ಸಂಚಾರ ದಟ್ಟಣೆಗೆ ನಲುಗಿದ ನಾಗರಿಕರು

bidadi dana
ಲಿಂಗಸುಗೂರು ಬಸ್ ನಿಲ್ದಾಣ ವೃತ್ತ ಸಮೀಪ ರಸ್ತೆಯಲ್ಲಿ ಬಿಡಾಡಿ ದನಗಳಿರುವುದು.
Published on

ಲಿಂಗಸುಗೂರು: ಪಟ್ಟಣದ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಖಾಸಗಿ ವಾಹನಗಳ ಅಡ್ಡಾದಿಡ್ಡಿ ನಿಲುಗಡೆ, ರಸ್ತೆ ಬದಿ ಗೂಡಂಗಡಿ, ಬಿಡಾಡಿ ದನಗಳ ಹಾವಳಿ ಇವೆಲ್ಲದರ ಮಧ್ಯೆ ಮುಖ್ಯ ರಸ್ತೆಗಳು ಕಿರಿದಾಗಿ ಸಂಚಾರ ದಟ್ಟಣೆ ಸಾಮಾನ್ಯವಾಗಿದೆ.

ಬಸ್ ನಿಲ್ದಾಣ ವೃತ್ತ, ಕಲಬುರಗಿ-ಬೆಂಗಳೂರು ಬೈಪಾಸ್, ಮುದಗಲ್ ರಸ್ತೆ ಬದಿಯಲ್ಲಿ ವಾಹನಗಳು ನಿಲ್ಲುವುದು, ಗ್ಯಾರೇಜಿಗೆ ಬರುವ ವಾಹನ, ಹೋಟೆಲ್, ಬ್ಯಾಂಕ್‌ಗಳಿಗೆ ಆಗಮಿಸುವ ಸಾರ್ವಜನಿಕರ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತದೆ.

ಪ್ರಮುಖ ರಸ್ತೆಗಳ ಬದಿ ಡಬ್ಬಾ ಅಂಗಡಿ, ತಳ್ಳುವ ಬಂಡಿ, ಹೂವು, ಹಣ್ಣಿನ ಅಂಗಡಿ ಸೇರಿ ಸಣ್ಣ ಅಂಗಡಿಗಳು ಇರುವುದು ಸಂಚಾರ ದಟ್ಟಣೆಗೆ ಕಾರಣವಾಗಿದೆ.

ಖಾಸಗಿ ವಾಹನಗಳ ನಿಲುಗಡೆ, ಬಿಡಾಡಿ ದನಗಳ ಓಡಾಟ ಮತ್ತು ರಸ್ತೆ ಮೇಲೆ ಎಲ್ಲೆಂದರಲ್ಲಿ ಇರುವುದರಿಂದ ನಾಗರಿಕರಿಗೆ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಬಿಡಾಡಿ ದನಗಳಿಂದ ವಾಹನಗಳು ಅಪಘಾತಕ್ಕೀಡಾಗಿ ಹಲವರು ಗಾಯಗೊಂಡ ಘಟನೆಗಳೂ ನಡೆದಿವೆ. ಕಳೆದ ಕೆಲ ವರ್ಷಗಳ ಹಿಂದೆ ರಸ್ತೆ ಅತಿಕ್ರಮಣ ತೆರವು ಕಾರ್ಯ ಕೈಗೊಂಡು ಹೆದ್ದಾರಿಗಳ ಡಾಂಬರೀಕರಣ ಮತ್ತು ಡಿವೈಡರ್ ಹಾಕಲಾಗಿದೆ.

ಹೀಗಾಗಿ ಕೆಲ ದ್ವಿಚಕ್ರ ವಾಹನ ಸವಾರರು ಅತಿವೇಗದ ಚಾಲನೆಯಿಂದ ಅಪಘಾತ ಮಾಡುತ್ತಿದ್ದಾರೆ. ದ್ವಿಚಕ್ರ ವಾಹನಗಳ ಸೈಲೆನ್ಸರ್ ಪೈಪ್ ಮೂಲಕ ಬರುವ ಅತಿಯಾದ ಶಬ್ದ ಮಾಲಿನ್ಯಕ್ಕೆ ಕಾರಣವಾಗಿದೆ.

ವಾಹನಗಳ ಕ್ರಮಬದ್ಧ ನಿಲುಗಡೆ, ಬಿಡಾಡಿ ದನಗಳನ್ನು ಪುರಸಭೆ ಆಡಳಿತ, ಪೊಲೀಸ್ ಇಲಾಖೆ ಸ್ಥಳಾಂತರಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂಬುದು ನಾಗರಿಕರ ಒತ್ತಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net