗೆ ಡಿಕ್ಕಿಯಾದ ಸಂದರ್ಭವೇ ಅದೇ ಸ್ಥಳದಲ್ಲಿ ಕಾರೊಂದು ಬಂದ್ ಬಿದ್ದು ಮತ್ತಷ್ಟು ತೊಂಟಾಯಿತು. ಬಳಿಕ ಸಾರ್ವಜನಿಕರು ಬಂದ್ ಬಿದ್ದ ಕಾರನ್ನು ಕೈಯಿಂದ ತಳ್ಳಿ ಮುಂದೆ ಕೊಂಡೊಯ್ದು ಇತರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಪೊಲೀಸರಿಲ್ಲದೆ ಗೊಂದಲ

ಮಂಗಳವಾರ ಬೆಳಗ್ಗೆ ಮುಖ್ಯವೃತ್ತದ ಬಳಿ ಟ್ರಾಫಿಕ್ ಜಾಂ, ವಾಹನಗಳ ಅವಾಂತರಗಳು ನಡೆಯುತ್ತಿದ್ದರೂ ಓರ್ವ ಹೋಂ ಗಾರ್ಡ್ ಮಹಿಳಾ ಸಿಬ್ಬಂದಿಯನ್ನು ಹೊರತುಪಡಿಸಿ ಟ್ರಾಫಿಕ್ ಪೊಲೀಸರು ಸ್ಥಳದಲ್ಲಿರಲಿಲ್ಲ. ಮಂಗಳವಾರ ಉಪಚುನಾವಣೆಯ ಮತ ಎಣಿಕೆ ಕಾರ್ಯ ಇದ್ದುದರಿಂದ ಹೆಚ್ಚಿನ ಟ್ರಾಫಿಕ್ ಪೊಲೀಸರು ತಾಲೂಕು ಆಡಳಿತ ಸೌಧದ ಮುಂಭಾಗ ಕರ್ತವ್ಯದಲ್ಲಿದ್ದರು. ಇದರಿಂದಾಗಿ ವಾಹನಗಳ ಅವಾಂತರ, ರಸ್ತೆ ಗೊಂದಲ ಉಂಟಾಯಿತು.

ಬಿ.ಸಿ.ರೋಡು ಸರ್ಕಲ್ ಬಳಿ ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ಚಾಲಕರು ಗೊಂದಲಕ್ಕೀಡಾಗುತ್ತಿದ್ದಾರೆ. ಕಾಮಗಾರಿ ಮುಗಿಯುವವರೆಗೂ ಜನರಿಗೆ ತೊಂದರೆ ಇರುವುದರಿಂದ ಇಲ್ಲಿನ ಕೆಲಸವನ್ನು ಆದಷ್ಟು ಬೇಗ ಮುಗಿಸಬೇಕು. ಪುರುಷೋತ್ತಮ, ಸ್ಥಳೀಯರು ಬೋಳಂಗಡಿ https://www.vijayavani.net/sanction-of-grant-to-montimaru-temple https://www.vijayavani.net/shri-shanaishchara-puja

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net