

ವಿಜಯವಾಣಿ ಸುದ್ದಿಜಾಲ ನೆಲ್ಯಾಡಿ
ಹಾಸನ ಜಿಲ್ಲಾಡಳಿತವು ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟಿಯ ಮೂಲಕ ಸಂಚಾರವನ್ನು ಗುರುವಾರ ರಾತ್ರಿಯಿಂದಲೇ ನಿಷೇಧಿಸಿದೆ. ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪದ ದೊಡ್ಡ ತಪ್ಪಲು ಪ್ರದೇಶದಲ್ಲಿ ಗುಡ್ಡ ಕುಸಿಯುತ್ತಿರುವುದರಿಂದ ಸಂಭಾವ್ಯ ಅಪಾಯವನ್ನು ತಪ್ಪಿಸಲು ಈ ಕ್ರಮ ಕೈಗೊಂಡಿದೆ. ಶುಕ್ರವಾರ ಬೆಳಗ್ಗೆ 10:30 ಯಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಗುರುವಾರ ರಾತ್ರಿಯಿಂದಲೇ ಗುಂಡ್ಯ ಹಾಗೂ ಅಡ್ಡ ಹೊಳೆ ಪರಿಸರದಲ್ಲಿ 2 ಸಾಲಿನಲ್ಲಿ ಟ್ಯಾಂಕರ್, ಟ್ರೈಲರ್ ಸಹಿತ ಘನವಾಹನಗಳು ರಸ್ತೆಯ ಮಧ್ಯದಲ್ಲಿಯೇ ನಿಂತು ಸ್ಥಳೀಯರಿಗೂ, ಸಂಚರಿಸಲು ಅಸಾಧ್ಯವಾಗಿತ್ತು. ಶಿರಾಡಿ ಯ ಗಡಿ ದೇವಸ್ಥಾನವಾದ ಚೌಡೇಶ್ವರಿ ದೇವಸ್ಥಾನದ ಮೇಲಿನ ಭಾಗದಲ್ಲಿ ಬೃಹತ್ ಮರ ಒಂದು ರಸ್ತೆಗೆ ಬಿದ್ದಿದ ಪರಿಣಾಮ ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಅರಣ್ಯ ಇಲಾಖೆ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮರತೆರವುಗೊಳಿಸಿ ಸಂಚಾರ ಮುಕ್ತಗೊಳಿಸಿದರು. ಗುರುವಾರ ರಾತ್ರಿಯಿಂದಲೂ ಶಿರಾಡಿ ಹಾಗೂ ಮಾರನಹಳ್ಳಿ ಭಾಗದಲ್ಲಿ ಭಾರಿ ಮಳೆ ಆಗುತ್ತಿದ್ದು ಶುಕ್ರವಾರವೂ ಮಳೆಯ ಪ್ರಮಾಣ ಹೆಚ್ಚಾಗಿದೆ. ಮಾರನ ಹಳ್ಳಿಯ ದೊಡ್ಡ ತಪ್ಪಲ್ಲಲ್ಲಿ ಗುಡ್ಡ ಕುಸಿತ ಸಣ್ಣ ಪ್ರಮಾಣದಲ್ಲಿ ಮುಂದುವರೆದಿದೆ. ಗುಂಡ್ಯ ಚೆಕ್ ಪೋಸ್ಟ್ ಬಳಿ ನೆಲ್ಯಾಡಿ ಹೊರಠಾಣಾ ಪೊಲೀಸರು ಸಂಚಾರ ದಟ್ಟಣೆಯನ್ನು ನಿಯಂತ್ರಿಸುತ್ತಿದ್ದಾರೆ.
ಇಂದು ಸಂಜೆ 6 ರಿಂದ ಬೆಳಗ್ಗೆ 6ರ ಗಂಟೆ ವರೆಗೆ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.