

ಆಲೂರು: ಪಟ್ಟಣದ ಮುಖ್ಯ ರಸ್ತೆಯ ಬದಿಯಲ್ಲಿ ಪ್ರತಿ ಬುಧವಾರ ನಡೆಯುವ ವಾರದ ಸಂತೆಯಿಂದಾಗಿ ರಸ್ತೆಯಲ್ಲಿ ಪದೇ ಪದೆ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಪಟ್ಟಣದ ಕೊನೇಪೇಟೆಯಿಂದ ಕೆಇಬಿ ವೃತ್ತದವರೆಗೆ ಸರ್ಕಾರಿ ಆಸತ್ರೆ, ಖಾಸಗಿ ಆಸ್ಪತ್ರೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ತಾಲೂಕು ಕಚೇರಿ, ಪೊಲೀಸ್ ಸ್ಟೇಷನ್, ಪಶುಸಂಗೋಪನೆ ಇಲಾಖೆ, ಪಿಡಬ್ಲುೃಡಿ ಇಲಾಖೆ, ಪೋಸ್ಟ್ ಆಫೀಸ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಪಟ್ಟಣ ಪಂಚಾಯಿತಿ ಕಚೇರಿ ಹಾಗೂ ವಾಣಿಜ್ಯ ಮಳಿಗೆಗಳಿವೆ. ಹೀಗಾಗಿ ಈ ವ್ಯಾಪ್ತಿಯಲ್ಲಿ ಸದಾ ವಾಹನ ದಟ್ಟಣೆ ಹಾಗೂ ಜನಸಂದಣಿ ಹೆಚ್ಚಿರುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರು ಸ್ವಂತ ವಾಹನಗಳನ್ನು ಬಳಸುತ್ತಿದ್ದು, ಟ್ರಾಫಿಕ್ ಸಮಸ್ಯೆ ಅನುಭವಿಸುವುದರ ಜತೆಗೆ ಅಪಘಾತಗಳೂ ಹೆಚ್ಚುತ್ತಿವೆ.
ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಇಲ್ಲಿ ದಶಕಗಳಿಂದ ಸಂತೆ ನಡೆಯುತ್ತಿದೆ. ಹತ್ತಾರು ಗ್ರಾಮಗಳ ಜನರು ಬಂದು ಇಲ್ಲಿ ವಸ್ತುಗಳನ್ನು ಖರೀದಿಸುತ್ತಾರೆ. ಅನೇಕರು ಆಲೂರು-ಸಕಲೇಶಪುರ ಮುಖ್ಯ ರಸ್ತೆ ಬದಿಯಲ್ಲೇ ಸರಕು -ಸಾಮಾನು ಇಟ್ಟುಕೊಂಡು ವ್ಯಾಪಾರ ಮಾಡುತ್ತಾರೆ. ಪರಿಣಾಮ ಕಿರಿದಾದ ರಸ್ತೆಯಲ್ಲಿ ವಾಹನಗಳು ಮುಂದೆ ಸಾಗಲು ಸ್ಥಳವಿಲ್ಲದೆ ಕೆಲ ಹೊತ್ತು ನಿಂತು ಮುಂದೆ ಸಾಗಬೇಕಾದ ಪರಿಸ್ಥಿತಿ ಇದೆ.
ಇನ್ನು ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿಗಳು ಇರುವುದರಿಂದ ಹೂ-ಹಣ್ಣು, ಸೊಪ್ಪು-ತರಕಾರಿ ಮಾರಾಟ, ಫಾಸ್ಟ್‌ಫುಡ್ ಗಾಡಿಗಳು ನಿಲ್ಲುವುದರಿಂದ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲ್ಲಿಸಲು ಪರದಾಡುವ ಪರಿಸ್ಥಿತಿ ಇದೆ. ಜತೆಗೆ ಕಷ್ಟಪಟ್ಟು ವಾಹನಗಳು ಸಂಚರಿಸಬೇಕಿದೆ. ಈ ರಸ್ತೆಯಲ್ಲಿ ಮಿನಿಟ್ರಕ್, ಲಾರಿ, ಬಸ್ ಬಂತೆಂದರೆ ಕೆಲ ನಿಮಿಷ ಸಂಚಾರ ದಟ್ಟಣೆ ಎದರಾಗುತ್ತದೆ. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನಗಳು ಆಟೋ, ಕಾರು, ವ್ಯಾನ್‌ಗಳು ಕೆಲ ಹೊತ್ತು ಕಾಯಲೇಬೇಕು. ಅನೇಕ ವರ್ಷಗಳಿಂದ ಈ ಸಮಸ್ಯೆಗೆ ಪರಿಹಾರವಿಲ್ಲದೆ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ತಾಲೂಕು ಆಡಳಿತ ಮತ್ತು ಪಟ್ಟಣ ಪಂಚಾಯಿತಿ ಶಾಶ್ವತ ಮಾರುಕಟ್ಟೆ ನಿರ್ಮಿಸಿ ಕೊಡದ ಕಾರಣ ವ್ಯಾಪಾರಸ್ಥರು ರಸ್ತೆಬದಿಗೆ ಬಂದು ಅಂಗಡಿ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಸುಸಜ್ಜಿತ ಮಾರುಕಟ್ಟೆ ನಿರ್ಮಿಸಿ ವ್ಯಾಪಾರ ನಡೆಸಲು ಸ್ಥಳೀಯ ಪಂಚಾಯಿತಿ ಅಧಿಕಾರಿಗಳಿಗೆ ಮಾಡಿದ ಮನವಿ ಪ್ರಯೋಜನವಾಗಿಲ್ಲ.
ಸಂತೆಯಲ್ಲಿ ಖರೀದಿ ಮಾಡಲು ಬರುವವರು ತಮ್ಮ ವಾಹನಗಳನ್ನು ಸರ್ಕಾರಿ ಆಸ್ಪತ್ರೆ ಎದುರು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುವುದರಿಂದ ಮತ್ತೊಂದು ರೀತೀಯ ಸಮಸ್ಯೆ ಎದುರಾಗುತ್ತಿದೆ. ಆಸ್ಪತ್ರೆಯ ಗೇಟ್ ಎದುರು ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸಿ ಹೋಗುವುದರಿಂದ ಕೆಲವೊಮ್ಮೆ ಆಸ್ಪತ್ರೆಯ ಒಳ ಹಾಗೂ ಹೊರಗೆ ಹೋಗಲು ಅಡಚಣೆ ಉಂಟಾಗುತ್ತಿದೆ. ಸ್ಥಳೀಯ ಆಡಳಿತ ಕಣ್ಮುಚ್ಚಿ ಕುಳಿತಂತಿದೆ.
ಆಲೂರು ಪಟ್ಟಣದಲ್ಲಿ ಪೊಲೀಸ್ ಠಾಣೆಯಿದ್ದು, ತಾಲೂಕನ್ನೇ ನೋಡಿಕೊಳ್ಳಬೇಕಾದ ಕಾರ್ಯದೊತ್ತಡ ಪೊಲೀಸರಿಗಿದೆ. ಪ್ರತ್ಯೇಕ ಟ್ರಾಫಿಕ್ ಪೊಲೀಸ್ ಠಾಣೆ ಇಲ್ಲದಿರುವುದು ಇಷ್ಟೆಲ್ಲ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಯುವಕರು ಬೈಕ್ ವ್ಹೀಲಿಂಗ್, ಸೀಟ್ ಬೆಲ್ಟ್ ಹಾಕಿಕೊಳ್ಳದೆ ಅಡ್ಡಾದಿಡ್ಡಿ ವಾಹನ ಚಲಾಯಿಸುತ್ತಿರುವುದರಿಂದ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ವಾರದ ಸಂತೆ ಪ್ರತಿ ಬುಧವಾರ ಪಟ್ಟಣದ ಮುಖ್ಯ ರಸ್ತೆಯಲ್ಲಿಯೇ ನಡೆಯುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಅವಘಡ ಸಂಭವಿಸುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತು ಕ್ರಮ ವಹಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಸಂತೆಯ ದಿನ ಆಗುತ್ತಿರುವ ಸಮಸ್ಯೆ ತಪ್ಪಿಸುವ ದೃಷ್ಟಿಯಿಂದ ಠಾಣೆಯಿಂದ ಅಪಘಾತ ತಡೆ ಹಾಗೂ ಸುರಕ್ಷಿತ ಸಂಚಾರ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳ ಸಹಕಾರ ಪಡೆದು ಪಾರ್ಕಿಂಗ್‌ಗಾಗಿ ಸ್ಥಳ ಗುರುತಿಸುವ ಕೆಲಸ ನಡೆಯುತ್ತಿದೆ. ಈವರೆಗೂ ಸುಮಾರು 250 ನೋ ಪಾರ್ಕಿಂಗ್ ಕೇಸುಗಳನ್ನು ದಾಖಲಿಸಿ ನ್ಯಾಯಾಲಯದಲ್ಲಿ ದಂಡ ಕಟ್ಟಿಸಲಾಗಿದೆ. ವಾರದ ಸಂತೆಯನ್ನು ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಂಡರೆ ಆಲೂರಿನಲ್ಲಿ ಟ್ರಾಫಿಕ್ ಸಮಸ್ಯೆ ಇರುವುದಿಲ್ಲ.
ಗಂಗಾಧರ್, ಪೊಲೀಸ್ ಇನ್‌ಸ್ಪೆಕ್ಟರ್
ರಸ್ತೆ ಜಾಗವನ್ನು ಅತಿಕ್ರಮಣ ಮಾಡಿರುವವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಒತ್ತುವರಿ ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಗುವುದು. ಪಟ್ಟಣದಲ್ಲಿ ತಲೆದೋರಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಕೊಡಲಾಗುವುದು.
ತಾಹೇರಾ ಬೇಗಂ ಅಧ್ಯಕ್ಷೆ, ಪಟ್ಟಣ ಪಂಚಾಯಿತಿ
ಆಲೂರು ಪಟ್ಟಣ ಪಂಚಾಯಿತಿಗೆ ಸೇರಿದ ವಾರ್ಡ್ ನಂ 4 ರಲ್ಲಿ ಸುಮಾರು 1 ಎಕರೆ ಜಾಗವಿದೆ. ಆ ಸ್ಥಳವು ಯಾವುದೇ ಉಪಯೋಗಕ್ಕೂ ಬಾರದ ಕಾರಣ ಆ ಸ್ಥಳದಲ್ಲಿ ಸಾರ್ವಜನಿಕರು ನಿತ್ಯ ಕಸ ಇತರ ವಸ್ತುಗಳನ್ನು ಎಸೆಯುತ್ತಿರುವುದರಿಂದ ಅನೈರ್ಮಲ್ಯಕ್ಕೆ ಕಾರಣವಾಗಿದೆ. ಆ ಸ್ಥಳದಲ್ಲಿ ಸಂತೆ ನಡೆಸಿದರೆ ದಶಕಗಳಿಂದ ತಲೆದೋರಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಹೊರಕಬಹುದು.
ಹರೀಶ್ ಸದಸ್ಯ, ಪಟ್ಟಣ ಪಂಚಾಯಿತಿ
ಚೌಲ್ಗೆರೆ ಗ್ರಾಮದ ಬಳಿ ಟೋಲ್ ನಿರ್ಮಾಣವಾಗಿದ್ದು, ಕೆಲ ವಾಹನಗಳು ಬೈಪಾಸ್‌ನಲ್ಲಿ ಹಣ ಕಟ್ಟಿ ಹೋಗುವ ಬದಲು ಆಲೂರಿನ ಒಳಗಡೆ ಹೋಗುತ್ತಿವೆ. ಟೋಲ್ ಕಟ್ಟುವುದರಿಂದ ತಪ್ಪಿಸಿಕೊಳ್ಳಬೇಕೆಂಬ ಉದ್ದೇಶದಿಂದ ಟ್ಯಾಂಕರ್ ಗಾಡಿಗಳು ಸೇರಿದಂತೆ ಇತರ ವಾಹನಗಳು ಆಲೂರಿನಲ್ಲಿ ಸಂಚರಿಸುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಸಂಬಂಪಟ್ಟವರು ಈ ಬಗ್ಗೆ ಗಮನಹರಿಸಿ ಕ್ರಮ ವಹಿಸಬೇಕು.
ನಟರಾಜ್ ತಾಲೂಕು ಅಧ್ಯಕ್ಷ , ಕರವೇ