

ಮೈಸೂರು: ದಸರಾ ಜಂಬೂಸವಾರಿ, ಪಂಜಿನ ಕವಾಯಿತು ವೀಕ್ಷಣೆ ಬಳಿಕ ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಕಂಡುಬಂತು.
ಅಂತಿಮ ದಿನ ಅರಮನೆಯಲ್ಲಿ ನಡೆದ ಮೆರವಣಿಗೆ, ಬನ್ನಿಮಂಟಪದಲ್ಲಿ ಆಯೋಜಿಸಿದ್ದ ಪಂಜಿನ ಕವಾಯಿತು ನೋಡಲು ಬಂದವರು ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ಟ್ರಾಫಿಕ್‌ನಲ್ಲಿ ಸಿಕ್ಕಿ ತೊಂದರೆ ಅನುಭವಿಸಿದರು.
ದಸರಾ ಕಣ್ಮುಂಬಿಕೊಳ್ಳಲು ರಾಜ್ಯ ಅಲ್ಲದೇ ಹೊರ ರಾಜ್ಯಗಳಿಂದಲೂ ಜನರು ಬೈಕ್, ಕಾರು, ಮಿನಿ ಟೆಂಪೋ ಸೇರಿದಂತೆ ಇನ್ನಿತರ ವಾಹನಗಳಲ್ಲಿ ಆಗಮಿಸಿದ್ದರು.
ಅರಮನೆಯಲ್ಲಿ ನಡೆದ ಜಂಜೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತ ಆನೆಗಳ ಮೆರವಣಿಗೆ ಬನ್ನಿಮಂಟಪದ ಕಡೆ ಹೊರಟಾಗ ನಗರದ ಹೃದಯ ಭಾಗ ಅಲ್ಲದೇ, ಸಂಪರ್ಕ ರಸ್ತೆಗಳಲ್ಲಿಯೂ ಸಂಚಾರ ದಟ್ಟಣೆ ಉಂಟಾಗಿ ಸವಾರರ ಪರದಾಡಿದರು.
ಸಂಜೆ ಬನ್ನಿಮಂಟಪದಲ್ಲಿ ನಡೆದ ಪಂಜಿನ ಕವಾಯತು ಮುಗಿಸಿ ಬೆಂಗಳೂರು ಕಡೆ ಹೊರಟವರು ಕೇವಲ 3 ಕಿ.ಮೀ. ಸಾಗಲು 2 ಗಂಟೆಯಷ್ಟು ಸಮಯ ತೆಗೆದುಕೊಳ್ಳಬೇಕಾಯಿತು.
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಸಾಗಿದವರು ಶ್ರೀರಂಗಪಟ್ಟಣ ತಾಲೂಕು ಗಣಂಗೂರು ಬಳಿ ಇರುವ ಟೋಲ್ ಬಳಿ ಸುಮಾರು ಒಂದೂವರೆ ಕಿ.ಮೀ.ನಷ್ಟು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಧ್ಯರಾತ್ರಿವರೆವಿಗೂ ಟೋಲ್‌ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಸವಾರರು ಪರದಾಡಿದರು.