

ಮಂಡ್ಯ: ಹಾಸ್ಯದಿಂದ ಆರೋಗ್ಯ ಹೆಚ್ಚಾಗುತ್ತದೆ. ಅಂತೆಯೇ ನಗುತ್ತಿದ್ದರೆ ನೋವು ಮರೆಯಾಗುತ್ತದೆ ಎಂದು ಹಾಸ್ಯನಟ ಮಿಮಿಕ್ರಿ ಗೋಪಿ ಹೇಳಿದರು.
ನಗರದ ಪಿಇಎಸ್ ಕಾಲೇಜಿನ ಸ್ವಾಮಿವಿವೇಕಾನಂದ ರಂಗಮಂದಿರದಲ್ಲಿ ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನಿಂದ ಆಯೋಜಿಸಿದ್ದ ಪಿಇಎಸ್ ಉತ್ಸವದ ಪಾರಂಪರಿಕ ದಿನೋತ್ಸವದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮನುಷ್ಯ ನಗುವುದನ್ನೇ ಮರೆತು ಬದುಕಿನ ಜಂಜಾಟದಲ್ಲಿ ಓಡುತ್ತಿದ್ದಾನೆ. ಉತ್ತಮ ಆರೋಗ್ಯ, ಗುಣಮಟ್ಟದ ಆಹಾರ ಬಿಟ್ಟು, ಜಂಗ್‌ಫುಡ್‌ನತ್ತ ವ್ಯಾಮೋಹ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಎಚ್ಚರಿಸಿದರು.
ಆಧುನಿಕ ಜಗತ್ತಿನ ಕಾಲೇಜು ಶಿಕ್ಷಣ ವ್ಯವಸ್ಥೆಯ ದಿನಗಳಲ್ಲೂ ದೇಸಿ ಪರಂಪರೆ, ಪಾರಂಪರಿಕ ಪದ್ಧತಿಯನ್ನು ಉಳಿಸಿ ಬೆಳೆಸುತ್ತಿರುವುದು ಉತ್ತಮ. ಮರೆಯಾಗುತ್ತಿರುವ ಜಾನಪದ ಸೊಗಡು ಮತ್ತೆ ಮೈದುಂಬಿಕೊಳ್ಳಲಿ. ಕಾಲೇಜು ವಿದ್ಯಾರ್ಥಿಗಳು ಮೊಬೈಲ್ ಬಳಕೆಗೆ ಹೆಚ್ಚು ಸಮಯ ನೀಡಿದೆ. ಉನ್ನತ ಶಿಕ್ಷಣ, ಪದವಿ, ಸ್ಪರ್ಧಾತ್ಮಕ ಸ್ಪರ್ಧೆಗಳ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಿ. ಐಎಎಸ್, ಕೆಎಎಸ್, ಐಪಿಎಸ್‌ನಂತಹ ದೊಡ್ಡ ದೊಡ್ಡ ಹುದ್ದೆಗಳ ಪಡೆಯಲು ಸಮಯವನ್ನು ಮೀಸಲಿಟ್ಟು ಸಾಧಿಸಿ ಎಂದು ಸಲಹೆ ನೀಡಿದರು.
ಪಿಇಟಿ ಜಂಟಿ ಕಾರ್ಯದರ್ಶಿ ಕೆ.ಆರ್.ದಯಾನಂದ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಹುದ್ದೆಗಳತ್ತ ಹೆಚ್ಚು ಮಹತ್ವ ನೀಡಿ. ಓದಿದ ಕಾಲೇಜುಗಳನ್ನು ಮರೆಯಬೇಡಿ. ಉತ್ತಮ ಸಾಧನೆ ಮಾಡಲು ಸಾಕಷ್ಟು ಸ್ಪರ್ಧೆ ಎದುರಾಗುತ್ತವೆ. ಆದರೆ ಪೂರ್ವ ತಯಾರಿಯೊಂದಿಗೆ ಎಲ್ಲವನ್ನು ಎದುರಿಸಿ ಸಾಧಿಸಿ ಎಂದು ಕಿವಿಮಾತೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಮಂಜುನಾಥ್, ರೂಪದರ್ಶಿ ಐಶ್ವರ್ಯಗೌಡ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ.ವಿ.ಸವಿತಾ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಯಾದ ಪ್ರೊ.ವೀರೇಶ್, ಪ್ರೊ.ಡೇವಿಡ್, ಪ್ರೊ.ಚಂದ್ರಶೇಖರ್, ಪ್ರೊ.ಗಿರೀಶ್, ಪ್ರೊ.ಸಂತೋಷ್, ಪ್ರೊ.ನಂದೀಶ್, ಪ್ರೊ.ಎಂ.ಶಿವಕುಮಾರ್, ಪ್ರೊ.ಜೋಗಿಗೌಡ, ಪ್ರೊ.ಶಾಂತರಾಜು, ಡಾ.ಅಮೃತವರ್ಷಿಣಿ, ಪ್ರೊ.ಭವ್ಯಾ, ಪ್ರೊ.ಜಯರಾಂ, ಪ್ರೊ.ಮರಿಯಯ್ಯ ಇತರರಿದ್ದರು.
ಇದೇ ಸಂದರ್ಭದಲ್ಲಿ ಹಾಸ್ಯ ನಟ ಗೋಪಿ ಅವರು ವಿವಿಧ ರಾಜಕಾರಣಿ-ಸಿನಿಮಾ ನಟರ ಧ್ವನಿಯಲ್ಲಿ ಮಿಮಿಕ್ರಿ ರಂಜಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೂ ಮುನ್ನ ಕಾಲೇಜಿನ ಹೆಬ್ಬಾಗಿಲಿನಿಂದ ಎತ್ತಿನಗಾಡಿಯಲ್ಲಿ ಗಣ್ಯರನ್ನು ತಮಟೆ, ನಗಾರಿ, ಪೂಜಾ ಕುಣಿತ, ವೀರಗಾಸೆ ಕುಣಿತದೊಂದಿಗೆ ಮೆರವಣಿಗೆ ಮೂಲಕ ವೇದಿಕೆಯತ್ತ ಕರೆ ತಂದು ರಾಶಿಪೂಜೆ ಸಲ್ಲಿಸಿದರು.