ಸಾಂಪ್ರದಾಯಿಕ ಆಹಾರ ಪದ್ಧತಿಗೆ ಮರಳುವುದು ಅನಿವಾರ್ಯ : ಡಾ.ಸೌಮ್ಯ ಸ್ವಾಮಿನಾಥನ್

soumya swaminathan
Published on

ಮೈಸೂರು: ಆಧುನಿಕ ಜೀವನಶೈಲಿಗೆ ಜನರು ಮಾರುಹೋದ ನಂತರ ಜನರ ಆಹಾರ ಪದ್ಧತಿಯೂ ಬದಲಾಗಿದ್ದು, ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಜನರು ಮತ್ತೆ ಸಾಂಪ್ರದಾಯಿಕ ಆಹಾರ ಪದ್ಧತಿಗೆ ಮರಳುವ ಅನಿವಾರ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಅಭಿಪ್ರಾಯಪಟ್ಟರು.

ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ (ಸಿಎಫ್‌ಟಿಆರ್‌ಐ) ಹಮ್ಮಿಕೊಂಡಿರುವ ‘ಒಂದು ವಾರ, ಒಂದು ಪ್ರಯೋ ಗಾಲಯ’ ಕಾರ್ಯಕ್ರಮದಲ್ಲಿ ಮಂಗಳವಾರ ಮಹಿಳಾ ಸ್ವಸಹಾಯ ಸಂಸ್ಥೆಗಳು ಮತ್ತು ರೈತ ಉದ್ಯಮ ಕುರಿತ ಸಂವಾದಕ್ಕೆ ಚಾಲನೆ ನೀಡಿ ಮಾತನಾಡಿ, ಆಧುನಿಕ ಆಹಾರ ಪದ್ಧತಿಯಿಂದ ಜನರಲ್ಲಿ ರೋಗ ನಿರೋಧಕ ಅಂಶ ಕಡಿಮೆ ಆಗುತ್ತಿದ್ದು, ಇದರಿಂದ ಕಾಯಿಲೆಯ ಪ್ರಮಾಣ ಕೂಡ ಹೆಚ್ಚಾಗುತ್ತಿದೆ ಕಳವಳ ವ್ಯಕ್ತಪಡಿಸಿದರು.

ದೇಶದಲ್ಲಿ ಆಹಾರ ಪರಂಪರೆಯನ್ನು ಬುಡಕಟ್ಟು ಸಮುದಾಯಗಳು ರಕ್ಷಿಸಿಕೊಂಡು ಬಂದಿದ್ದಾರೆ. ಸರ್ಕಾರ ಇವರಿಗೆ ಬೆಂಬಲವಾಗಿ ನಿಲ್ಲಬೇಕು. ಆ ಮೂಲಕ ಆಹಾರ ಪರಂಪರೆಯನ್ನು ಉಳಿಸುವ ಕಾರ್ಯ ಮಾಡಬೇಕು. ಬುಟಕಟ್ಟು ಹಾಗೂ ಹಿಂದುಳಿದ ಸಮುದಾಯಗಳು ಹಸಿವಿನ ವಿರುದ್ಧ ಹೋರಾಟ ನಡೆಸುತ್ತಿವೆ. ಆರೋಗ್ಯಪೂರ್ಣ ದೇಶ ನಿರ್ಮಾಣ ಮಾಡಲು ಪೌಷ್ಟಿಕ ಆಹಾರವನ್ನು ಎಲ್ಲರಿಗೂ ತಲುಪಿಸಬೇಕು. ರೈತರು ಬೆಳೆದ ಆಹಾರ ಧಾನ್ಯಗಳು, ಉತ್ಪನ್ನಗಳು ಜನರಿಗೆ ತಲುಪಬೇಕು. ರೈತರು ಹಾಗೂ ಗ್ರಾಹಕರ ನಡುವೆ ನೇರ ಸಂಬಂಧ ಏರ್ಪಾಡು ಮಾಡಬೇಕು. ಜನರಲ್ಲಿ ರೋಗ ನಿರೋಧ ಶಕ್ತಿ ವೃದ್ಧಿಸುವ ಸಾಂಪ್ರದಾಯಿಕ ಆಹಾರ ಪದ್ಧತಿಗೆ ಎಲ್ಲರು ಮರಳಬೇಕು ಎಂದು ಕರೆ ನೀಡಿದರು.

ಶಾಲೆಗಳಲ್ಲಿ ಕೈತೋಟಗಳನ್ನು ಬೆಳೆಸಿ ವಿದ್ಯಾರ್ಥಿಗಳಿಗೆ ರೈತರ ಬದುಕು ತಿಳಿಸಿಕೊಡುವ ಪ್ರಯತ್ನ ಮಾಡಬೇಕು. ರೈತರ ಬದುಕು ಹಾಗೂ ಪರಿಸರದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು. ಮಕ್ಕಳಿಗೆ ಪರಿಸರ ಕೇಂದ್ರಿತ ಶಿಕ್ಷಣ ನೀಡುವುದು ಇಂದಿನ ಅನಿವಾರ್ಯತೆಯಾಗಿದೆ. ಹಾಗಿದ್ದಲ್ಲಿ ಮಾತ್ರ ದೇಶದ ಜನರು ಎದುರಿಸುತ್ತಿರುವ ಅಪೌಷ್ಟಿಕತೆ, ತೂಕ ಹೆಚ್ಚಳ, ರಕ್ತದೊತ್ತಡ, ಮಧುಮೇಹ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ದೇಶವು ಸಿರಿಧಾನ್ಯ ಉತ್ಪಾದನೆಯಲ್ಲಿ ವಿಶ್ವದಲ್ಲಿ ಪ್ರಥಮ ಸ್ಥಾನ ಹೊಂದಿದೆ. ಜನರ ಆರೋಗ್ಯ ವೃದ್ಧಿಸುವ ಸಿರಿಧಾನ್ಯ ಉತ್ಪನ್ನಗಳ ಉದ್ಯಮಗಳನ್ನು ಸ್ಥಾಪಿಸಿದರೆ ಅದಕ್ಕೆ ಸೂಕ್ತ ಮಾರುಕಟ್ಟೆ ಒದಗಿಸುವ ಜವಾಬ್ದಾರಿಯನ್ನು ಸರ್ಕಾರ ಹೊತ್ತುಕೊಳ್ಳಬೇಕು. ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಕಿರು ಉದ್ಯಮಗಳನ್ನು ಸ್ಥಾಪಿಸಬೇಕು ಎಂದು ಕರೆ ನೀಡಿದರು.

ಪಶ್ಚಿಮ ಬಂಗಾಳದ ವಿದ್ಯುತ್ ನಿಯಂತ್ರಣ ಆಯೋಗದ ಮುಖ್ಯಸ್ಥ ಡಾ.ಎಂ.ವಿ.ರಾವ್ ಮಾತನಾಡಿ, ಕೃಷಿ ವಲಯಕ್ಕೂ ನ್ಯಾನೋ ತಂತ್ರಜ್ಞಾನ ಪ್ರವೇಶಿಸಿದೆ. ಕ್ವಿಂಟಲ್ ಗೊಬ್ಬರ ಚೀಲದ ಬದಲು ಅರ್ಧ ಲೀಟರ್ ನ್ಯಾನೋ ಯೂರಿಯಾ ಬಳಸಬಹುದು. ಇದರಿಂದ ಸಾಗಣೆ, ಉತ್ಪಾದನಾ ವೆಚ್ಚಗಳು ತಗ್ಗಲಿದೆ ಎಂದರು. ಸಂಸ್ಥೆಯ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣಸಿಂಗ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net