

ನರೇಗಲ್ಲ: ರಾಜ್ಯದ ಎಲ್ಲೂ ಕಾಣದ ಸಾಂಪ್ರದಾಯಿಕ ಕಲೆ ನರೆಗಲ್ಲನಲ್ಲಿ ರೂಢಿಯಲ್ಲಿದೆ. ನಾಡಿನ ಸಂಸ್ಕೃತಿಯ ಪ್ರತೀಕವಾಗಿರುವ ಸಾಂಪ್ರದಾಯಿಕ ಕಲೆಗಳನ್ನು ಯುವಕರು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ಪಟ್ಟಣದ 15ನೆ ವಾರ್ಡಿನ ಹಿರೇಮಠದ ಓಣಿಯ ಯುವಕರು ಆಯೋಜಿಸಿದ್ದ ಕಡಬಡ ಸೋಗಿನ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ಮೊಬೈಲ್‌ಗಳ ಭರಾಟೆಯಲ್ಲಿ ಪಟ್ಟಣದ ಯುವಕರು ಸಾಂಪ್ರದಾಯಿಕ ಕಲೆಗಳನ್ನು ಉಳಿಸಿಕೊಂಡು ಬೆಳೆಸಿತ್ತಿರುವುದು ಹೆಮ್ಮೆಯ ವಿಷಯ. ಶ್ರಾವಣದಲ್ಲಿ ನಡೆಯುವ ಕಡಬಡ ಸೋಗು ಇದೊಂದು ಪೌರಾಣಿಕ ಕಲೆಯಾಗಿದ್ದು ದೇವಿ ರಾಕ್ಷಸರ ಮಧ್ಯೆ ನಡೆಯುವ ಕದನವನ್ನು ನೋಡಲು ರೋಮಾಂಚನವಾಗುತ್ತದೆ’ ಎಂದರು.
ಪಟ್ಟಣದ ಹಿರೇಮಠದಿಂದ ಆರಂಭವಾದ ಕಡಬಡಸೋಗಿನ ಮೆರವಣಿಗೆ ಶ್ರೀವೀರಭದ್ರೇಶ್ವರ ದೇವಾಲಯ, ಗಜಾನನ ದೇವಾಲಯ, ವೀರಣ್ಣನ ಪಾದಗಟ್ಟಿ, ದರ್ಗಾ, ಮಾರೆಮ್ಮನ ದೇವಸ್ಥಾನ, ಹಳೇ ಬಸ್ ನಿಲ್ದಾಣ, ಜಕ್ಕಲಿ ರಸ್ತೆ, ಹೊಸ ಬಸ್ ನಿಲ್ದಾಣ, ಮಾರ್ಗವಾಗಿ ಹಿರೇಮಠಕ್ಕೆ ತಲುಪಿತು.
ಶರಣಪ್ಪ ಬೆಟಗೇರಿ, ಶಿವನಗೌಡ ಪಾಟೀಲ, ನಿಂಗನಗೌಡ ಲಕ್ಕನಗೌಡ್ರ, ಶರಣಬಸಪ್ಪ ಜುಟ್ಲದ, ರಮೇಶ ಕಳಕೊಣ್ಣವರ, ಸಕ್ರಪ್ಪ ಹಡಪದ, ವಿರಪ್ಪ ಮಳ್ಳಿ, ಫಕೀರಪ್ಪ ಮಳ್ಳಿ, ಕಂಠೆಪ್ಪ ಹಿರೇಮನಿ, ಮುತ್ತಣ್ಣ ಹಡಪದ, ಬಸವರಾಜ ಹಡಪದ, ಶರಣಪ್ಪ ಹಡಪದ ಇತರರಿದ್ದರು.