ಹೆದ್ದಾರಿಯಲ್ಲಿ ಕಾಡಿದ ಸಂಚಾರ ಸಿಕ್ಕು

20 09 205_BNG_RURAL_PAGE_2
Published on

ಆನೇಕಲ್​ : ಹೊಸೂರು&ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆಯಿಂದ ಶುಕ್ರವಾರ ತಡರಾತ್ರಿಯವರೆಗೂ ಸಂಚಾರ ಸಿಕ್ಕು ಉಂಟಾಗಿ ವಾಹನ ಸವಾರರು ಪರದಾಡಿದರು. ಹೆದ್ದಾರಿ ಕಾಮಗಾರಿ ಕೈಗೊಂಡಿರುವ ಜತೆಗೆ ಮಳೆಯೂ ಆರ್ಭಟಿಸುತ್ತಿರುವುದರಿಂದ ಸುಮಾರು 20 ಕಿಲೋಮೀಟರ್​ ಸಂಚಾರ ಸಿಕ್ಕು ಉಂಟಾಗಿತ್ತು. ಹೆದ್ದಾರಿಯ ಎರಡೂ ಬದಿ ಹಾಗೂ ಸರ್ವೀಸ್​ ರಸ್ತೆ ಕೂಡ ಸಂಪೂರ್ಣ ಜಾಮ್​ ಆಗಿ, ಅಲ್ಲಲ್ಲಿ ಆಂಬುಲೆನ್ಸ್​ ಕೂಡ ಸಿಲುಕಿಕೊಂಡಿತ್ತು. ನಾರಾಯಣ ಹೆಲ್ತ್​ ಸಿಟಿ ಆಸ್ಪತ್ರೆ ಸೇರಿ ಪ್ರಮುಖ ಆಸ್ಪತ್ರೆಗಳು ಚಂದಾಪುರ, ಬೊಮ್ಮಸಂದ್ರ ಹಾಗೂ ನೆರಳೂರು ಭಾಗದಲ್ಲಿದ್ದು, ಆಸ್ಪತ್ರೆಗೆ ಹೋಗಬೇಕಾದವರು ಇಡೀ ದಿನ ಪರದಾಡಿದರು.

ಅತ್ತಿಬೆಲೆಯಿಂದ ಬೆಂಗಳೂರು ಹಾಗೂ ಬೆಂಗಳೂರಿನಿಂದ ಚಂದಾಪುರ, ಅತ್ತಿಬೆಲೆ ಮಾರ್ಗವಾಗಿ ತಮಿಳುನಾಡಿಗೆ ಹೋಗುವ ವಾಹನಗಳು ಇಡೀ ದಿನ ತೊಂದರೆ ಅನುಭವಿಸುವಂತಾಯಿತು. ಚಂದಾಪುರದಿಂದ ಅತ್ತಿಬೆಲೆ ಮಾರ್ಗವಾಗಿ ಹೊಸೂರಿಗೆ ಹೋಗುತ್ತಿದ್ದ ಬಸ್​ಗಳು ದಿನಕ್ಕೆ ಐದಾರು ಟ್ರಿಪ್​ ಸಂಚಾರ ಮಾಡಬೇಕಾದವರು ಒಂದು ಡ್ರಿಪ್​ ಪೂರೈಸಲು ಸಾಧ್ಯವಾಗಿಲ್ಲ. ಚಂದಾಪುರದಿಂದ ಅತ್ತಿಬೆಲೆಗೆ ತಲುಪಲು 15 ನಿಮಿಷ ಸಾಕು. ಆದರೆ, ಸಂಚಾರ ಸಿಕ್ಕಿನಿಂದ ಐದಾರು ಗಂಟೆ ಆದರೂ ಅತ್ತಿಬೆಲೆಗೆ ತಲುಪಲು ಸಾಧ್ಯ ಆಗದೆ ಬಸ್​ಗಳು ಹಾಗೂ ವಾಹನ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲೆ ನಿಂತು ಸುಸ್ತಾದರು.

ಮಳೆ ಆರ್ಭಟ : ಇಡೀ ದಿನ ಸಂಚಾರ ಸಿಕ್ಕಿನಲ್ಲಿ ಪರದಾಡಿದ ದ್ವಿಚಕ್ರ ವಾಹನ ಸವಾರರಿಗೆ ಸಂಜೆ 5 ಗಂಟೆಗೆ ಶುರುವಾದ ಗಾಳಿ, ಮಳೆ ಮತ್ತಷ್ಟು ಕಿರಿಕಿರಿ ತಂದೊಡ್ಡಿತು. ಸಂಜೆ ಸುರಿದ ಬಾರಿ ಗಾಳಿ, ಮಳೆಗೆ ನೆರಳೂರು ಸುತ್ತಮುತ್ತ ಹೆದ್ದಾರಿಯಲ್ಲಿ ನೀರು ತುಂಬಿದ್ದರಿಂದ ವಾಹನ ಸವಾರರು ಪರದಾಡಿದರು. ಹಳೇ ಚಂದಾಪುರ, ನೆರಳೂರು, ಬಳಗಾರನಹಳ್ಳಿ ಗೇಟ್​ಗೆಸ್ಟ್​ ಲೈನ್​ ಹಾಗೂ ಯಡವನಹಳ್ಳಿ ಗೇಟ್​ ಬಳಿ ಹೆದ್ದಾರಿಯಲ್ಲಿ ಅಂಡರ್​ ಪಾಸ್​ ನಿರ್ಮಾಣ ಹಾಗೂ ಅಲ್ಲಲ್ಲಿ ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಹೆದ್ದಾರಿಯಲ್ಲಿ ಸಂಚಾರ ಸಿಕ್ಕು ಉಂಟಾಗುತ್ತಿದೆ.

ಹೆದ್ದಾರಿಯಲ್ಲೇ ನಿಂತ ಪ್ರವಾಸಿ ಬಸ್​ಗಳು : ಬೆಂಗಳೂರು ಮಾರ್ಗವಾಗಿ ತಮಿಳುನಾಡು ಭಾಗಕ್ಕೆ ಪ್ರವಾಸಕ್ಕೆ ಹೊರಟಿದ್ದ ಐವತ್ತಕ್ಕೂ ಹೆಚ್ಚು ಖಾಸಗಿ ಬಸ್​ಗಳು, ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕಾದವರು ಮಧ್ಯಾಹ್ನದ ಊಟಕ್ಕೂ ಕೂಡ ಹೆದ್ದಾರಿಯಿಂದ ಹೊರಬರಲು ಸಾಧ್ಯ ಆಗದೆ ಟ್ರಾಫಿಕ್​ನಲ್ಲಿ ಸಿಲುಕಿ ಪರದಾಡಿದವು. ಹೆದ್ದಾರಿಯಲ್ಲಿ ಇಡೀ ದಿನ ಸಂಚಾರ ಸಿಕ್ಕು ತೆರವು ಮಾಡಲು ಅತ್ತಿಬೆಲೆ ಪೊಲೀಸರು ಪರದಾಡಿದರು. ಆದರೆ ಹೆದ್ದಾರಿ ಪ್ರಾಧಿಕಾರದ ಯಾವೊಬ್ಬ ಅಧಿಕಾರಿಗಳು ಇತ್ತ ತಲೆ ಹಾಕಿ ನೋಡಿರಲಿಲ್ಲ.

ಟ್ರಾಫಿಕ್​ನಲ್ಲಿ ಶಾಲಾ ಬಸ್​ಗಳು : ಪರೀಕ್ಷೆ ಮುಗಿಸಿ ಬಸ್​ಗಳಲ್ಲಿ ಮನೆಗೆ ಹೋಗಬೇಕಿದ್ದ ಮಕ್ಕಳೆಲ್ಲ ಇಡೀ ದಿನ ಸಂಚಾರ ಸಿಕ್ಕಿನಿಂದ ಹೆದ್ದಾರಿಯಲ್ಲಿ ಇರಬೇಕಾದ ಪರಿಸ್ಥಿತಿ ನಿರ್ಮಾಣ ಆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net