ಯಲ್ಲಾಪುರ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್, ಮಾರ್ಗ ಮಧ್ಯೆ ಸಿಲುಕಿ ತಾಳ್ಮೆ ಕಳೆದುಕೊಂಡ ಪ್ರಯಾಣಿಕರು

06 ylp 02 (traffic)
Published on

ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ ಹದಗೆಟ್ಟು, ರಸ್ತೆಯ ಹೊಂಡಗಳಲ್ಲಿ ಕೆಟ್ಟು ನಿಂತ ವಾಹನಗಳಿಂದ ಶುಕ್ರವಾರ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು.

ಸುಂಕಸಾಳ ಸಮೀಪ ಗುರುವಾರ ತಡರಾತ್ರಿ ಲಾರಿಯೊಂದು ಹೆದ್ದಾರಿಯ ಗುಂಡಿಗಳ ಮಧ್ಯೆ ಸಿಲುಕಿ ಕೆಟ್ಟು ನಿಂತ ಪರಿಣಾಮ ಹೆದ್ದಾರಿಯಲ್ಲಿ ಸಾವಿರಕ್ಕೂ ಅಧಿಕ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅರಬೈಲ್ ಘಟ್ಟದಲ್ಲೂ ಕೆಲ ವಾಹನಗಳು ಕೆಟ್ಟು ನಿಂತಿದ್ದು, ಟ್ರಾಫಿಕ್ ಸಮಸ್ಯೆಗೆ ಕಾರಣವಾಯಿತು.

ಚೌತಿ ಹಬ್ಬಕ್ಕೆಂದು ಊರಿಗೆ ಬರುತ್ತಿದ್ದ ಜನರು ಟ್ರಾಫಿಕ್​ನಲ್ಲಿ ಸಿಲುಕಿ ಒದ್ದಾಡಿದರು. ಜನರು ಅಸಮರ್ಪಕ ಕಾಮಗಾರಿ ನಿರ್ವಹಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಿಡಿಶಾಪ ಹಾಕಿದರು.

ರಸ್ತೆಯ ಅಂಚಿನಲ್ಲಿ ಶೇಡಿ ಮಿಶ್ರಿತ ಮಣ್ಣು ಹಾಕಿದ ಪರಿಣಾಮ ವಾಹನಗಳನ್ನು ರಸ್ತೆ ಬಿಟ್ಟು ಕೆಳಗೆ ಇಳಿಸುವಂತಿರಲಿಲ್ಲ. ಇಳಿಸಿದರೆ ವಾಹನಗಳು ಕುಸಿದು ಪಲ್ಟಿಯಾಗುವ ಸಾಧ್ಯತೆಗಳಿವೆ. ಹಾಗಾಗಿ ವಾಹನ ಸವಾರರು ದಾರಿ ನಡುವೆಯೇ ಗಂಟೆಗಳಷ್ಟು ಕಾಲ ಕಾಯಬೇಕಾದ ಪರಿಸ್ಥಿತಿ ಉಂಟಾಯಿತು.

ಟ್ರಾಫಿಕ್​ನಲ್ಲಿ ಸಿಲುಕಿಕೊಂಡ ಸಿಇಒ ಈಶ್ವರ ಕಾಂದೂ: ಕಾರವಾರದಿಂದ ಯಲ್ಲಾಪುರಕ್ಕೆ ತೆರಳುತ್ತಿದ್ದ ಜಿ.ಪಂ. ಕಾರ್ಯನಿರ್ವಾಹಣಾಧಿಕಾರಿ ಈಶ್ವರ ಖಾಂದೂ ಬೆಳಗ್ಗೆ ಟ್ರಾಫಿಕ್​ನಲ್ಲಿ ಸಿಲುಕಿದ್ದರು. ಟ್ರಾಫಿಕ್​ನಿಂದ ಜನರು ಹೈರಾಣಾಗಿದ್ದನ್ನು ಕಂಡರೂ ಕಾಣಿಸದಂತೆ ಕಾರಿನಿಂದ ಇಳಿಯದೇ ಯಲ್ಲಾಪುರದತ್ತ ತೆರಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆಯೂ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net