ಹದಗೆಟ್ಟ ರಸ್ತೆಗಳಲ್ಲಿ ಸಂಚಾರ ಅಸಾಧ್ಯ!

 ಕಚ್ಚಾ ರಸ್ತೆ
ಕಚ್ಚಾ ರಸ್ತೆ
Published on

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳು ತೀರ ಹದಗೆಟ್ಟಿರುವ ಪರಿಣಾಮ ಗ್ರಾಮಸ್ಥರು ಪರದಾಡುವಂತಾಗಿದ್ದು, ಇದರೊಂದಿಗೆ ವಿದ್ಯುತ್ ಸಂಪರ್ಕ ಕೂಡ ನಿಯಮಿತವಾಗಿ ಇಲ್ಲದೆ ಪರಿಣಾಮ ಜನರ ಬದುಕು ದುಸ್ತರವಾಗಿದೆ.

ಪೊನ್ನಂಪೇಟೆ ತಾಲೂಕಿನ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬಿಮಾಲೆ ಕೊಲ್ಲಿ, ಚೊರೇಂಗೆ ಮೊಟ್ಟೆ, ಅನ್ಯೂಟ್ ರಸ್ತೆ, ಬೊಮ್ಮಂಜಿ ಹಾಗೂ ಹಾಕಮನೆ ಗ್ರಾಮಗಳಲ್ಲಿ ಕಳೆದ ಹಲವು ವರ್ಷಗಳಿಂದ ರಸ್ತೆ, ವಿದ್ಯುತ್ ಸೇರಿದಂತೆ ಇತರ ಮೂಲ ಸೌಲಭ್ಯವೆಂ ಬುದು ಮರೀಚಿಕೆಯಾಗಿದೆ. ಇದರಿಂದಾಗಿ ಅಲ್ಲಿನ ಜನರು ದಯನೀಯ ಬದುಕು ಕಗ್ಗತ್ತಲಿನಲ್ಲಿ ಮುಳುಗಿದೆ. ಗ್ರಾಮದಲ್ಲಿ ಸುಮಾರು 40 ರಿಂದ 50 ಮನೆಗಳಿದ್ದು, ರಸ್ತೆ ಅಭಿವೃದ್ಧಿ ಕಾಣದೆ ಗ್ರಾಮಸ್ಥರು ಸಂಕಷ್ಟ ಎದುರಿಸುವಂತಾಗಿದೆ.

ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಗುರುವಾರ ಬಿರುನಾಣಿಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಗ್ರಾಮಸ್ಥರು ಪಾಲ್ಗೊಂಡು ಗ್ರಾಮದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಗ್ರಾಮದಲ್ಲಿ ಒಂದು ಕಡೆಗೆ ರಸ್ತೆ ಸಂಪರ್ಕವೇ ಇಲ್ಲ. ಇದರಿಂದ ಜನರು ಪರಡಾಡು ವಂತಾಗಿದೆ. ಮತ್ತೊಂದು ಕಡೆ ಕಾಡುಪ್ರಾಣಿಗಳ ಹಾವಳಿ ಮಿತಿಮೀರಿದ್ದು ಗ್ರಾಮಸ್ಥರು ಹೈರಾಣಾಗಿದ್ದಾರೆ. ನಿತ್ಯ ಕಾಡಾನೆಗಳು ತೋಟಗಳಿಗೆ ಲಗ್ಗೆ ಇಡುತ್ತಿದ್ದು, ಇದರಿಂದಾಗಿ ಫಸಲು ಕೈಗೆಟುಕದ ಸ್ಥಿತಿ ನಿರ್ಮಾಣವಾಗಿದೆ.

ಈ ಬಾರಿಯ ಮಳೆಗಾಲದಲ್ಲಿ ಭಾರಿ ಗಾಳಿ-ಮಳೆಗೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ವಾರಗಟ್ಟಲೇ ವಿದ್ಯುತ್ ಸಂಪರ್ಕವಿಲ್ಲ. ಇದರೊಂದಿಗೆ ಮೊಬೈಲ್ ನೆಟ್‌ವರ್ಕ್ ಇಲ್ಲದೆ ಪರದಾಡುವಂತಾಗಿದೆ. ಸೆಸ್ಕ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತಾದರೂ ಸಮಸ್ಯೆ ನಿವಾರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು, ಮುರಿದು ಬಿದ್ದಿರುವ ವಿದ್ಯುತ್ ಕಂಬಗಳನ್ನು ತೆರವು ಮಾಡಿ ಹೊಸದಾಗಿ ಕಂಬಗಳನ್ನು ತರುವ ವಾಹನಕ್ಕೆ ಡೀಸೆಲ್ ಹಾಕಲು 5,000 ರೂ. ಬೇಡಿಕೆ ಇಟ್ಟಿದ್ದು, ಗ್ರಾಮಸ್ಥರೆಲ್ಲ ಸೇರಿ ಹಣ ನೀಡಿರುವುದಾಗಿ ಅಳಲು ತೋಡಿಕೊಂಡರು.

ಒಟ್ಟಿನಲ್ಲಿ ಕುಗ್ರಾಮಗಳನ್ನು ನಿರ್ಲಕ್ಷಿಸುವ ಪದ್ಧತಿ ಇಂದಿಗೂ ಇದ್ದು, ಇನ್ನಾದರೂ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆಯನ್ನು ಪರಿಹರಿಸಬೇಕಿದೆ. ಜತೆಗೆ ಈಗ ಮಳೆಗಾಲ ಕಡಿಮೆಯಾಗಿದ್ದು ಕೂಡಲೇ ರಸ್ತೆಯನ್ನು ದುರಸ್ತಿಗೊಳಿಸಿ ಗ್ರಾಮಸ್ಥರ ಓಡಾಟಕ್ಕೆ ಅನುಕೂಲ ಮಾಡಿಕೊಡುವಂತೆಯೂ ಮನವಿ ಮಾಡಿದ್ದಾರೆ.

ಕಾಲ್ನಡಿಗೆಯಲ್ಲೇ ತೆರಳಬೇಕು

ಮಳೆಗಾಲದಲ್ಲಿ ಮುಖ್ಯ ರಸ್ತೆಯ ಬಳಿ ವಾಹನಗಳನ್ನು ನಿಲ್ಲಿಸಿ ಗ್ರಾಮಸ್ಥರು ಕಾಲ್ನಡಿಗೆಯಲ್ಲೇ ತೆರಳಬೇಕು. ರಸ್ತೆಬದಿ ಕಾಡುಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದುನಿಂತಿದ್ದು, ಗುಂಡಿಬಿದ್ದ ರಸ್ತೆಯಲ್ಲಿ ಗ್ರಾಮಸ್ಥರು ಸಂಚರಿಸಬೇಕಿದೆ. ಗ್ರಾಮದಲ್ಲಿ ವಿದ್ಯುತ್ ಇಲ್ಲದ ಪರಿಣಾಮ ಗ್ರಾಮಸ್ಥರು ಕತ್ತಲೆಯಲ್ಲೇ ದಿನದೂಡುವಂತಾಗಿದೆ. ಇದರೊಂದಿಗೆ ವನ್ಯಪ್ರಾಣಿಗಳ ಉಪಟಳದಿಂದಾಗಿ ಜೀವಭಯದಲ್ಲೇ ಗ್ರಾಮಸ್ಥರು ಬದುಕು ಸಾಗಿಸುವಂತಾಗಿದೆ.

ಬೊಟ್ಟಂಗಡ ಕುಶಾಲಪ್ಪ ರೀಟಾ ಗ್ರಾಮಸ್ಥ

ನನೆಗುದಿಗೆ ಬಿದ್ದ ಕಾಮಗಾರಿ

ಕಾಡುಪ್ರಾಣಿಗಳ ಉಪಟಳದಿಂದಾಗಿ ಕೃಷಿಕರು ಬಸವಳಿಯುವಂತಾಗಿದೆ. ತೇರಾಲು -ಬೀರುಗ ರಸ್ತೆ ಕಾಮಗಾರಿಗೆ 2018 ರಲ್ಲಿ ಗ್ರಾಮ ಸಡಕ್ ಯೋಜನೆಯಡಿ 8 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು ಆದರೆ ಕೆಲವು ತೋಟದ ಮಾಲೀಕರು ಹಾಗೂ ಪರಿಸರವಾದಿಗಳು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ ತಪ್ಪು ಮಾಹಿತಿ ನೀಡಿದ್ದರಿಂದಾಗಿ ಬಂದ ಅನುದಾನದ ಹಣ ವಾಪಸ್ ಆದ ಹಿನ್ನೆಲೆಯಲ್ಲಿ ಸಂಪರ್ಕ ರಸ್ತೆಯ ಕಾಮಗಾರಿ ನನೆಗುದಿಗೆ ಬಿದ್ದಿದೆ.

ಬೊಟ್ಟಂಗಡ ಪ್ರತಾಪ್ ಅಯ್ಯಪ್ಪ ಗ್ರಾಮಸ್ಥ

ಸಮಸ್ಯೆ ಬಗೆಹರಿಸುವವರಿಲ್ಲ

ಮಳೆಗಾಲದಲ್ಲಿ ಗಾಳಿ ಮತ್ತು ಮಳೆಗೆ ವಿದ್ಯುತ್ ಕಂಬಗಳು ಮುರಿದು ಬೀಳುವ ಪರಿಪಾಠ ಹಿಂದಿನಿಂದಲೂ ಇದೆ. ಇದರಿಂದ ವಿದ್ಯುತ್ ಸಮಸ್ಯೆ ಉಂಟಾಗಿ ಜನರು ತೀವ್ರ ಅವಸ್ಥೆ ಪಡುವಂತಾಗಿದೆ. ಇದರೊಂದಿಗೆ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಕೂಡ ಎದುರಾಗಿದೆ. ಈ ಸಂಬಂಧ ಹಲವಾರು ಬಾರಿ ಸಂಬಂಧ ಇಲಾಖೆಯವರಿಗೆ ಹೇಳಿದರೂ ಕೂಡ ಸಮಸ್ಯೆ ಬಗೆಹರಿದಿಲ್ಲ. ಹೀಗೆ ಆದರೆ ಎಮರ್ಜೆನ್ಸಿ ಸಂದರ್ಭ ಜನರು ಸಂಕಷ್ಟಕ್ಕೆ ಸಿಲುಕುವ ಸಂಭವವಿದೆ. ಇದಕ್ಕೆ ಪರಿಹಾರ ನೀಡುವವರು ಯಾರು.

ಬೊಟ್ಟಂಗಡ ನವೀನ್ ಗ್ರಾಮಸ್ಥ

ಅವಘಡವಾದರೆ ಹೊಣೆ ಯಾರು?

ಮುರಿದು ಬಿದ್ದಿರುವ ಎಂಟು ವಿದ್ಯುತ್ ಕಂಬಗಳನ್ನು ತೆರವು ಮಾಡಿ ಹೊಸದಾಗಿ ಕಂಬಗಳನ್ನು ತರಬೇಕಿದ್ದು, ಅದಕ್ಕಾಗಿ ವಾಹನಕ್ಕೆ ಡೀಸೆಲ್ ಹಾಕಲು ಸೆಸ್ಕ್ ಸಿಬ್ಬಂದಿ ಐದೂವರೇ ಸಾವಿರ ರೂ. ಬೇಡಿಕೆ ಇಟ್ಟಿದ್ದರು. ಬಳಿಕ ಗ್ರಾಮಸ್ಥರೆಲ್ಲ ಸೇರಿ ಹಣ ನೀಡಿದ ಮೇಲೂ ವಿದ್ಯುತ್ ಕಂಬಗಳನ್ನು ಅಳವಡಿಸಿಲ್ಲ. ವಿದ್ಯುತ್ ಕಂಬ ಇಲ್ಲವೆಂದು ಹೇಳಿ ನೇರವಾಗಿ ಲೈನ್ ಎಳೆದು ವಿದ್ಯುತ್ ಸಂಪರ್ಕ ನೀಡಿದ್ದು ಇದೀಗ ಆ ಲೈನ್‌ನಿಂದ ಗ್ರೌಂಡಿಂಗ್ ಆಗಿ ತೊಂದರೆಯಾಗುತ್ತಿದೆ. ಅವಘಡ ಸಂಭವಿಸಿದರೆ ಇದಕ್ಕೆ ಹೊಣೆ ಯಾರು.

ಬೊಟ್ಟಂಗಡ ಚೈತ್ರಾ ಅಯ್ಯಪ್ಪ ಗ್ರಾಮಸ್ಥ

ಸೇತುವೆ ನಿರ್ಮಾಣವಾಗಲಿ

ಗ್ರಾಮದಲ್ಲಿ ಸುಮಾರು 40 ರಿಂದ 50 ಮನೆಗಳಿದ್ದು, ಗ್ರಾಮವು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಕೇವಲ ಚುನಾವಣೆ ಸಂದರ್ಭ ರಾಜಕಾರಣಿಗಳು ಗ್ರಾಮಕ್ಕೆ ಆಗಮಿಸಿ ಸಮಸ್ಯೆ ಆಲಿಸಿ ತೆರಳುತ್ತಾರೆ. ಆ ಬಳಿಕ ಯಾರೊಬ್ಬರೂ ಇತ್ತ ತಿರುಗಿಯೂ ನೋಡುವುದಿಲ್ಲ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಬೀರುಗ ಗ್ರಾಮಕ್ಕೆ ರಸ್ತೆ ಹಾಗೂ ಪೂಜೆ ಕಲ್ಲು ಸೇತುವೆ ನಿರ್ಮಾಣಕ್ಕೆ ಚಾಲನೆ ದೊರೆಯುವ ಕೆಲಸವಾಗಲಿ.

ಬೊಟ್ಟಂಗಡ ಗಿರೀಶ್ ಗ್ರಾಪಂ ಮಾಜಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net