ಗ್ರಾಮೀಣ ಚುನಾವಣೆಗೆ ಮತಪೆಟ್ಟಿಗೆ: ಇವಿಎಂ ಟ್ರೆಂಡ್ ಮಧ್ಯೆ ಸಾಂಪ್ರದಾಯಿಕ ಚುನಾವಣೆ ಸೊಗಡು

Election
Published on

ವೇಣುವಿನೋದ್ ಕೆ.ಎಸ್ ಮಂಗಳೂರು

ಕಳೆದ ಕೆಲವು ವರ್ಷಗಳಿಂದ ಇಲೆಕ್ಟ್ರಾನಿಕ್ ಮತಯಂತ್ರಗಳಿಗೆ ಜನ ಒಗ್ಗಿಕೊಂಡಾಗಿದೆ, ಬಟನ್ ಅದುಮಿ ಬಂದರೆ ಮತ ಬಿದ್ದಂತೆ...

ಚಿಹ್ನೆ ಹುಡುಕುವುದು, ಅದರ ಮುಂದಿನ ಕಾಲಂನಲ್ಲಿ ಮತದ ಮುದ್ರೆ ಹಾಕುವುದು, ಮಡಚುವುದು, ಪೆಟ್ಟಿಗೆಗೆ ಹಾಕುವುದು ಇವೆಲ್ಲವನ್ನೂ ಇವಿಎಂ ಜಮಾನಾದಲ್ಲಿ ಜನ ಮರೆಯುತ್ತ ಬರುತ್ತಿದ್ದಾರೆ. ಆದರೆ ಗ್ರಾಮ ಪಂಚಾಯಿತಿ ಚುನಾವಣೆ ಅವೆಲ್ಲವನ್ನು ಮತ್ತೆ ಗ್ರಾಮೀಣ ಜನರಿಗೆ ನೆನಪಿಸುತ್ತಿದೆ!

ಹಾಗಾದರೆ ಈ ಅತ್ಯಾಧುನಿಕ ಕಾಲದಲ್ಲೂ ಗ್ರಾಮಾಯಣಕ್ಕೆ ಯಾಕೆ ಇನ್ನೂ ಇವಿಎಂಗಳು ಬಳಕೆಯಾಗುತ್ತಿಲ್ಲ? ಮುಖ್ಯ ಕಾರಣ ಗ್ರಾಪಂಗಳ ಸಂಖ್ಯೆ ಹೆಚ್ಚಿರುವುದು. ರಾಜ್ಯ ಚುನಾವಣಾ ಆಯೋಗದಲ್ಲಿ ಗ್ರಾಪಂ ಚುನಾವಣೆ ನಿರ್ವಹಿಸುವಷ್ಟು ಮತಯಂತ್ರಗಳಿಲ್ಲ. ಮತ ಪೆಟ್ಟಿಗೆ ಬಳಕೆಗೆ ಇನ್ನೊಂದು ಪ್ರಮುಖ ಕಾರಣ ಎಂದರೆ ಒಂದು ಮತಕ್ಷೇತ್ರದಲ್ಲಿ ‘ಬಹು ಮತದಾನ ವ್ಯವಸ್ಥೆ’ ಇರುತ್ತದೆ. ಒಬ್ಬ ಮತದಾರ 2, 3, 4, 5ರವರೆಗೂ ಮತ ಹಾಕಬೇಕಾಗುತ್ತದೆ. ಈ ವ್ಯವಸ್ಥೆಗೆ ಮತ ಯಂತ್ರ ಸಿದ್ಧಪಡಿಸುವುದು ಕಷ್ಟ, ಆ ಬಗ್ಗೆ ಚುನಾವಣಾ ಸಿಬ್ಬಂದಿಗೆ ತರಬೇತಿಯೂ ಕೊಟ್ಟಿಲ್ಲ.

ಕೌಂಟಿಂಗ್ ಸುದೀರ್ಘ: ಮತ ಯಂತ್ರಗಳಿಲ್ಲದಿದ್ದರೆ ಮತದಾನ ಪ್ರಕ್ರಿಯೆಗೆ ದೊಡ್ಡ ಸಮಸ್ಯೆಯೇನೂ ಆಗದು, ಆದರೆ ದೊಡ್ಡ ಕಿರಿಕಿರಿ ಎಂದರೆ ಮತ ಎಣಿಕೆಯದ್ದೇ ಎನ್ನುತ್ತಾರೆ ಅಧಿಕಾರಿಗಳು. ಮತದಾನದ ವೇಳೆ ರಿಯಲ್ ಟೈಂನಲ್ಲಿ ಎಷ್ಟು ಮತದಾನ ಆಗಿದೆ ಎನ್ನುವುದು ತಿಳಿಯುತ್ತದೆ, ಪೆಟ್ಟಿಗೆಯಲ್ಲಿ ಇದು ಆಗದು. ಮತ ಎಣಿಕೆ ವೇಳೆ ಮತ ಯಂತ್ರವಿದ್ದರೆ ಒಂದು ಬಟನ್ ಒತ್ತಿದಾಗ ಮತಗಳ ಸಂಖ್ಯೆ ಡಿಸ್‌ಪ್ಲೇ ಆಗುತ್ತದೆ. ಆದರೆ ಪೆಟ್ಟಿಗೆಯಲ್ಲಿ ಪ್ರತಿ ಮತವೂ ಎಣಿಕೆಯಾಗಬೇಕು. ಕೆಲವೊಮ್ಮೆ ಅಭ್ಯರ್ಥಿಗಳ ಸಂಶಯ ಪರಿಹಾರಕ್ಕೆ ಮರು ಎಣಿಕೆ ಮಾಡಬೇಕು ಇದು ಫಲಿತಾಂಶದ ವಿಳಂಬಕ್ಕೆ ಕಾರಣವಾಗಬಹುದು. ಉಳಿದಂತೆ ಇತರ ಚುನಾವಣೆಯಂತೆಯೇ ಬೆಳಗ್ಗೆ 7ರಿಂದ ಸಾಯಂಕಾಲ 5ರವರೆಗೆ ಮತದಾನ ನಡೆಯುತ್ತದೆ. ಇವಿಎಂನಲ್ಲಿ ಬರುವ ತಾಂತ್ರಿಕ ಸಮಸ್ಯೆಗಳು ಸಾಂಪ್ರದಾಯಿಕ ಮತದಾನದಲ್ಲಿ ಬರುವುದಿಲ್ಲ.

ಚುನಾವಣೆಗೆ ಪೆಟ್ಟಿಗೆ ಕೊರತೆ ಇಲ್ಲ: ದ.ಕ.ಜಿಲ್ಲೆಯಲ್ಲಿ ಚುನಾವಣೆಗೆ ಬೇಕಾದಷ್ಟು ಮತ ಪೆಟ್ಟಿಗೆಗಳಿವೆ. ಅವುಗಳನ್ನು ಆಗಾಗ ನಡೆಯುವ ಬ್ಯಾಂಕ್, ಸೊಸೈಟಿಗಳ ಚುನಾವಣೆಗೆ ನೀಡಲಾಗುತ್ತದೆ. ಹಾಗಾಗಿ ರಿಪೇರಿಯಾಗಿ ಇರುತ್ತವೆ, ಪೇಂಟ್ ಕೂಡ ಮಾಡಲಾಗಿದೆ ಎನ್ನುತ್ತಾರೆ ಮಂಗಳೂರು ತಹಸೀಲ್ದಾರ್ ಗುರುಪ್ರಸಾದ್. ದ.ಕ. ಜಿಲ್ಲೆಯಲ್ಲಿ 220 ಗ್ರಾಪಂ ಸಂಬಂಧಿಸಿ ಒಟ್ಟು 1,527 ಮತಗಟ್ಟೆಗಳಿದ್ದು 3,222 ಸದಸ್ಯರನ್ನು ಆರಿಸಬೇಕಾಗುತ್ತದೆ. ಇದಕ್ಕಾಗಿ 2,626 ಮತಪೆಟ್ಟಿಗೆ ಸಿದ್ಧಪಡಿಸಿ ಇರಿಸಲಾಗಿದೆ. ಮತಪತ್ರ ಮುದ್ರಣವನ್ನು ಸ್ಥಳೀಯವಾಗಿ ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅವುಗಳಲ್ಲಿ ತಪ್ಪು ಇರದಂತೆ ತಹಸೀಲ್ದಾರ್, ಚುನಾವಣಾಧಿಕಾರಿಗಳು ನೋಡಿಕೊಳ್ಳುತ್ತಾರೆ.

ಉಡುಪಿಯಲ್ಲಿ 1,200 ಮತಪೆಟ್ಟಿಗೆ: ಉಡುಪಿ ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, 1200 ಮತ ಪೆಟ್ಟಿಗೆಗಳು ಸಿದ್ಧಗೊಂಡಿವೆ ಎಂದು ಚುನಾವಣೆ ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಹಳೆಯ ಮತಪೆಟ್ಟಿಗೆಗಳನ್ನು ಸರಿಪಡಿಸಲಾಗಿದೆ. ಮೊದಲ ಹಂತದ ಚುನಾವಣೆಗೆ ಸಂಬಂಧಿಸಿ ಜಿಲ್ಲಾ ಚುನಾವಣಾಧಿಕಾರಿಗಳ ಸೂಚನೆ ಮೇರೆಗೆ ಆಯಾ ತಾಲೂಕು ತಹಸೀಲ್ದಾರ್‌ಗಳಿಗೆ ಮತಪೆಟ್ಟಿಗೆ ಸೇರಿದಂತೆ ಅಗತ್ಯ ಚುನಾವಣೆ ಪರಿಕರಗಳನ್ನು ಪೂರೈಸಲಾಗಿದೆ. ಸೋಮವಾರ ಬೆಳಗ್ಗೆ ತಾಲೂಕು ಮಸ್ಟರಿಂಗ್ ಸೆಂಟರ್‌ಗಳಿಂದ ಮತಗಟ್ಟೆಗಳಿಗೆ ತೆರಳಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net