

ಧನಂಜಯ ಗುರುಪುರ
ಲಾಕ್‌ಡೌನ್ ಅವಧಿ ಸಡಿಲಗೊಂಡು ಮಧ್ಯಾಹ್ನ ತನಕ ಖರೀದಿ, ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿರುವಾಗಲೇ ಮಂಗಳೂರು ನಗರ ಹಾಗೂ ಗುರುಪುರ ಪ್ರದೇಶದಲ್ಲಿ ವಾಹನ ದಟ್ಟಣೆ ಕಂಡುಬಂದಿದ್ದು ಪೂರ್ತಿ ಲಾಕ್‌ಡೌನ್ ಸಡಿಲಗೊಂಡು ವಾಹನಗಳು, ಖಾಸಗಿ ಬಸ್‌ಗಳು ರಸ್ತೆಗಿಳಿದಾಗ ಪರಿಸ್ಥಿತಿ ಹೇಗಿರಬಹುದು ಎಂಬ ಜಿಜ್ಞಾಸೆ ಹುಟ್ಟುಹಾಕಿದೆ. ಮಂಗಳೂರು ನಗರದಲ್ಲಿ ಅರೆಬರೆ ರಸ್ತೆ ಕಾಮಗಾರಿಯಿಂದ, ಮರವೂರು ಸೇತುವೆ ಕುಸಿತದಿಂದ ಗುರುಪುರದಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು ಜನ ಕಂಗಾಲಾಗುವಂತೆ ಮಾಡಿದೆ.
ಮರವೂರು ಸೇತುವೆ ಕುಸಿತದ ಬಳಿಕ ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ(169) ಗುರುಪುರ, ಕೈಕಂಬ ಮತ್ತು ಮಂಗಳೂರು ಮಧ್ಯೆ ವಾಹನ ಸಂಚಾರ ಹೆಚ್ಚಾಗಿದ್ದು, ಕಡಿದಾದ ತಿರುವುಗಳಲ್ಲಿ ಆಗಾಗ್ಗೆ ಟ್ರಾಫಿಕ್‌ಜಾಂ ಉಂಟಾಗುತ್ತಿದೆ. ಇದರಿಂದ ಸೆಮಿ ಲಾಕ್‌ಡೌನ್ ವೇಳೆಯೂ ವಾಹನಗಳು ಸಾಲುದ್ದ ನಿಲ್ಲುವ ದೃಶ್ಯಗಳು ಸಾಮಾನ್ಯವಾಗತೊಡಗಿವೆ. ಲಾಕ್‌ಡೌನ್ ಸಂಪೂರ್ಣ ತೆರವಾದ ಬಳಿಕ ಹೆದ್ದಾರಿಯಲ್ಲಿ ವಾಹನ ದಟ್ಟಣೆ ನಾಲ್ಕು ಪಟ್ಟು ಹೆಚ್ಚಾಗಲಿದೆ. ಬಜ್ಪೆ-ಮರವೂರು ಮೂಲಕ ಮಂಗಳೂರಿಗೆ ಸಂಚರಿಸುವ ಬಹುತೇಕ ಬಸ್‌ಗಳ ಸಹಿತ ವಾಹನಗಳು ಗುರುಪುರವಾಗಿಯೇ ಮಂಗಳೂರು ಸೇರಲಿವೆ. ಇದರಿಂದ ಮತ್ತಷ್ಟು ದಟ್ಟಣೆ ಖಚಿತ.
ಅಪಘಾತ ವಲಯ: ರಾಷ್ಟ್ರೀಯ ಹೆದ್ದಾರಿಯ ಗುರುಪುರ, ಪರಾರಿ, ಕುಡುಪು ಮತ್ತು ಕುಲಶೇಖರದವರೆಗೆ ಅನೇಕ ಕಡಿದಾದ ತಿರುವುಗಳಿದ್ದು, ವಾಹನ ಸಂಚಾರ ಹೆಚ್ಚಿದರೆ ಈ ಪ್ರದೇಶಗಳು ಅಪಘಾತ ವಲಯವಾಗಿ ಮಾರ್ಪಡುವ ಸಾಧ್ಯತೆ ಇದೆ. ಇಂಥ ತಿರುವುಗಳಲ್ಲಿ ಎಚ್ಚರಿಕೆ ಫಲಕ ಮತ್ತು ಬ್ಯಾರಿಕೇಡ್ ಅಳವಡಿಕೆ ಕಡ್ಡಾಯಗೊಳಿಸಬೇಕು ಎಂದು ಜನ ಆಗ್ರಹಿಸಿದ್ದಾರೆ. ಗುರುಪುರ ಸೇತುವೆಗೆ ಹೊಂದಿಕೊಂಡಿರುವ ಅತ್ಯಂತ ಕಡಿದಾದ ಇಳಿಜಾರು ತಿರುವಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಮಂಗಳೂರು ಡಿವಿಜನ್ ‘ರಂಬಲ್ ಸ್ಟ್ರೀಪ್’(ಸಣ್ಣಸಣ್ಣ ಹಂಪ್ಸ್) ಅಳವಡಿಸುವುದಾಗಿ ಕುಕ್ಕುದಕಟ್ಟೆಯ ಜನರಿಗೆ ಲಿಖಿತ ಭರವಸೆ ನೀಡಿತ್ತು. ಇದಾಗಿ ಎಂಟು ತಿಂಗಳಾದರೂ ಡಿವಿಜನ್‌ನಿಂದ ಯಾವುದೇ ಕೆಲಸ ನಡೆದಿಲ್ಲ.
ಮರವೂರಿನಲ್ಲಿ ಹೊಸ ಸೇತುವೆ ಆಗುವ ತನಕ (ಸುಮಾರು 19 -20 ತಿಂಗಳು) ಆ ಭಾಗದ ಹೆಚ್ಚಿನ ವಾಹನಗಳು ಈ ಹೆದ್ದಾರಿಯನ್ನೇ ಅವಲಂಬಿಸಬೇಕು. ಗುರುಪುರ ಸೇತುವೆ ಬಳಿ ರಂಬಲ್ ಸ್ಟ್ರೀಪ್, ತಿರುವುಗಳಲ್ಲಿ ಬ್ಯಾರಿಕೇಡ್‌ಗಳು, ಎಚ್ಚರಿಕಾ ಫಲಕಗಳು ಬೀಳದಿದ್ದರೆ ಇವುಗಳೆಲ್ಲ ಅಪಘಾತ ವಲಯವಾಗುವುದರಲ್ಲಿ ಸಂದೇಹವಿಲ್ಲ.
ತಿರುವುಗಳಿರುವ ಹೆದ್ದಾರಿಯಲ್ಲಿ ಎಚ್ಚರಿಕಾ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ವಿಷಯದ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು ಡಿವಿಜನ್‌ನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರ ಕ್ರಮಕ್ಕೆ ಪ್ರಯತ್ನಿಸಲಾಗುವುದು.
ಮುರುಗೇಶ್ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಹಾಯಕ ಇಂಜಿನಿಯರ್