

ನರೇಂದ್ರ ಎಸ್.ಮರಸಣಿಗೆ ಹೆಬ್ರಿ ಹಾಗೂ ಸಿದ್ದಾಪುರ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಹಾಲಿಕೊಡ್ಲಿನಿಂದ ಸೀತಾನದಿ ಸೇತುವೆ ತನಕ ಸಂಪರ್ಕಿಸುವ ರಸ್ತೆ ಅಗಲೀಕರಣಕ್ಕೆ ಅರಣ್ಯ ಇಲಾಖೆ ಅಡ್ಡಿಯಾಗಿದೆ. ಅರಣ್ಯ ಇಲಾಖೆಯ ತಾಂತ್ರಿಕ ತೊಂದರೆಗಳು ನಿವಾರಣೆಗೊಳ್ಳದಿರುವುದರಿಂದ ಅಗಲೀಕರಣ ಕಾಮಗಾರಿ ನನೆಗುದಿಗೆ ಬಿದ್ದಿದೆ. ಕಿರಿದಾದ ಈ ರಸ್ತೆಯಲ್ಲಿ ನಿತ್ಯವೂ ಒಂದಿಲ್ಲೊಂದು ಅವಘಡಗಳು ನಡೆಯುತ್ತಲೇ ಇವೆ. ತೀರಾ ಕಿರಿದಾದ ಈ ರಸ್ತೆಯಲ್ಲಿ ಏಕಕಾಲದಲ್ಲಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ವಾಹನಗಳ ಸಂಚರಿಸುವುದು ಇಲ್ಲಿ ಅಸಾಧ್ಯ. ಬೃಹತ್ ಗಾತ್ರದ ವಾಹನಗಳು ಎದುರಾದಾಗ ಸಣ್ಣ ವಾಹನಗಳ ಸಂಚಾರ ದುಸ್ತರವಾಗಿದ್ದು, ವಾಹನ ಸವಾರರು ಆಡಳಿತ ವರ್ಗದ ವಿರುದ್ಧ ಹಿಡಿಶಾಪ ಹಾಕಿಕೊಂಡು ಸಂಚರಿಸುವುದು ಮಾಮೂಲಾಗಿದೆ. ಮಳೆ ಜೋರಾಗಿ ಬಂದರೆ ರಸ್ತೆಯಲ್ಲಿ ಕೃತಕ ನೆರೆ ಉಂಟಾಗುತ್ತಿದ್ದು, ಗುಂಡಿಗಳಲ್ಲಿ ನೀರು ತುಂಬಿ ರಸ್ತೆಯೇ ಗೋಚರಿಸುವುದಿಲ್ಲ. ಇದರಿಂದ ಈ ಭಾಗದಲ್ಲಿ ವಾಹನ ಅಪಘಾತಗಳು ಹೆಚ್ಚಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರಿಗೆ ಸಂಚಾರ ತೀರ ದುಸ್ತರವಾಗಿದೆ. ಕಳೆದ ವರ್ಷ ಪ್ರತಿಭಟನೆ: ರಸ್ತೆ ಅಗಲಗೊಳಿಸುವ ಬೇಡಿಕೆಗೆ ಸಂಬಂಧಿಸಿ ಕಳೆದ ವರ್ಷ ಭಾರಿ ಜನರ ಸೇರಿ ಪ್ರತಿಭಟನೆ ನಡೆಸಲಾಗಿತ್ತು. ಈ ಬಾರಿ ಪಿಡಬ್ಲುೃಡಿ ಹಾಗೂ ಅರಣ್ಯ ಇಲಾಖೆ ಜತೆಗೂಡಿ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿ ಕ್ರಮ ಕೈಗೊಂಡಿದ್ದಾರೆ. ರಸ್ತೆ ಅಗಲೀಕರಣಕ್ಕೆ ಈಗಾಗಲೇ ಸಮ್ಮತಿ ದೊರೆತಿದೆ. ಆದರೆ ಕಾಮಗಾರಿ ಆರಂಭಿಸುವ ದಿನ ಮಾತ್ರ ಇನ್ನೂ ನಿಗದಿಯಾಗಿಲ್ಲ.
ರಸ್ತೆಯ ಎರಡೂ ಬದಿಗಳಲ್ಲಿ ಬೃಹತ್ ಹೊಂಡಗಳಿದ್ದು, ಮಳೆ ನೀರು ತುಂಬಿ ವಾಹನ ಚಾಲನೆ ಸಂದರ್ಭ ಗೋಚರಿಸುವುದಿಲ್ಲ. ಅಪಘಾತಗಳು ಮಾಮೂಲಾಗಿದ್ದು, ಜೀವಭಯದಿಂದ ಈ ಭಾಗದಲ್ಲಿ ಸಂಚರಿಸಬೇಕಾದ ದುಸ್ಥಿತಿ ಎದುರಾಗಿದೆ.ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಈ ರಸ್ತೆ ಅಭಿವೃದ್ಧಿಗೊಳಿಸುವತ್ತ ಗಮನ ನೀಡಬೇಕು. ದೇವಳಬೈಲ್ ಸುಧಾಕರ ಶೆಟ್ಟಿ ನಿತ್ಯ ಪ್ರಯಾಣಿಕ. ಅರಣ್ಯ ಇಲಾಖೆಯ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ರಸ್ತೆ ಅಗಲೀಕರಣಕ್ಕೆ ತೊಡಕಾಗಿತ್ತು. ಈಗ ಅರಣ್ಯ ಇಲಾಖೆಯಿಂದ ರಸ್ತೆ ಅಗಲೀಕರಣಕ್ಕೆ ಅನುಮತಿ ದೊರೆತಿದ್ದು, ಮಳೆಗಾಲ ಆಗಿರುವುದರಿಂದ ಸ್ವಲ್ಪದಿನ ಕಾಯಬೇಕು. ತಾತ್ಕಾಲಿಕ ಕಾಮಗಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸುತ್ತೇನೆ.
ಕಿರಣ್, ಇ.ಇ, ಪಿಡಬ್ಲ್ಯುಡಿ ಉಡುಪಿ