ಮಳೆಗೆ ದಶಪಥ ಅಸ್ತವ್ಯಸ್ತ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್

Rain
Published on

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿ 70-130 ಮಿ.ಮೀ ಮಳೆ ಸುರಿದಿದ್ದು, ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ಬದಿಯ ಗ್ರಾಮಗಳು, ಪಟ್ಟಣ ಪ್ರದೇಶಗಳು ನಲುಗಿವೆ. ಕೆರೆಗಳು ಕೋಡಿ ಬಿದ್ದು, ರಸ್ತೆಗಳು ಹಾಗೂ ಸೇತುವೆಗಳು ಕೊಚ್ಚಿಹೋಗಿವೆ. ನಾಲೆ, ಹಳ್ಳ, ಕೆರೆ ಮತ್ತು ನದಿಗಳ ಬಳಿಯ ಸಾವಿರಾರು ಎಕರೆ ಹೊಲ-ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆಹಾನಿಯುಂಟಾಗಿದೆ.

15 ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ಉಂಟಾದ ಅವಾಂತರದಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೆ ಮಳೆ ಅಬ್ಬರಿಸಿದೆ. ಬೆಂಗಳೂರು, ರಾಮ ನಗರ, ಮಂಡ್ಯ, ಹಾಸನ ಮತ್ತು ಮೈಸೂರು ಜಿಲ್ಲೆಯ ಕೆಲವು ಭಾಗದಲ್ಲಿ ಕೆರೆಗಳು, ನದಿ, ಹಳ್ಳಗಳು ಉಕ್ಕಿ ಹರಿದು ರಸ್ತೆ, ಸೇತುವೆಗಳು ಹಾನಿಗೀಡಾಗಿವೆ. ಪ್ರತಿ ಗಂಟೆಗೆ ಅಂದಾಜು 40 ಸಾವಿರ ವಾಹನಗಳು ಸಂಚರಿಸುವ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಕೆಲವೆಡೆ ಕೆರೆಯಂತಾಗಿತ್ತು. ಸರ್ವಿಸ್ ರಸ್ತೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರಿಂದ ವಾಹನ ಸಂಚಾರಕ್ಕೆ ಮಾರ್ಗವೇ ಇಲ್ಲದಂತಾಗಿತ್ತು. ಕುಂಬಳಗೋಡು ಬಳಿಯ ಕಣಿಮಿಣಿಕೆ ಬಳಿಯ ಟೋಲ್ ಪ್ಲಾಜಾ ಸುತ್ತ 3-4 ಅಡಿ ನೀರು ನಿಂತಿತ್ತು. ಬಳಿಕ ಪೊಲೀಸ್ ಇಲಾಖೆ ವಾಹನ ಸಂಚಾರ ಮಾರ್ಗ ಬದಲಿಸಿದೆ.

3 ದಿನ ಬದಲಿ ಮಾರ್ಗ: ದಶಪಥ ಹೆದ್ದಾರಿಗೆ ಹಾನಿಯುಂಟಾಗಿದ್ದರಿಂದ ಕೆಲವರು ಗ್ರಾಮೀಣ ರಸ್ತೆಗಳಲ್ಲಿ ಸಂಚಾರ ಆರಂಭಿಸಿದ್ದರು. ಆದರೆ, ಹೆಚ್ಚು ಭಾರ ತಾಳಿಕೆ ಶಕ್ತಿ ಇರದ ಕಿರು ಸೇತುವೆಗಳು ಕೂಡ ಕುಸಿದ ಪರಿಣಾಮವಾಗಿ ಬೆಂಗಳೂರು- ಮೈಸೂರು ವಾಹನ ಸಂಚಾರ ಮಾರ್ಗವನ್ನು ಬದಲಿಸಲಾಯಿತು. ಇನ್ನು 3 ದಿನಗಳ ಕಾಲ ಮೈಸೂರು- ಕನಕಪುರ ಮಾರ್ಗವಾಗಿ ಬೆಂಗಳೂರಿಗೆ ಹಾಗೂ ಬೆಂಗಳೂರು - ಕುಣಿಗಲ್ ಮಾರ್ಗವಾಗಿ ಮೈಸೂರಿಗೆ ತೆರಳುವಂತೆ ರಾಮನಗರ ಜಿಲ್ಲಾ ಪೊಲೀಸರು ಎರಡು ಬದಲಿ ಮಾರ್ಗಗಳನ್ನು ಸೂಚಿಸಿದ್ದಾರೆ. ಹೆದ್ದಾರಿ ಪ್ರಾಧಿಕಾರದಿಂದ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.

ತುಂಬಿ ಹರಿದ ಅರ್ಕಾವತಿ

ಹಲವು ವರ್ಷಗಳಿಂದ ಸಹಜ ಸ್ಥಿತಿಯಲ್ಲಿದ್ದ ಅರ್ಕಾವತಿ ನದಿ ಈ ವರ್ಷ ಒಂದು ತಿಂಗಳ ಅಂತರದಲ್ಲಿ 2 ಬಾರಿ ತುಂಬಿ ಹರಿದಿದೆ. ಇಕ್ಕೆಲಗಳ ಕೆಲ ಕೃಷಿ ಭೂಮಿ ಜಲಾವೃತಗೊಂಡಿದೆ. ಇದರೊಂದಿಗೆ ಕಣ್ವ ಜಲಾಶಯದಿಂದಲೂ ನೀರು ಹೊರ ಬಿಡುತ್ತಿರುವ ಕಾರಣ ಕಣ್ವ ಹೊಳೆಯೂ ತುಂಬಿ ಹರಿಯುತ್ತಿದೆ. ರಾಮನಗರ ಮತ್ತು ಚನ್ನಪಟ್ಟಣದ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮಂಡ್ಯ, ರಾಮನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ಅಂದಾಜು 20ಕ್ಕೂ ಅಧಿಕ ಕೆರೆಗಳು ಶುಕ್ರವಾರ ರಾತ್ರಿಯ ಮಳೆಗೆ ತುಂಬಿ ಕೋಡಿ ಬಿದ್ದಿವೆ.

ಕಿಲೋಮೀಟರ್​ಗಟ್ಟಲೆ ನಿಂತ ವಾಹನ

ಕುಂಬಳಗೂಡು ಬಳಿಯ ರಾಜರಾಜೇಶ್ವರಿ ಆಸ್ಪತ್ರೆ, ಕ್ರೖೆಸ್ಟ್ ಕಾಲೇಜು, ನೈಸ್ ರಸ್ತೆ ಬಳಿಯಲ್ಲಿಯೂ ಭಾರೀ ಪ್ರಮಾಣದಲ್ಲಿ ರಸ್ತೆಗೆ ನೀರು ನಿಂತಿದ್ದ ಪರಿಣಾಮ ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಯಿತು. ರಸ್ತೆಗಳಲ್ಲಿ 2-3 ಅಡಿ ನೀರು ನಿಂತಿದ್ದರಿಂದ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಕಾಲೇಜಿಗೆ ತಲುಪುವುದಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ, ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.

ಕೋಟ್ಯಂತರ ರೂ. ಬೆಳೆ ನಷ್ಟ

ಮಂಡ್ಯ ಜಿಲ್ಲೆಯ ಗುಡಿಗೇನಹಳ್ಳಿ, ದೊಡ್ಡಗರುಡನಹಳ್ಳಿ, ಮಾದಾಪುರದೊಡ್ಡಿ, ಗಂಟಗೌಡನಹಳ್ಳಿ, ದ್ಯಾಪಸಂದ್ರ, ಮಾಯಪ್ಪನಹಳ್ಳಿ, ಮಾರಂಗೆರೆ, ಮೇಳಾಪುರ ಗ್ರಾಮದಲ್ಲಿ ಭತ್ತದ ಗದ್ದೆಗಳು, ತರಕಾರಿ ಬೆಳೆಗಳು, ಜೋಳ ಸೇರಿ ಅನೇಕ ಬೆಳೆಗಳು ಹಾನಿಗೀಡಾಗಿವೆ. ಇನ್ನು ಹಾಸನ ಜಿಲ್ಲೆಯಲ್ಲಿ ಚೆನ್ನಕಟ್ಟೆ, ನುಗ್ಗೇಹಳ್ಳಿ, ಅತ್ತಿಹಳ್ಳಿ, ಹುಲಿಕೆರೆ, ಬಾಗೂರು, ಹಿರೀಸಾವೆ ಗ್ರಾಮಗಳಲ್ಲಿ ಗದ್ದೆ, ತೋಟಗಳಲ್ಲಿನ ಬೆಳೆಗಳು ಹಾಳಾಗಿವೆ. ರಾಮನಗರ ಜಿಲ್ಲೆಯ ಬಿಡದಿ, ಚನ್ನಪಟ್ಟಣ ಸುತ್ತಲಿನ ಬಹುತೇಕ ಗ್ರಾಮಗಳಲ್ಲಿ ಮಳೆ ನೀರು ನುಗ್ಗಿದ ಪರಿಣಾಮ ಜಮೀನುಗಳಲ್ಲಿನ ಬೆಳೆ ನಷ್ಟವಾಗಿದೆ.

ಯಾವ ಮಾರ್ಗದಲ್ಲಿ ಸಂಪರ್ಕ ಕಡಿತ?

  • ಬೆಂಗಳೂರು- ರಾಮನಗರ
  • ಗುಡಿಗೇನಹಳ್ಳಿ-ಗಂಟಗೌಡನಹಳ್ಳಿ
  • ದೊಡ್ಡಗರುಡನಹಳ್ಳಿ-ಶಿವಳ್ಳಿ
  • ತಿಪ್ಪೂರು-ನಿಡಘಟ್ಟ
  • ನುಗ್ಗೇಹಳ್ಳಿ-ಬಾಗೂರು
  • ಕೇತುಗಾನಹಳ್ಳಿ- ವಾಜರಹಳ್ಳಿ

ರಾಮನಗರದಲ್ಲ ಮನೆಗಳು ಜಲಾವೃತ

ರಾಮನಗರ ಜಿಲ್ಲೆ ತಿಟ್ಟಮಾರನಹಳ್ಳಿ ರಾಮಮ್ಮನ ಕೆರೆ ಒಡೆದು ಗ್ರಾಮದ 40ಕ್ಕೂ ಹೆಚ್ಚಿನ ಮನೆಗಳು ಜಲಾವೃತಗೊಂಡಿವೆ. ರಾತ್ರಿ 2 ಗಂಟೆ ಸುಮಾರಿನಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ನಿದ್ರೆಯಲ್ಲಿದ್ದ ಜನತೆ ಜೀವ ಉಳಿಸಿಕೊಳ್ಳಲು ಬರಿಗೈಯಲ್ಲಿ ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಹೆದ್ದಾರಿಯ ಬೈಪಾಸ್ ರಸ್ತೆ ನಿಮಾಣ ಕಾಮಗಾರಿಯ ಹಿನ್ನೆಲೆಯಲ್ಲಿ ಕೆರೆ ಕೋಡಿಗೆ ಹಾನಿ ಮಾಡಿದ್ದರಿಂದ ಈ ರೀತಿ ಅವಾಂತರ ಸೃಷ್ಟಿಯಾಗಿದೆ. ತಾಲೂಕಿನ ಕೋಲೂರಿನ ಗಾಂಧಿ ಗ್ರಾಮ ಜಲಾವೃತವಾಗಿ 40ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ನೀರಿನ ರಭಸಕ್ಕೆ ಜಾನುವಾರುಗಳು ಕೊಚ್ಚಿ ಹೋಗಿವೆ. ಕಣ್ವ ನದಿ ಪಾತ್ರದಲ್ಲಿ ಅಪಾರ ನಷ್ಟ ಉಂಟಾಗಿದೆ.

ದಶಪಥ ಹೆದ್ದಾರಿ ಅಧ್ವಾನ ಅನಾವರಣ

ಬೆಂಗಳೂರು- ಮೈಸೂರು ದಶಪಥದ ಸರ್ವಿಸ್ ರಸ್ತೆಗಳು ಮಳೆ ನೀರಿಗೆ ಕೊಚ್ಚಿ ಹೋಗಿವೆ. ಅಂಡರ್​ಪಾಸ್​ಗಳು ನೀರು ತುಂಬಿಕೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಕಣಮಿಣಿಕೆ ಮತ್ತು ಶೇಷಗಿರಿಹಳ್ಳಿಯ 2 ಕೆರೆಗಳ ನಡುವೆ ಹೆದ್ದಾರಿ ನಿರ್ಮಾಣ ಮಾಡಿದ್ದರಿಂದಲೇ ದೊಡ್ಡ ಮಟ್ಟದ ಹಾನಿಯುಂಟಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಮಳೆಯಿಂದಾಗಿ ಹೆದ್ದಾರಿ ನಿರ್ವಣದಲ್ಲಿನ ಹುಳುಕು ಬಯಲಿಗೆ ಬಂದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net