

ಗುರುಗುಂಟಾ: ಹಬ್ಬದ ಹೆಸರಿನಲ್ಲಿ ದ್ವೇಷ, ಅಸೂಯೆ, ಹಗೆತನ ಸಾಧಿಸಿ ಗಲಭೆ ಸೃಷ್ಟಿಸಿದರೆ ಕಠಿಣ ಕ್ರಮ ಕಟ್ಟಿಟ್ಟ ಬುತ್ತಿ ಎಂದು ಹಟ್ಟಿಚಿನ್ನದಗಣಿ ಠಾಣೆ ಪಿಐ ಹೊಸಕೇರಪ್ಪ ಹೇಳಿದರು.
ಮೊಹರಂ ಅಂಗವಾಗಿ ಸ್ಥಳೀಯ ಉಪ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಶಾಂತಿಪಾಲನಾ ಸಭೆಯಲ್ಲಿ ಗುರುವಾರ ಮಾತನಾಡಿದರು. ಕಾನೂನು ಸುವ್ಯವಸ್ಥೆ ಹದಗೆಡಿಸದೆ ಶತಮಾನಗಳ ಇತಿಹಾಸ ಹೊಂದಿರಿವ ಮತ್ತು ಭಾವೈಕ್ಯದ ಕೊಂಡಿಯಾದ ಮೊಹರಂ ಅನ್ನು ಹಿಂದು-ಮುಸ್ಲಿಮರು ಸಾಂಪ್ರದಾಯಿಕವಾಗಿ ಆಚರಿಸಿ ಗ್ರಾಮಕ್ಕೆ ಕಪ್ಪುಚುಕ್ಕೆ ತರದಂತೆ ನೋಡಿಕೊಳ್ಳಬೇಕು. ಹೆಚ್ಚಿನ ಜನ ಸೇರುವ ದಿನಗಳಂದು ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗುವುದು ಎಂದರು.
ಮೊಹರಂಆಚರಣೆಯ ಮಾಹಿತಿಯನ್ನು ಸೈಯದ್ ಖುಸುರು ಖಾಜಿಸಾಬ್ ನೀಡಿದರು. ಪ್ರಮುಖರಾದ ವಿಶ್ವನಾಥ ಪಟ್ಟಣಶೆಟ್ಟಿ, ಅಮರೇಶನಾಯಕ ರತ್ನಗಿರಿ, ಬಸ್ಸಣ್ಣ ಭೋವಿ, ಭೀಮಣ್ಣ ಹುಜರತಿ, ಸೋಮನಾಥ ನಾಯಕ, ಮಹೆಬೂಬ್ ಸಂತ್ರಾಸ್, ಸೈಯದ್ ಇಸ್ಮಾಯಿಲ್, ಬಬಲು, ಶರಣೋಜಿ ಪವಾರ್, ಲಖನ್ ಬಾಬು, ಹನುಮಂತಗೌಡ, ಹನುಮಂತ ಅಂಬಿಗೇರ್, ಬಾಬು ರತ್ನಗಿರಿ, ಅಮರೇಶ ಕೆಂಪ, ಮುಜಾವರ್‌ಗಳಾದ ಶೇಕ್ ಇಸಾಕ್ ಮಿಯಾ ಪರ್ವಾನ್, ಅಲಿಸಾಬ್, ರಮುದುಷ್ಕ, ಸೋಹಿಲ್, ಮಹೆಬೂಬ್ ನಗಾರಿ ಇತರರಿದ್ದರು.