

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಗಲಭೆ ಪ್ರಕರಣ ವಾಪಸ್ ಪಡೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ ೇರಾವ್ ಹಾಕಿ, ಮನವಿ ಸಲ್ಲಿಸಲು ಯತ್ನಿಸಿದ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದು, ಬಿಡುಗಡೆಗೊಳಿಸಿದರು.
ವಿವಿಧ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭಾನುವಾರ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ವಿಮಾನ ನಿಲ್ದಾಣದಿಂದ ಸವದತ್ತಿಗೆ ಸಿಎಂ ಸಾಗುವ ಗೋಕುಲ ರಸ್ತೆಯ ಅಕ್ಷಯ ಪಾರ್ಕ್ ವೃತ್ತದ ಬಳಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು, ಕೆಲಹೊತ್ತು ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಆಗಮಿಸುತ್ತಿದ್ದಂತೆ ನಡು ರಸ್ತೆಯಲ್ಲೇ ಅವರನ್ನು ತಡೆದು ‘ಯಾವುದೇ ಕಾರಣಕ್ಕೂ ಹಳೇ ಹುಬ್ಬಳ್ಳಿಯ ಗಲಭೆಕೋರರ ಮೇಲಿನ ಪ್ರಕರಣವನ್ನು ವಾಪಸ್ ಪಡೆಯಬಾರದು ಮತ್ತು ಅತ್ಯಾಚಾರದ ಆರೋಪ ಹೊತ್ತಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಮನವಿ ಸಲ್ಲಿಸಲು ತಯಾರಿ ಮಾಡಿಕೊಂಡಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನವೇ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಮತ್ತು ಅನೇಕ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.
ಬಿಜೆಪಿ ಕಾರ್ಯಕರ್ತರು ರಸ್ತೆಗೆ ಇಳಿಯದಂತೆ ಅಕ್ಷಯ ಪಾರ್ಕ್ ವೃತ್ತದ ಸುತ್ತಲೂ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದರೂ ಪೊಲೀಸರ ಕಣ್ಣು ತಪ್ಪಿಸಿ ಸಂಚಾರ ತಡೆ ನಡೆಸುವಲ್ಲಿ ಕಾರ್ಯಕರ್ತರು ಯಶಸ್ವಿಯಾದರು. ಇದರಿಂದ ಅರ್ಧ ಗಂಟೆ ಕಾಲ ಗೋಕುಲ ರಸ್ತೆ ಸಂಪೂರ್ಣ ಬಂದ್ ಆಗಿತ್ತು.
ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಮಾತನಾಡಿ, ಗಲಭೆಕೋರರ ವಿರುದ್ಧ ಅನೇಕ ವೀಡಿಯೋ ಸಾಕ್ಷೃದ ತುಣುಕುಗಳಿವೆ. ಪೊಲೀಸರ ಮೇಲೆ ಕ್ರೌರ್ಯ ಮೆರೆದಿದ್ದ ದೇಶದ್ರೋಹಿಗಳು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯನ್ನೇ ಧ್ವಂಸ ಗೊಳಿಸುವ ಯೋಜನೆಯಲ್ಲಿದ್ದರು. ಅಂಥವರನ್ನು ರಕ್ಷಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶದ್ರೋಹಿಗಳಿಗೆ, ಭಯೋತ್ಪಾದಕರಿಗೆ ರಕ್ಷಣೆ ನೀಡುತ್ತಿದ್ದಾರೆ. ಇನ್ನಾದರೂ ಒಂದು ವರ್ಗದ ಒಲೈಕೆ ರಾಜಕಾರಣ ಬಿಟ್ಟು ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಆಗ್ರಹಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ, ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಾಜಿ ಶಾಸಕ ಅಶೋಕ ಕಾಟವೆ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಮಾಜಿ ಉಪ ಮಹಾಪೌರ ಉಮಾ ಮುಕುಂದ, ಲಿಂಗರಾಜ ಪಾಟೀಲ, ರಾಜು ಜರತಾರಘರ, ರವಿ ನಾಯಕ, ಕೃಷ್ಣ ಗಂಡಗಾಳೇಕರ, ರಾಜು ಕಾಳೆ, ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.