ಜಾತ್ರೆಗಳ ಅಬ್ಬರ, ಎಲ್ಲೆಲ್ಲೂ ಟ್ರಾಫಿಕ್ ಜಾಮ್! ; ತುಮಕೂರು ಕಡೆಗೆ ವಾಹನದಟ್ಟಣೆ

26 Nela ph 01 Trapic Jam
Published on

ನೆಲಮಂಗಲ: ಬೇಸಿಗೆಯ ಬಿರುಬಿಸಿಲಿನ ನಡುವೆಯೂ ತಾಲೂಕಿನಾದ್ಯಂತ ಊರ ಹಬ್ಬ, ಜಾತ್ರೆಗಳ ಅಬ್ಬರ ಜೋರಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಊರ ಹಬ್ಬ, ಜಾತ್ರಾ ಮಹೋತ್ಸವಗಳು ಗ್ರಾಮೀಣ ಭಾಗದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಸಿದೆ.

ನೆಲಮಂಗಲ-ತುಮಕೂರು ಮಾರ್ಗದಲ್ಲಿರುವ ಬೊಮ್ಮನಹಳ್ಳಿ, ವೀರನಂಜಿಪುರ, ಬೂದಿಹಾಳ್, ತೊಣಚಿನಕುಪ್ಪೆ, ಟಿ. ಬೇಗೂರು ಸೇರಿ ಹಲವು ಗ್ರಾಮಗಳು ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿವೆ. ಅಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಊರ ಹಬ್ಬ, ಜಾತ್ರೆಯ ಬಿಸಿ ಹೆದ್ದಾರಿಯಲ್ಲಿನ ವಾಹನ ಸವಾರರಿಗೂ ತಟ್ಟಿದೆ. ಮಂಗಳವಾರ ಮಧ್ಯಾಹ್ನ 1 ಗಂಟೆಯಿಂದ ಬೊಮ್ಮನಹಳ್ಳಿ ಬಳಿಯ ಜಾಸ್ ಟೋಲ್ ಗೇಟ್‌ನಿಂದ ಆರಂಭವಾದ ವಾಹನ ದಟ್ಟಣೆ 10 ಕಿಮೀ ದೂರಕ್ಕೂ ವ್ಯಾಪಿಸಿತ್ತು. ಇದರಿಂದಾಗಿ ತುಮಕೂರು ಕಡೆಗೆ ಸಂಚರಿಸುತ್ತಿದ್ದ ವಾಹನಸವಾರರು ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರಿತಪಿಸಬೇಕಾಯಿತು.

ಚಾಲಕರ ನಡುವೆ ಘರ್ಷಣೆ:ಊರ ಜಾತ್ರೆಗಳಿಂದಾಗಿ ತುಮಕೂರು ಕಡೆಗಿನ ರಸ್ತೆಯಲ್ಲಿ ಬಾರಿ ಪ್ರಮಾಣದ ವಾಹನದಟ್ಟಣೆ ಉಂಟಾಗಿತ್ತು. ಇದರಿಂದ ಬೇಸತ್ತ ಕೆಲ ವಾಹನಸವಾರರು ತುಮಕೂರು ಕಡೆಯಿಂದ ಬರುತ್ತಿದ್ದ ವಾಹನಗಳ ಎದುರಾಗಿ ಸಂಚರಿಸಲು ಮುಂದಾದರು. ಇದು ವಾಹನಚಾಲಕರ ನಡುವೆ ಘರ್ಷಣೆಗೂ ಕಾರಣವಾಯಿತು.

ಜನರ ಹಿಡಿಶಾಪ:ತುಮಕೂರು ಮಾರ್ಗದ ಇಕ್ಕೆಲಗಳಲ್ಲಿ ಮಂಗಳವಾರ ಊರ ಹಬ್ಬ, ಜಾತ್ರಾ ಮಹೋತ್ಸವಗಳಿರುವುದನ್ನು ತಿಳಿದಿದ್ದ ಗ್ರಾಮಾಂತರ ಪೊಲೀಸ್ ಠಾಣೆ, ಸಂಚಾರ ಠಾಣೆ ಪೊಲೀಸರು ಸರಾಗ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ವಾಹನದಟ್ಟಣೆ ಉಂಟಾಗಲು ಇದು ಕಾರಣವಾಗಿತ್ತು. ಇದರಿಂದಾಗಿ ಸಾರ್ವಜನಿಕರು ಪೊಲೀಸರಿಗೆ ಹಿಡಿಶಾಪ ಹಾಕಿದರು.

ಆಂಬುಲೆನ್ಸ್ ಸಂಚಾರಕ್ಕೂ ಅಡ್ಡಿ:ಊರ ಹಬ್ಬ, ಜಾತ್ರೆಗಳಿಗೆ ದೂರದ ಊರುಗಳಿಂದ ಒಮ್ಮೆಲೆ ಬಂದ ಜನರು ವಾಹನಗಳನ್ನು ದಾರಿಯುದ್ದಕ್ಕೂ ನಿಲುಗಡೆ ಮಾಡಿದ್ದರು. ಇದು ಕೂಡ ಹೆದ್ದಾರಿಯಲ್ಲಿನ ವಾಹನಗಳ ಆಮೆಗತಿ ಸಂಚಾರಕ್ಕೆ ಕಾರಣವಾಯಿತು. ದಾಬಸ್‌ಪೇಟೆ ಕೈಗಾರಿಕಾ ಪ್ರದೇಶಗಳಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಿವಿಧ ಕಾರ್ಖಾನೆಗಳ ವಾಹನಗಳು ಕೂಡ ಟ್ರಾಫಿಕ್‌ಜಾಮ್‌ನಲ್ಲಿ ಸಿಲುಕಿದ್ದರಿಂದ, ಕಾರ್ಮಿಕರನ್ನು ಎರಡನೇ ಪಾಳಿಯ ಸಮಯಕ್ಕೆ ಸರಿಯಾಗಿ ಕೈಗಾರಿಕೆಗಳನ್ನು ತುಲುಪಿಸಲು ಸಾಧ್ಯವಾಗಲಿಲ್ಲ. ಬೆಂಗಳೂರಿನ ಆಸ್ಪತ್ರೆಗಳಿಗೆ ತೆರಳುತ್ತಿದ್ದ ಆಂಬುಲೆನ್ಸ್ ಸಂಚಾರಕ್ಕೂ ಅಡಚಣೆ ಉಂಟಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net