

ಹುಬ್ಬಳ್ಳಿ: ಸಾರ್ವಜನಿಕ ಶಿಕ್ಷಣ ಇಲಾಖೆ, ಡಿ.ಎಸ್.ಇ.ಆರ್.ಟಿ ಸಹಯೋಗದಲ್ಲಿ ಇಂಡಿಯಾ ಫಾಂಡೇಷನ್ ಫಾರ್ ಆರ್ಟ್ಸ್, ಕಲಿ-ಕಲಿಸು ಕಲಾ ಅಂತರ್ಗತ ಕಲಿಕಾ ಯೋಜನೆ ಅಂಗವಾಗಿ ತಾಲೂಕಿನ ಕಿರೇಸೂರ ಸರ್ಕಾರಿ ಪ್ರೌಢಶಾಲಾ ಆವರಣದ ಅರಳಿಕಟ್ಟೆಯ ತೆರೆದ ವಾಚನಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಸಾಂಪ್ರದಾಯಿಕ ಕಲೆ ಅರಳಿತು.
ಕಳೆದ ಶನಿವಾರ ಮತ್ತು ಭಾನುವಾರದ ಶಾಲಾ ರಜಾದಿನಗಳಂದು ಮಕ್ಕಳು ಮತ್ತು ಶಿಕ್ಷಕರು ಕೈಯಲ್ಲಿ ಬ್ರಷ್ ಹಿಡಿದು ಅರಳಿಕಟ್ಟೆಗೆ ಕೆಂಪು ಬಣ್ಣ ಬಳಿದು, ಬಿಳಿ ಬಣ್ಣದ ಮೂಲಕ ಕಟ್ಟೆಯನ್ನು ಸಾಂಪ್ರದಾಯಿಕ ಕಲೆಗಳಿಂದ ಶೃಂಗರಿಸಿದರು.
ಕಟ್ಟೆಯ ಸುತ್ತಲೂ ಜಾತ್ರೆ, ತೇರು, ಮಜಲು, ವಿವಿಧ ವಾದ್ಯವೃಂದ, ವಿವಿಧ ಕಲೆಗಳು, ಗ್ರಾಮೀಣ ಜೀವನ, ಎತ್ತು, ಚಕ್ಕಡಿ, ಬಣವೆ, ರೈತನ ರೇಖಾ ಚಿತ್ರ, ಕುದುರೆ, ಆನೆ, ಒಂಟೆ, ನವಿಲು ಹೀಗೆ ವಿವಿಧ ಪ್ರಾಣಿ ಪಕ್ಷಿಗಳನ್ನು ಚಿತ್ರಿಸಲಾಯಿತು.
ಕಟ್ಟೆಯ ಮೇಲಿನ ಭಾಗದಲ್ಲಿ ಗ್ರಾಮೀಣ ಕ್ರೀಡೆಗಳ ಅಂಕಣಗಳನ್ನು ಬಿಡಿಸಿದ್ದು ವಿಶೇಷ. ಕುಂಟೆಪಿಲ್ಲೆ, ಚೆಕ್ಕಾ, ಹುಲಿಮನಿ, ಹಾವು ಏಣಿ, ಪಗಡೆ, ಚದುರಂಗ ಇತ್ಯಾದಿ ಆಟಗಳ ಅಂಕಣಗಳು ಬಿಡುವಿನ ಸಮಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿನ್ಯಾಸಗೊಳಿಸಲಾಯಿತು. ಎರಡು ದಿನ ಒಟ್ಟು 12 ತಾಸುಗಳ ಕಾಲ ಸುದೀರ್ಘವಾಗಿ ನಡೆದ ಈ ಚಿತ್ರಕಲೆ ಚಟುವಟಿಕೆಯಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.
ಖ್ಯಾತ ಕಲಾವಿದ ಎಂ.ವೈ. ಬಡಿಗೇರ, ಮಕ್ಕಳಿಗೆ ಕಲೆಯ ಉಗಮದ ಇತಿಹಾಸ ತಿಳಿಸುತ್ತ ಹಸೆ ಚಿತ್ತಾರ, ರೇಖಾ ಚಿತ್ರಗಳು, ನಿಸರ್ಗ ಚಿತ್ರಗಳ ಜ್ಞಾನ ನೀಡಿ ಮಕ್ಕಳ ಕೈಗೆ ಬ್ರಷ್ ಕೊಡಲಾಯಿತು.
ಅರಳೀಕಟ್ಟೆಯ ಸಂಯೋಜಕ, ಶಿಕ್ಷಕ ಡಾ. ಲಿಂಗರಾಜ ರಾಮಾಪೂರ, ಮುಖ್ಯೋಪಾಧ್ಯಾಯ ಸುಮನ ತೇಲಂಗ, ಗಣ್ಯರಾದ ಪ್ರಭು ರಾಯನಗೌಡ್ರ, ಮಂಜುನಾಥ ಹುಬ್ಬಳ್ಳಿ ಉಪಸ್ಥಿತರಿದ್ದರು.