

ಹರಿಪ್ರಸಾದ್ ನಂದಳಿಕೆ ಕಾರ್ಕಳ ಈ ರಸ್ತೆಯಲ್ಲಿ ವಾಹನ ಬಿಡಿ ನಡೆದುಕೊಂಡು ಹೋಗಲು ಕೂಡ ಹರಸಾಹಸ ಪಡುವಂತಾಗಿದೆ. ರಸ್ತೆಯಲ್ಲಿ ಸೃಷ್ಟಿಯಾಗಿರುವ ಬೃಹದಾಕಾರದ ಗುಂಡಿಗಳಿಂದ ವಾಹನ, ಜನ ಸಂಚಾರ ದುಸ್ತರವಾಗಿದೆ. ಇದು ಬೆಳ್ಮಣ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಂತ್ರದಿಂದ ನಂದಳಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಳಿಕಟ್ಟೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಕಥೆ. ಈ ರಸ್ತೆ ಹೊಂಡ ಗುಂಡಿಗಳಿಂದ ಸಂಪೂರ್ಣ ಹದಗೆಟ್ಟಿದ್ದು, ಹಲವು ವರ್ಷಗಳಿಂದ ದುರಸ್ತಿ ಕಂಡಿಲ್ಲ. ಬೃಹದಾಕಾರದ ಗುಂಡಿಗಳಿಂದ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸವಾರರು ಪ್ರತಿದಿನ ಅಪಘಾತದ ಭೀತಿಯಲ್ಲೇ ಸಂಚರಿಸಬೇಕಾದ ಸ್ಥಿತಿ ನಿರ್ವಾಣವಾಗಿದೆ. ರಸ್ತೆ ಬದಿ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯೂ ಇಲ್ಲ. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷೃವೇ ಇದಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಮುಖ ಕೊಂಡಿ ರಸ್ತೆ: ನಂದಳಿಕೆ ಗ್ರಾಮ ಪಂಚಾಯಿತಿ ಭಾಗದ ಗೋಳಿಕಟ್ಟೆಯಿಂದ ಜಂತ್ರ ಪರಿಸರ ತಲುಪಲು ಹಾಗೂ ಶಿರ್ವ ಉಡುಪಿ ಕಡೆಯತ್ತ ಸಂಚರಿಸಲು ಜನರಿಗೆ ಈ ರಸ್ತೆಯೇ ಪ್ರಮುಖ ಸಂಪರ್ಕ ಕೊಂಡಿ. ಆದರೆ ಈಗ ರಸ್ತೆ ಹದಗೆಟ್ಟಿರುವುದರಿಂದ ಸುತ್ತಿ ಬಳಸಿ ಸಂಚರಿಸುವಂತಾಗಿದೆ. ಈ ರಸ್ತೆಯನ್ನು ಸರಿಪಡಿಸಿದರೆ ಒಂದು ಕಿ.ಮೀ ಅಂತರದಲ್ಲಿ ರಾಜ್ಯ ಹೆದ್ದಾರಿ ತಲುಪಲು ಅನುಕೂಲವಾಗುತ್ತದೆ.
ಕಲ್ಲುಕ್ವಾರಿ ಕ್ರಷರ್‌ಗಳಿಂದ ಲೋಡು ತುಂಬಿದ ಭಾರಿ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವುದರಿಂದ ರಸ್ತೆ ಗುಂಡಿಬಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ. ಈ ಭಾಗದಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧವಿದ್ದರೂ ಆದೇಶ ಪಾಲನೆಯಾಗುತ್ತಿಲ್ಲ.
ಈ ರಸ್ತೆ ದುರಸ್ತಿ ಕಂಡು ಎಷ್ಟೋ ಸಮಯವಾಗಿದೆ. ಭಾರಿ ವಾಹನಗಳ ಸಂಚಾರದಿಂದ ತೀರ ಹದಗೆಟ್ಟಿದ್ದು, ದ್ವಿಚಕ್ರ ವಾಹನಗಳಲ್ಲಿ ಓಡಾಡಲೂ ಯೋಗ್ಯವಾಗಿಲ್ಲ. ರಸ್ತೆ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕಿದೆ. ಅನಿಲ್, ಗ್ರಾಮಸ್ಥ
ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ಜನ ಸುತ್ತಿ ಬಳಸಿ ಹೋಗಬೇಕಾದ ಸ್ಥಿತಿ ನಿರ್ವಾಣವಾಗಿದೆ. ಭಾರಿ ವಾಹನಗಳನ್ನು ಈ ಭಾಗದ ರಸ್ತೆಯಲ್ಲಿ ನಿಷೇಧಿಸಿದ್ದರೂ ಮತ್ತೆ ಓಡಾಡುತ್ತಿದ್ದು ಈ ಬಗ್ಗೆ ಸ್ಥಳೀಯ ಪಂಚಾಯಿತಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಸಂತೋಷ್, ಸ್ಥಳೀಯ https://www.vijayavani.net/health-check-up-camp-in-padukare https://www.vijayavani.net/sri-mallikarjuna-society-annual-meeting