

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಾಳುಬೆಟ್ಟ ಮಾರ್ಗದ ಆನೆತಲೆ ದಿಂಬದ ಬಳಿ ಭಾನುವಾರ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನದಟ್ಟಣೆ ಏರ್ಪಟ್ಟಿದ್ದರಿಂದ ಭಕ್ತರು ಕಿರಿಕಿರಿ ಅನುಭವಿಸಿದರು.
ಮಹಾಲಯ ಅಮಾವಾಸ್ಯೆ ಹಿನ್ನೆಲೆ ಭಾನುವಾರ ಮ.ಬೆಟ್ಟಕ್ಕೆ ಚಾ.ನಗರ ಸೇರಿದಂತೆ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಚನ್ನಪಟ್ಟಣ ಹಾಗೂ ಇನ್ನಿತರೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ವಿವಿಧ ಘಟಕಗಳಿಂದ ಸುಮಾರು 300 ಬಸ್ ಸೌಕರ್ಯ ಒದಗಿಸಲಾಗಿತ್ತು. ಜತೆಗೆ ಸರ್ಕಾರಿ ರಜಾ ದಿನವಾದ್ದರಿಂದ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಕಾರು, ಟೆಂಪೋ ಟ್ರಾವೆಲರ್ ಹಾಗೂ ಮಿನಿ ಬಸ್ ಮೂಲಕ ಕುಟುಂಬಸ್ಥರೊಂದಿಗೆ ಆಗಮಿಸಿದ್ದರು. ಹಾಗಾಗಿ ಭಾನುವಾರ ಈ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಈ ಹಿನ್ನಲೆಯಲ್ಲಿ ಜಾತ್ರಾ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಆನೆತಲೆ ದಿಂಬದ ಬಳಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಆದರೆ ಮಧ್ಯಾಹ್ನ 12.30ರ ವೇಳೆಯಲ್ಲಿ ಕೊಳ್ಳೇಗಾಲ ಹಾಗೂ ಮ.ಬೆಟ್ಟದ ಕಡೆಯಿಂದ ಹೆಚ್ಚಿನ ವಾಹನಗಳು ಸಂಚರಿಸಿದ್ದರಿಂದ ಕಿರಿದಾದ ರಸ್ತೆಯನ್ನು ಹೊಂದಿರುವ ಆನೆತಲೆ ದಿಂಬದ ಬಳಿ ವಾಹನ ದಟ್ಟಣೆ ಕಂಡು ಬಂತು. ಪರಿಣಾಮ ರಸ್ತೆಯ ಆಚೀಚೆ ಸುಮಾರು 2 ಕಿ.ಮೀವರೆಗೆ ಒಂದು ಗಂಟೆಗೂ ಹೆಚ್ಚು ಕಾಲ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಭಕ್ತರು ಕಿರಿಕಿರಿ ಅನುಭವಿಸುವಂತಾಯಿತು. ಸುಗಮ ಸಂಚಾರಕ್ಕೆ ಪೊಲೀಸ್ ಸಿಬ್ಬಂದಿ ಹರಸಾಹಸ ಪಡುವಂತಾಯಿತು.
ಸುದ್ದಿ ತಿಳಿದು ಇನ್‌ಸ್ಪೆಕ್ಟರ್‌ಗಳಾದ ಮ.ಬೆಟ್ಟದ ಜಗದೀಶ್, ರಾಮಾಪುರದ ಚಿಕ್ಕರಾಜಶೆಟ್ಟಿ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ವಾಹನ ದಟ್ಟಣೆ ನಿಯಂತ್ರಿಸುವುದರ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.
ಮ.ಬೆಟ್ಟಕ್ಕೆ ಜಾತ್ರಾ ವೇಳೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹೆಚ್ಚಿನ ವಾಹನಗಳು ಸಂಚರಿಸುತ್ತವೆ. ಆದರೆ ಈ ಮಾರ್ಗದ ಆನೆತಲೆ ದಿಂಬದ ಬಳಿ ರಸ್ತೆಯು ಕಿರಿದಾಗಿರುವುದರಿಂದ ವಾಹನ ದಟ್ಟಣೆಯಿಂದಾಗಿ ಆಗಾಗ್ಗೆ ಸಂಚಾರ ಸಿಕ್ಕು ಆಗುತ್ತದೆ. ಇದರಿಂದ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಆನೆತಲೆ ದಿಂಬದ ಬಳಿ ರಸ್ತೆ ವಿಸ್ತರಣೆ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಭಕ್ತರಿಂದ ಒತ್ತಾಯ ಬಂತು.