ನಾಪೋಕ್ಲುವಿನಲ್ಲಿ ಸಂಚಾರ ದಟ್ಟಣೆ ಸಾಮಾನ್ಯ

6.NPK ..,2
Published on

ದುಗ್ಗಳ ಸದಾನಂದ ನಾಪೋಕ್ಲು: ಎತ್ತ ನೋಡಿದರೂ ವಾಹನಗಳ ಸಾಲು ಸಾಲು... ರಸ್ತೆ ದಾಟುಲು ಅಸಾಧ್ಯ, ಜನಸಾಮಾನ್ಯರು ನಡೆದಾಡಲು ಭಯಪಡುವ ಪರಿಸ್ಥಿತಿ. ಶಾಲಾ ಮಕ್ಕಳಂತೂ ಕಂಗಾಲು, ಇದು ನಾಪೋಕ್ಲುನಲ್ಲಿ ಕಂಡುಬರುವ ಟ್ರಾಫಿಕ್ ಚಿತ್ರಣ.

ಶಾಲೆ ಬಿಡುವ ವೇಳೆಗೆ ಇಲ್ಲಿ ಶಾಲಾ ವಾಹನಗಳು ಸೇರಿದಂತೆ ವಾಹನಗಳ ದಟ್ಟಣೆ ಅಧಿಕವಾಗಿರುತ್ತದೆ. ಇಕ್ಕಟ್ಟಾದ ರಸ್ತೆಯ ಎರಡು ಬದಿಗಳಲ್ಲಿ ವಾಹನ ಮಾಲೀಕರು ವಾಹನಗಳ ನಿಲುಗಡೆ ಮಾಡುತ್ತಿರುವುದರಿಂದ ಸಮಸ್ಯೆ ಉದ್ಭವಿಸುತ್ತಿದೆ. ಅತ್ತ ಪೊಲೀಸ್ ಇಲಾಖೆ ವಾಹನಗಳ ದಟ್ಟಣೆ ನಿಯಂತ್ರಿಸುತ್ತಿಲ್ಲ. ವಾಹನ ಮಾಲೀಕರು ಸಹಕರಿಸುತ್ತಿಲ್ಲ ಎಂಬುದು ಜನಸಾಮಾನ್ಯರ ದೂರು.

ಹಬ್ಬ ಹರಿದಿನಗಳಲ್ಲಿ ಗ್ರಾಮಾಂತರ ಭಾಗಗಳಿಂದ ಖರೀದಿಗೆಂದು ಜನರು ಪಟ್ಟಣಕ್ಕೆ ಬರುವುದರಿಂದ ವಾಹನದಟ್ಟಣೆ ಇನ್ನಷ್ಟು ಹೆಚ್ಚುತ್ತದೆ. ವಾಹನ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಯಾವೊಬ್ಬ ಪೊಲೀಸರು ಇರುವುದಿಲ್ಲ. ಇನ್ನ್ನು ಬಸ್ ನಿಲ್ದಾಣದಲ್ಲಿ ಒಂದೆರಡು ಬಸ್‌ಗಳು ಬಂದು ನಿಂತರಂತೂ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಈ ದೃಶ್ಯಗಳು ಇಲ್ಲಿ ಸಾಮಾನ್ಯವಾಗಿಬಿಟ್ಟಿದೆ.

ಇದಕ್ಕೆ ಕಾರಣ ನಾಪೋಕ್ಲು ಪಟ್ಟಣದಲ್ಲಿ ಕಿರಿದಾದ ರಸ್ತೆ ಜತೆಗೆ ವ್ಯವಸ್ಥಿತ ಬಸ್ ನಿಲ್ದಾಣ ಇಲ್ಲದಿರುವುದರಿಂದ ಮೂರು ರಸ್ತೆಗಳು ಕೂಡುವ ಸ್ಥಳವೇ ಬಸ್ ನಿಲ್ದಾಣವಾಗಿದ್ದು, ಇಲ್ಲಿ ಜನಸಾಮಾನ್ಯರು ಬಸ್ಸಿಗಾಗಿ ಪರದಾಡುವ ಪರಿಸ್ಥಿತಿ ಸಾಮಾನ್ಯ. ಪಂಚಾಯಿತಿ ಹಾಗೂ ಪೊಲೀಸರು ಕೆಲವು ನಿಯಮಗಳನ್ನು ಜಾರಿಗೊಳಿಸಿದ್ದರೂ ಇಲ್ಲಿ ಯಾವುದೇ ಪಾಲನೆಯಾಗುತ್ತಿಲ್ಲ.

ಮಡಿಕೇರಿ ತಾಲೂಕಿನ ಎರಡನೇ ದೊಡ್ಡ ಪಟ್ಟಣವಾದ ನಾಪೋಕ್ಲುವಿಗೆ ಬಸ್ ನಿಲ್ದಾಣಕ್ಕಾಗಿ ಹಲವು ವರ್ಷಗಳಿಂದ ಬೇಡಿಕೆ ಇದೆ. ನಿಲ್ದಾಣಕ್ಕಾಗಿ ಇಲ್ಲಿಯ ಸಂತೆ ಮೈದಾನದಲ್ಲಿ ಸೂಕ್ತ ಸ್ಥಳ ಗುರುತು ಮಾಡಿದ್ದರೂ ಜನಪ್ರತಿನಿಧಿಗಳ ನಿರ್ಲಕ್ಷೃದಿಂದ ಕಾರ್ಯಗತವಾಗದೆ ಹಾಗೇ ಉಳಿದಿದೆ. ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಏರುತ್ತಿದ್ದು, ನಿಲುಗಡೆಗೆ ಸ್ಥಳವಿಲ್ಲದೆ ವಾಹನ ಮಾಲೀಕರು ಚುನಾಯಿತ ಪ್ರತಿನಿಧಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಗರಿಕರ ಹಲವು ವರ್ಷದ ಬೇಡಿಕೆಯಂತೆ ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬಸ್ ನಿಲ್ದಾಣ ಹಾಗೂ ಪಟ್ಟಣದಲ್ಲಿ ರಸ್ತೆ ವಿಸ್ತರಣೆ ಮಾಡಿಸಿ ವಾಹನಗಳ ಸುಗಮ ಸಂಚಾರಕ್ಕೆ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪಟ್ಟಣದ ರಸ್ತೆ ವಿಸ್ತರಣೆ ಬಗ್ಗೆ ಗ್ರಾಮ ಪಂಚಾಯತಿ ಸಭೆಯಲ್ಲಿ ನಿರ್ಣಯ ಕೈಗೊಂಡು ಮೇಲಧಿಕಾರಿಗಳಿಗೆ ನೋಟಿಸ್ ನೀಡಿದ್ದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬಸ್ ನಿಲ್ದಾಣ ನಿರ್ಮಾಣಕ್ಕೆ ಜಾಗವನ್ನು ಗುರುತು ಮಾಡಿದ್ದು, ಆ ಜಾಗವನ್ನು ಗ್ರಾ.ಪಂ. ಹೆಸರಿಗೆ ನೋಂದಾಯಿಸುವ ಕಾರ್ಯ ಪ್ರಗತಿಯಲ್ಲಿದೆ. ಆದಷ್ಟು ಬೇಗ ಶಾಸಕ ಎಸ್.ಪೊನ್ನಣ್ಣ ಅವರನ್ನು ಪಂಚಾಯಿತಿ ವತಿಯಿಂದ ಭೇಟಿ ಮಾಡಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಮನವಿ ಮಾಡಲಾಗುವುದು. ವನಜಾಕ್ಷಿ ರೇಣುಕೇಶ್ ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net