'ಆಧುನಿಕತೆಯಿಂದ ಪಾರಂಪರಿಕ ಜೀವನ ಮರೆ'

30
Published on

ಮೈಸೂರು: ಜೀವನ ಶೈಲಿ ಬದಲಾವಣೆ ಮಾಡಿಕೊಂಡು ಪಾರಂಪರಿಕ ಜೀವನ ಕಳೆದುಕೊಂಡಿದ್ದೇವೆ ಎಂದು ನಿವೃತ್ತ ಅಧ್ಯಾಪಕಿ ಡಾ.ಎಸ್.ಪಿ.ಉಮಾದೇವಿ ಬೇಸರ ವ್ಯಕ್ತಪಡಿಸಿದರು.
ಶರಣ ಸಾಹಿತ್ಯ ಪರಿಷತ್ತು ಮೈಸೂರು ಘಟಕದಿಂದ ಡಾ.ರಾಧಾಕೃಷ್ಣನ್ ನಗರದ ಜೆಎಸ್‌ಎಸ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಪರಂಪರೆಯಲ್ಲಿ ಮೌಲ್ಯಯುತ ಜೀವನ ಹಾಸು ಹೊಕ್ಕಾಗಿತ್ತು. ಪ್ರಕೃತಿಯೊಂದಿಗೆ ಸಹ ಜೀವನ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ನಾವು ಜೀವನ ಶೈಲಿ ಬದಲಾವಣೆ ಮಾಡಿಕೊಂಡು ಜೀವನದ ಮೌಲ್ಯಗಳನ್ನು ಕಳೆದುಕೊಂಡಿದ್ದೇವೆ ಎಂದರು.
12ನೇ ಶತಮಾನದಲ್ಲಿ ಶರಣರು ಮೌಲ್ಯಯುತ ಜೀವನವನ್ನು ನಡೆಸಿ ವಿಶ್ವಕ್ಕೆ ಮಾದರಿಯಾಗಿದ್ದರು. ಇಂತಹ ಜೀವನ ವಿಧಾನವನ್ನು ಮತ್ತೆಕಟ್ಟಿಕೊಡುವ ಅಗತ್ಯವಿದೆ ಎಂದು ಹೇಳಿದರು.
ವಿದ್ಯೆ, ವಿನಯ, ವಿವೇಕದ ಮಾತು ನಮ್ಮ ಜೀವನದ ಮೌಲ್ಯಗಳನ್ನು ಹೆಚ್ಚುತ್ತವೆ. ಬಾಲ್ಯದಲ್ಲಿ ಬೆಳೆಸಿಕೊಂಡ ಮೌಲ್ಯಯುತ ಸಂಗತಿಗಳು ಜೀವನ ಪರ್ಯಂತ ಇರುತ್ತವೆ. ಕಣ್ಣಿಗೆ ಕಾಣುವ ಸೌಂದರ್ಯಕ್ಕಿಂತ ಕಣ್ಣಿಗೆ ಕಾಣದ ಹೃದಯ ಸೌಂದರ್ಯ ಅತ್ಯಂತ ಶ್ರೇಷ್ಠ. ಪ್ರೀತಿಯಿಂದ ಸಂಬಂಧ ಉಳಿಯುತ್ತದೆ. ಅಹಂನಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು. ಕಾರ್ಯಕ್ರಮದ ಪ್ರಾಯೋಜಕರಾದ ನಾಗಭೂಷಣ್, ಸೌಮ್ಯಾ ಮಾತನಾಡಿದರು.
ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ ಅಧ್ಯಕ್ಷತೆ ವಹಿಸಿದ್ದರು. ರಸಪ್ರಶ್ನೆ ವಿಜೇತರಿಗೆ ಪ್ರಾಂಶುಪಾಲೆ ಎಂ. ಆಶಾ ಬಹುಮಾನ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net