

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಎಷ್ಟೇ ಪ್ರಯತ್ನ ಪಟ್ಟರೂ ಹು-ಧಾ ಅವಳಿ ನಗರದಲ್ಲಿ ಸಂಚಾರ ನಿಯಮಗಳ ಪಾಲನೆಯಾಗುತ್ತಿಲ್ಲ. ದಂಡ ಹಾಕಿದರೂ, ಪ್ರಕರಣ ದಾಖಲಿಸಿದರೂ ಸಂಚಾರ ನಿಯಮಗಳ ಉಲ್ಲಂಘನೆ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ನಾಗರಿಕರನ್ನು ಒಳಗೊಂಡ ‘ಟ್ರಾಫಿಕ್ ಚಾಂಪಿಯನ್ಸ್’ ಎಂಬ ಹೊಸ ಪ್ರಯತ್ನ ನಡೆಸಿದ್ದೇವೆ ಎಂದು ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ತಿಳಿಸಿದರು.
ಶನಿವಾರ ಸಂಜೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇಂಥದೊಂದು ಪ್ರಯತ್ನ ಮಾಡಲಾಗಿದೆ. ಆಸಕ್ತ ಯುವ ಜನರಿಗೆ ಸಂಚಾರ ನಿಯಮಗಳ ಕುರಿತು 1 ವಾರ ತರಬೇತಿ ನೀಡುತ್ತೇವೆ. ಇಂದಿನಿಂದ ಮೊದಲ ಬ್ಯಾಚಿನ ತರಬೇತಿ ಆರಂಭಗೊಂಡಿದೆ. ಇವರು ತರಬೇತಿ ಮುಗಿದ ಬಳಿಕ ಅವಳಿ ನಗರದ ಪ್ರಮುಖ ವೃತ್ತಗಳಲ್ಲಿ ಸಂಚಾರ ಪೊಲೀಸರೊಂದಿಗೆ ಕೆಲಸ ನಿರ್ವಹಿಸುವರು ಎಂದು ವಿವರಿಸಿದರು.
ಟ್ರಾಫಿಕ್ ಚಾಂಪಿಯನ್ಸ್ಗಳು ದಿನದಲ್ಲಿ 2-3 ತಾಸು ಕೆಲಸ ನಿರ್ವಹಿಸಲಿದ್ದಾರೆ. ಮೊದಲ ಹಂತದಲ್ಲಿ 50 ಜನ ಮುಂದೆ ಬಂದಿದ್ದಾರೆ. ಸಂಚಾರ ನಿಯಂತ್ರಣದಲ್ಲಿ ಹೀಗೆ ಜನರನ್ನು ಸಹಭಾಗಿಯನ್ನಾಗಿ ಮಾಡುವುದರಿಂದ ಮುಂದಿನ ದಿನಗಳಲ್ಲಿ ಸಂಚಾರ ನಿಯಮಗಳನ್ನು ಸಾರ್ವಜನಿಕರು ಪಾಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.