

ಬೆಳಗಾವಿ: ಕೋವಿಡ್-19ನಿಂದಾಗಿ ಸಂಕಷ್ಟಕ್ಕೆ ಸಲುಕಿ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಹೋಟೆಲ್ ಇತರೆ ವ್ಯಾಪಾರಸ್ಥರು, ಖಾಸಗಿ ವಾಹನ, ಆಟೋ ಚಾಲಕರ ಆದಾಯಕ್ಕೆ ಇದೀಗ ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಿಂದ ಹೊಡೆತ ಬಿದ್ದಿದೆ.
ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ, ಒಳಚರಂಡಿ ಮತ್ತು ಪಾಲಿಕೆ, ಜಲಮಂಡಳಿ ವತಿಯಿಂದ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ. ಮತ್ತೊಂದೆಡೆ, ಸಂಚಾರಿ ಪೊಲೀಸರು ಪ್ರಮುಖ ರಸ್ತೆಗಳ ಪ್ರವೇಶಕ್ಕೆ ಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡಿದ್ದಾರೆ. ಹೀಗಾಗಿ ಗಾಂಧಿನಗರ, ಕೇಂದ್ರ ಬಸ್ ನಿಲ್ದಾಣ, ಜಿಲ್ಲಾಸ್ಪತ್ರೆ ರಸ್ತೆ, ಹಳೇ ಪಿಬಿ ರಸ್ತೆ, ಚನ್ನಮ್ಮ ವೃತ್ತ, ಕಾಲೇಜ್ ರಸ್ತೆ, ಶಿವಬಸವ ನಗರದಲ್ಲಿ ನಿತ್ಯವೂ ವಾಹನ ದಟ್ಟಣೆ ಉಂಟಾಗುತ್ತಿದ್ದು, ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ.
ಮಾರ್ಗಗಳು ಬಂದ್: ಕಳೆದ ನಾಲ್ಕೈದು ತಿಂಗಳುಗಳಿಂದ ಏಕಕಾಲದಲ್ಲಿ ಸ್ಮಾರ್ಟ್ ಸಿಟಿ , ಪಾಲಿಕೆ, ಹೆಸ್ಕಾಂ ಹಾಗೂ ಜಲಮಂಡಳಿಗಳಿಂದ ರಸ್ತೆ, ಚರಂಡಿ ಸೇರಿದಂತೆ 230ಕ್ಕೂ ಅಧಿಕ ಕಾಮಗಾರಿ ನಡೆಯುತ್ತಿವೆ. ಹಾಗಾಗಿ ಕೆಲ ರಸ್ತೆ ಮಾರ್ಗಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಆದರೆ, ಸಂಚಾರಿ ಪೊಲೀಸರು ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ವಾಹನಗಳು ಸಿಂಗಲ್ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದು, ಟ್ರಾಫಿಕ್ ಜಾಮ್‌ನಿಂದಾಗಿ ಕಿರಿಕಿರಿ ಅನುಭವಿಸುವಂತಾಗಿದೆ.
ವ್ಯಾಪಾರಿಗಳ ಆಕ್ರೋಶ: ಸಂಚಾರ ದಟ್ಟಣೆಯಿಂದಾಗಿ ಹೋಟೆಲ್ ಸೇರಿದಂತೆ ಇತರೆ ವ್ಯಾಪಾರಸ್ಥರಿಗೆ ದೊಡ್ಡ ಪ್ರಮಾಣದಲ್ಲಿ ಆದಾಯಕ್ಕೆ ಹೊಡೆತ ಬಿದ್ದಿದೆ. ಪಾಲಿಕೆ ಅಧಿಕಾರಿಗಳು ಪ್ರತ್ಯೇಕ ಪಾರ್ಕಿಂಗ್ ಸೌಲಭ್ಯ ಕಲ್ಪಿಸಿಲ್ಲ. ಹಾಗಾಗಿ ಸವಾರರು ರಸ್ತೆ ಬದಿಯಲ್ಲಿಯೇ ವಾಹನ ನಿಲ್ಲಿಸುತ್ತಿದ್ದಾರೆ. ಇದರಿಂದಾಗಿ ವಾಹನವಿರುವ ಗ್ರಾಹಕರು ಬರುತ್ತಿಲ್ಲ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡು ವರ್ಷಗಳಿಂದ ಕೇಂದ್ರ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿದ್ದು, ಪೂರ್ಣಗೊಂಡಿಲ್ಲ. ಹಾಗಾಗಿ ನಿಲ್ದಾಣಕ್ಕೆ ಬಂದು ಹೋಗುವ ಬಸ್‌ಗಳ ಪ್ರವೇಶಕ್ಕೆ ರಸ್ತೆಯ ಒಂದು ಭಾಗದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಧಾರವಾಡ, ಬಾಗಲಕೋಟೆ, ವಿಜಯಪುರ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಬೆಳಗಾವಿ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಹೋಗುವ ಸುಮಾರು 680ಕ್ಕೂ ಅಧಿಕ ಬಸ್‌ಗಳು ಈ ರಸ್ತೆಯಲ್ಲಿಯೇ ಹಲವು ನಿಮಿಷಗಳ ಕಾಲ ನಿಲ್ಲುತ್ತಿವೆ. ಇದರಿಂದ ಬಸ್ ನಿಲ್ದಾನ ಪಕ್ಕದ ರಸ್ತೆ ಮುಖಾಂತರವಾಗಿ ಮುಂದೆ ಸಾಗುವ ವಾಹನಗಳೂ ಈದೇ ರಸ್ತೆಯಲ್ಲಿ ಆಗಮಿಸುವುದರಿಂದ ಟ್ರಾಫಿಕ್ ಜಾಮ್ ಆಗಿ ತೀವ್ರ ಸಮಸ್ಯೆ ಉಂಟಾಗುತ್ತಿದೆ.
ನಗರದಲ್ಲಿನ ಸಂಚಾರ ದಟ್ಟಣೆ ಸಮಸ್ಯೆ ಪರಿಹರಿಸಲು ಪರ್ಯಾಯ ಯೋಜನೆ ರೂಪಿಸಲಾಗುತ್ತಿದೆ. ರಸ್ತೆ ಬದಿ ವ್ಯಾಪಾರಿಗಳ ತೆರವು, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಕುರಿತು ಪಾಲಿಕೆಗೆ ಸೂಚಿಸಲಾಗಿದೆ. ಶೀಘ್ರದಲ್ಲಿ ಟ್ರಾಫಿಕ್ ಕಿರಿಕಿರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತೇವೆ.| ಡಾ. ಕೆ.ತ್ಯಾಗರಾಜ ನಗರ ಪೊಲೀಸ್ ಆಯುಕ್ತ, ಬೆಳಗಾವಿನಗರದಲ್ಲಿ ಅಲ್ಲಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗುತ್ತಿದ್ದು, ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಗುವುದು. ಸ್ಮಾರ್ಟ್ ಸಿಟಿ, ಚರಂಡಿ ಇತರೆ ಕಾಮಗಾರಿ ನಡೆಯುತ್ತಿರುವುದರಿಂದ ಈ ಸಮಸ್ಯೆಉಂಟಾಗಿದೆ.| ಕೆ.ಎಚ್. ಜಗದೀಶ ಪಾಲಿಕೆ ಆಯುಕ್ತ, ಬೆಳಗಾವಿ