ಸೆ.27ರಂದು ಪಾರಂಪರಿಕ ವೈದ್ಯರ ಸಮಾವೇಶ: ರಾಜ್ಯ ಪ್ರಧಾನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ಮಾಹಿತಿ

Traditional Medicine Council Pressmeet
Published on

ಮಂಡ್ಯ: ಮದ್ದೂರು ತಾಲೂಕು ಚಿಕ್ಕರಸಿನಕೆರೆಯ ಕಾಲಭೈರವೇಶ್ವರ ಸಮುದಾಯದ ಭವನದಲ್ಲಿ ಸೆ.27ರಂದು ವಲಯ ಮಟ್ಟದ ಪಾರಂಪರಿಕ ವೈದ್ಯರ ಒಂದು ದಿನದ ಸಮಾವೇಶ ಆಯೋಜಿಸಲಾಗಿದೆ ಎಂದು ಪಾರಂಪರಿಕ ವೈದ್ಯ ಪರಿಷತ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ತಿಳಿಸಿದರು.

ಪರಂಪರಗತವಾಗಿ ವೈದ್ಯಕೀಯ ಚಿಕಿತ್ಸಾ ಸೇವೆ ಮಾಡುತ್ತಿರುವ ಪಾರಂಪರಿಕ ವೈದ್ಯರನ್ನು ಗುರುತಿಸುವುದು ಹಾಗೂ ಸಂಘಟಿಸುವುದು ಸಮಾವೇಶದ ಉದ್ದೇಶವಾಗಿದೆ. ಮಾತ್ರವಲ್ಲದೆ ಈ ವೈದ್ಯರ ಜ್ಞಾನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಸಲುವಾಗಿ 23 ವರ್ಷದಿಂದ ಪರಿಷತ್ ಕೆಲಸ ಮಾಡುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜ್ಯದಲ್ಲಿ 3 ಸಾವಿರಕ್ಕೂ ಹೆಚ್ಚು ಪಾರಂಪರಿಕ ವೈದ್ಯರನ್ನು ಗುರುತಿಸಿ ಪರಿಷತ್‌ಗೆ ಸದಸ್ಯರನ್ನಾಗಿ ಮಾಡಿಕೊಳ್ಳಲಾಗಿದೆ. ಈಗಾಗಲೇ ರಾಜ್ಯದ ವಿವಿಧ ಭಾಗದಲ್ಲಿ ನಾಲ್ಕು ವಲಯಮಟ್ಟದ ಸಮಾವೇಶ ಆಯೋಜಿಸಲಾಗಿದೆ. ಅದರಂತೆ ಐದನೇ ಸಮಾವೇಶಕ್ಕೆ ಮಂಡ್ಯ, ರಾಮನಗರ, ಹಾಸನ, ತುಮಕೂರು, ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಯ ಪಾರಂಪರಿಕ ವೈದ್ಯರು ಭಾಗವಹಿಸಲಿದ್ದಾರೆ. ಅಂದಿನ ಸಮಾವೇಶದ ಸಾನಿಧ್ಯವನ್ನು ಪರಿಷತ್‌ನ ಗೌರವಾಧ್ಯಕ್ಷರೂ ಆದ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ವಹಿಸಲಿದ್ದಾರೆ. ಪರಿಷತ್‌ನ ಗೌರವ ಕಾರ್ಯಾಧ್ಯಕ್ಷ ನಿವೃತ್ತ ಆಯುಷ್ ನಿರ್ದೇಶಕ ಗಾ.ನಂ.ಶ್ರೀಕಂಠಯ್ಯ ಉದ್ಘಾಟಿಸಲಿದ್ದಾರೆ. ರಾಜ್ಯಾಧ್ಯಕ್ಷ ಜಿ.ಮಹದೇವಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದರು.

ರಾಜ್ಯಾಧ್ಯಕ್ಷ ಜಿ.ಮಹದೇವಯ್ಯ, ಸದಸ್ಯರಾದ ಬಿ.ಮಂಜುನಾಥ್, ಶಿವಕುಮಾರ್, ತಮ್ಮಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net