ಹಾನಗಲ್ಲ ಬಂದ್‌ಗೆ ವ್ಯಾಪಾರಿಗಳ ಬೆಂಬಲ

6 HNL 1A
Published on

ಹಾನಗಲ್ಲ: ಸಮಾಜ ವಿರೋಧಿ ಕೃತ್ಯ, ಗೂಂಡಾಗಿರಿ, ಮಾದಕ ವಸ್ತು ಮಾರಾಟ, ಅಮಾಯಕರ ಮೇಲೆ ಹಲ್ಲೆ, ಅನೈತಿಕ ಚಟುವಟಿಕೆ ವಿರೋಧಿಸಿ ಬುಧವಾರ ನಾಗರಿಕ ಹಿತರಕ್ಷಣಾ ಸಮಿತಿ ಕರೆ ನೀಡಿದ್ದ ಹಾನಗಲ್ಲ ಪಟ್ಟಣ ಬಂದ್‌ಗೆ ವ್ಯಾಪಾರಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಪಟ್ಟಣದಲ್ಲಿ ಸ್ವಯಂಪ್ರೇರಿತವಾಗಿ ಬೆಳಗ್ಗೆಯಿಂದಲೇ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು ಕುಮಾರೇಶ್ವರಮಠದಿಂದ ಮಹಾತ್ಮಾಗಾಂಧಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಗೂಂಡಾಗಳನ್ನು ಬಂಧಿಸಿ, ಮಟ್ಕಾ, ಇಸ್ಟೀಟ್, ಗಾಂಜಾ ನಿಲ್ಲಿಸಿ, ಹಾನಗಲ್ಲಿನ ಮಾನ ಹರಾಜು ಹಾಕಬೇಡಿ, ವ್ಯಾಪಾರಸ್ಥರ ಮೇಲಿನ ದಬ್ಬಾಳಿಕೆ ನಿಲ್ಲಿಸಿ ಎಂಬ ಘೋಷಣೆಗಳನ್ನು ಕೂಗಲಾಯಿತು.

ಸಮಿತಿಯ ಗಣೇಶ ಮೂಡ್ಲಿಯವರ, ಭೋಜರಾಜ ಕರೂದಿ, ರಾಜು ಗೌಳಿ, ಗುರುರಾಜ ನಿಂಗೋಜಿ, ಅನಂತವಿಕಾಸ ನಿಂಗೋಜಿ ಮಾತನಾಡಿ, ಬಂದ್‌ನ ಗಂಭೀರತೆಯನ್ನು ಪೊಲೀಸ್ ಹಾಗೂ ತಾಲೂಕು ಆಡಳಿತ ಅರ್ಥಮಾಡಿಕೊಳ್ಳಬೇಕು. ಮಹಿಳೆಯರಿಗೆ ರಕ್ಷಣೆ ಇಲ್ಲ. ಶಾಲಾ, ಕಾಲೇಜುಗಳ ಸುತ್ತ ಅಪರಾಧ ಕೃತ್ಯಗಳಿಗೆ ಪ್ರೋತ್ಸಾಹ, ಗೂಂಡಾಗಿರಿ ನಡೆಯುತ್ತಿದೆ. ಪರ ಊರುಗಳಿಂದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಹಾನಗಲ್ಲಿಗೆ ಬರುತ್ತಿಲ್ಲ. ಹಾನಗಲ್ಲಿನ ಪ್ರಮುಖ ವೃತ್ತಗಳು ಗೂಂಡಾಗಿರಿಯ ಸ್ಥಳಗಳಾಗಿವೆ. ಕಿಡಿಗೇಡಿಗಳ ಕಿರುಕುಳ ತಪ್ಪಿಸಿ. ಇಲ್ಲಿನ ವಾತಾವರಣಕ್ಕೆ ಹೆದರಿ ಹಳ್ಳಿಗಳಿಂದ ಜನ ವ್ಯಾಪಾರಕ್ಕೆ ಬಾರದೆ ಹಾನಗಲ್ಲ ಬಿಕೋ ಎನ್ನುತ್ತಿದೆ. ಇದು ಪೊಲೀಸ್ ಹಾಗೂ ತಾಲೂಕು ಆಡಳಿತಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಒಂದು ತಿಂಗಳೊಳಗಾಗಿ ಇವೆಲ್ಲವನ್ನೂ ತಡೆಯದಿದ್ದರೆ ಹಾವೇರಿ ಡಿಸಿ, ಎಸ್‌ಪಿ ಕಚೇರಿಗೆ ಪಾದಯಾತ್ರೆ ಮೂಲಕ ತೆರಳಿ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ನಾಗೇಂದ್ರ ತುಮರಿಕೊಪ್ಪ, ಚಮನಸಾಬ ಕಿತ್ತೂರ, ಕಲ್ಯಾಣಕುಮಾರ ಶೆಟ್ಟರ, ರಾಮು ಯಳ್ಳೂರ, ವಕೀಲರ ಸಂಘದ ಉಪಾಧ್ಯಕ್ಷ ರಮೇಶ ತಳವಾರ ಮಾತನಾಡಿ, ಹಾನಗಲ್ಲಿನಲ್ಲಿ ಸಿಸಿ ಕ್ಯಾಮರಾ ಇದ್ದರೂ ಅಪರಾಧಿಗಳನ್ನು ಗುರುತಿಸಿ ಶಿಕ್ಷೆಗೆ ಗುರಿಪಡಿಸುವಲ್ಲಿ ಪೊಲೀಸ್ ಹಾಗೂ ತಾಲೂಕು ಆಡಳಿತ ವಿಫಲವಾಗಿದೆ. ಗೂಂಡಾಗಿರಿ, ಸಮಾಜ ಘಾತುಕ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿರುವುದು ದೊಡ್ಡ ಅಪರಾಧ. ಸಿಸಿ ಕ್ಯಾಮರಾ ಹಾಕಿರುವುದೇ ವ್ಯರ್ಥ. ಮೀಟರ್ ಬಡ್ಡಿ ದಂಧೆಯಿಂದ ಹಾನಗಲ್ಲನ್ನು ರಕ್ಷಿಸಿ. ರಾತ್ರಿಯಿಡೀ ಮದ್ಯ ಮಾರಾಟ ನಡೆಯುತ್ತಿದ್ದರೂ ಪೊಲೀಸರು ಗಮನಿಸುತ್ತಿಲ್ಲ. ಹಾನಗಲ್ಲಿನಲ್ಲಿ ಕಳ್ಳತನ ನಿರಂತರವಾಗಿದೆ. ಸಾರ್ವಜನಿಕರಿಗೆ ನ್ಯಾಯ ಸಿಗುತ್ತಿಲ್ಲ. ನಮ್ಮ ಹೋರಾಟ ನಿಲ್ಲುವುದಿಲ್ಲ. ಪಟ್ಟಣದ ಶಾಂತಿ ಕದಡಲು ಅವಕಾಶ ಕೊಡಬೇಡಿ. ಇದು ನಮ್ಮ ಹೋರಾಟದ ಆರಂಭ ಎಂಬ ಸಂದೇಶ ನೀಡಿದರು.

ಒಂದು ತಿಂಗಳ ಗಡುವು ನೀಡಲಾಗುತ್ತದೆ. ಈ ಅವಧಿಯಲ್ಲಿ ಎಲ್ಲ ಅಪರಾಧ ಕೃತ್ಯಗಳಿಗೆ ತೆರೆ ಹಾಡದಿದ್ದರೆ ಅನಿವಾರ್ಯವಾಗಿ ತಾಲೂಕಿನಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಘೋಷಿಸಿದರು.

ಮಂಜಣ್ಣ ನಾಗಜ್ಜನವರ, ನಾಗರಾಜ ಉದಾಸಿ, ಹನುಮಂತಪ್ಪ ಮಲಗುಂದ, ರವಿ ಕಲಾಲ, ಸುರೇಶ ಸಿಂಧೂರ, ಬಾಳಾರಾಮ ಗುರ್ಲಹೊಸೂರ, ಬಸವರಾಜ ಹಾದಿಮನಿ, ರಾಮಚಂದ್ರ ಚಿಕ್ಕಣ್ಣನವರ, ಕೃಷ್ಣ ಪೂಜಾರ, ವಿನಾಯಕ ದೊಡ್ಡಕುರುಬರ, ಎಸ್.ಎಂ. ಕೋತಂಬರಿ, ಅಣ್ಣಪ್ಪ ಚಾಕಾಪುರ, ರಾಘವೇಂದ್ರ ತಹಶೀಲ್ದಾರ, ರಾಮನಗೌಡ ಪಾಟೀಲ, ಸುರೇಶ ಪೂಜಾರ, ಯಲ್ಲಪ್ಪ ಶೇರಖಾನೆ, ಜಗದೀಶ ಸಿಂಧೂರ, ವಿವಿಧ ವ್ಯಾಪರಸ್ಥರ ಸಂಘಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಹಸೀಲ್ದಾರ್ ಎಸ್.ರೇಣುಕಾ ಅವರಿಗೆ ಪ್ರತಿಭಟನಾಕಾರರು ಮನವಿ ಅರ್ಪಿಸಿ, ಪಟ್ಟಣದಲ್ಲಿ ವಾಹನಗಳನ್ನು ಕರ್ಕಶ ಶಬ್ದಗಳ ಮೂಲಕ ಓಡಿಸಿ ಭಯ ಹುಟ್ಟಿಸಲಾಗುತ್ತಿದೆ. ಹೊಸ್ ಬಸ್ ನಿಲ್ದಾಣ ಹಾಗೂ ಹಳೆ ಬಸ್ ನಿಲ್ದಾಣಗಳ ಬಳಿ ಟ್ರಾಫಿಕ್ ಪೊಲೀಸ ವ್ಯವಸ್ಥೆಯಾಗಬೇಕು. ಆಟದ ಮೈದಾನಗಳಲ್ಲಿ ಕ್ರೀಡಾಪಟುಗಳ ಮೇಲೆ ಗೂಂಡಾಗಿರಿ ನಡೆಯುತ್ತಿದೆ. ಇವೆಲ್ಲವಕ್ಕೂ ತಡೆಯೊಡ್ಡಿ ಅಪರಾಧಿಗಳನ್ನು ಬಂಧಿಸಿ ಶಿಕ್ಷಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಶಿಗ್ಗಾಂವಿ ಡಿವೈಎಸ್‌ಪಿ ಕೆ.ವಿ.ಗುರುಶಾಂತಪ್ಪ, ಪಿಎಸ್‌ಐ ಸಂಪತ್ ಆನಿಕಿವಿ, ಆಡೂರು ಪಿಎಸ್‌ಐ ಶರಣಪ್ಪ ಹಂಡರಗಲ್ ಅವರು ಬಂದೋಬಸ್ತ್ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net