ರಾ.ಹೆದ್ದಾರಿಯಲ್ಲಿ ಕತ್ತಲಲ್ಲೇ ಸಂಚಾರ!

heddari
ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿಯಲ್ಲಿ ಅಳವಡಿಸಿರುವ ಬೀದಿದೀಪ ಹಾಳಾಗಿ ಕತ್ತಲೆ ಆವರಿಸಿರುವುದು.
Published on

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66 ಹಾದುಹೋಗುವ ಕುಂದಾಪುರದಿಂದ ಬೈಂದೂರುವರೆಗೆ ವಿವಿಧೆಡೆ ಅಳವಡಿಸಿರುವ ಬೀದಿ ದೀಪಗಳು ಉರಿಯದೆ ಕತ್ತಲೆಯಲ್ಲೇ ಸಂಚರಿಸುವಂತಾಗಿದೆ. ಹೆದ್ದಾರಿಯ ಅಲ್ಲಲ್ಲಿ ಇರುವ ಬೀದಿದೀಪಗಳು ಅಳವಡಿಸಿದ ಒಂದು ತಿಂಗಳೊಳಗೆ ಹಾಳಾಗುತ್ತಿದ್ದು, ರಾತ್ರಿ ಸಂಚಾರ ದುಸ್ತರವೆನಿಸಿದೆ.

ಕುಂದಾಪುರದಿಂದ ಆರಂಭಗೊಂಡು, ಬೈಂದೂರು, ಶಿರೂರುವರೆಗಿನ ಹೆದ್ದಾರಿ ಕಾಮಗಾರಿಯನ್ನು ಐಆರ್‌ಬಿ ಸಂಸ್ಥೆ ನಿರ್ವಹಿಸುತ್ತಿದ್ದು, ಬೀದಿ ದೀಪಗಳ ಅಳವಡಿಕೆ, ನಿರ್ವಹಣೆ ಹೊಣೆಯೂ ಅವರದ್ದೇ ಆಗಿದೆ. ಆದರೆ ಹೆದ್ದಾರಿಯುದ್ದಕ್ಕೂ ಹಾಕಲಾದ ಬೀದಿ ದೀಪಗಳು ಕೆಲ ದಿನಗಳಷ್ಟೇ ಉರಿದು, ತಿಂಗಳೊಳಗೆ ಹಾಳಾಗುತ್ತಿದ್ದು ಗುಣಮಟ್ಟ ಲೋಪದ ಆರೋಪ ಕೇಳಿಬಂದಿದೆ.

ಏನಿದು ಸಮಸ್ಯೆ?: ಹೆದ್ದಾರಿಯಲ್ಲಿ ಬೀದಿದೀಪ ಅಳವಡಿಸುವಂತೆ ನಾಗರಿಕರು ಒತ್ತಾಯಿಸಿದಾಗ ಕಾರ್ಯಪ್ರವೃತ್ತವಾಗುವ ಐಆರ್‌ಬಿ ಸಂಸ್ಥೆಯು ಬೀದಿ ದೀಪ ಅಳವಡಿಸುತ್ತದೆ. ಆದರೆ ಅಳವಡಿಸಿದ ಒಂದು ತಿಂಗಳಲ್ಲಿಯೇ ಕೆಟ್ಟು ಹೋಗುತ್ತಿದ್ದು, ಆ ಬಳಿಕ ಅದರತ್ತ ಸುಳಿಯುವುದೇ ಇಲ್ಲ. ಈ ಬಗ್ಗೆ ದೂರು ನೀಡಿದರೂ ಪ್ರಯೋಜ ಇಲ್ಲದಂತಾಗಿದೆ.

ಎಲ್ಲೆಲ್ಲಿ ಅಳವಡಿಕೆ?: ಪ್ರಮುಖ ಜಂಕ್ಷನ್‌ಗಳಾದ ತಲ್ಲೂರು, ಹೆಮ್ಮಾಡಿ, ಮುಳ್ಳಿಕಟ್ಟೆ, ಅರಾಟೆ, ತ್ರಾಸಿ, ಮರವಂತೆ ಮೊದಲಾದ ಕಡೆಗಳಲ್ಲಿ ಬೀದಿ ದೀಪಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಅಳವಡಿಸಲಾದ ದೀಪಗಳಲ್ಲಿ ಕೆಲವೊಂದು ಈಗಾಗಲೇ ಕೆಟ್ಟು ಹೋಗಿ, ಬಹಳ ದಿನಗಳೇ ಆಗಿವೆ. ಹೆದ್ದಾರಿಯ ಪ್ರಮುಖ ಜಂಕ್ಷನ್, ಪೇಟೆ ಆಸುಪಾಸಿನಲ್ಲಿ, ಡಿವೈಡರ್ ಕ್ರಾಸಿಂಗ್ ಇರುವ ಕಡೆಗಳಲ್ಲಿ ಬೀದಿ ದೀಪ ಇಲ್ಲದಿರುವುದರಿಂದ ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿದೆ.

ಕುಂದಾಪುರ ತಾಲೂಕಿನ ತ್ರಾಸಿಯಲ್ಲಿ ರಾ.ಹೆ. 66ರಲ್ಲಿ ಅಳವಡಿಸಿದ ದಾರಿದೀಪ ಹಾಳಾಗಿ ತಿಂಗಳುಗಳೇ ಕಳೆದಿದೆ. ತ್ರಾಸಿ ಜಂಕ್ಷನ್ ಪರಿಸರ ಕತ್ತಲಲ್ಲಿ ಮುಳುಗಿದೆ. ಪಾದಚಾರಿಗಳು ಹಾಗೂ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದು, ದಾರಿದೀಪಗಳನ್ನು ತಕ್ಷಣ ದುರಸ್ತಿ ಮಾಡಬೇಕು. ವೆಂಕಟೇಶ ಪೈ, ರಿಕ್ಷಾ ಚಾಲಕ, ತ್ರಾಸಿ https://www.vijayavani.net/donor-contributions-are-important-to-save-rural-schools https://www.vijayavani.net/lets-preserve-the-sanctity-of-the-constitution

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net