ವಿಂಶತಿ ಸಂಭ್ರಮಕ್ಕೆ ಗ್ರಾಹಕರ ಮಹಾಸಂಗಮ : ಅಧ್ಯಕ್ಷ ಸುಭಾಶ್ಚಂದ್ರ ಮಾಹಿತಿ 20ರಿಂದ 22ರ ತನಕ ವೈವಿಧ್ಯಮಯ ಕಾರ್ಯಕ್ರಮ

Published on

ಬಂಟ್ವಾಳ: ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ 20 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ವಿಂಶತಿ ಸಂಭ್ರಮ 2023-24, ವರ್ತಕರ-ಗ್ರಾಹಕರ ಮಹಾಸಂಗಮ ಕಾರ್ಯಕ್ರಮ ಸೆ.20ರಿಂದ 22 ರವರೆಗೆ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ತಿಳಿಸಿದರು.

ಮಂಗಳವಾರ ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿ, ಸೆ.20ರಂದು ನಮ್ಮ ಸಂಸ್ಥೆ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಸಂಯೋಜನೆಯಲ್ಲಿ ನಡೆಯುವ ಗೃಹೋಪಯೋಗಿ ವಸ್ತುಗಳ ಮಾರಾಟ, ತಿಂಡಿ ತಿನಸುಗಳ ಮಹಾಮೇಳ, ಆರೋಗ್ಯ ತಪಾಸಣೆ, ದಿವ್ಯಾಂಗರ ಸಮಸ್ಯೆಗಳ ಜಾಗೃತಿ ಕಾರ್ಯಕ್ರಮವನ್ನು ಬಂಟ್ವಾಳ ತಹಸೀಲ್ದಾರ್ ಅರ್ಚನಾ ಡಿ.ಭಟ್ ಉದ್ಘಾಟಿಸಿ ಚಾಲನೆ ನೀಡಲಿದ್ದಾರೆ ಎಂದರು.

21ರಂದು ವಿಂಶತಿ ಸಂಭ್ರಮ, ಸದಸ್ಯರ ಸಮಾಗಮ ಕಾರ್ಯಕ್ರಮ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಉದ್ಘಾಟಿಸಲಿದ್ದಾರೆ. ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ್ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಕ್, ಮಾಜಿ ಸಚಿವ ರಮಾನಾಥ ರೈ ಸಹಿತ ಹಲವಾರು ಗಣ್ಯರು ಭಾಗವಹಿಸುವರು. ಸುಮಾರು 20 ಅಶಕ್ತರಿಗೆ ಸಹಾಯಧನ ವಿತರಣೆ, ಸಂಸ್ಥೆ ಅಭಿವೃದ್ಧಿಗೆ ಶ್ರಮಿಸಿದ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಸ್ಥಾಪಕರು ಸಹಿತ ಹಲವರನ್ನು ಗೌರವಿಸಲಾಗುವುದು ಎಂದರು.

ಮಧ್ಯಾಹ್ನ ಸಂಘದ ವಾರ್ಷಿಕ ಮಹಾಸಭೆ, ಸಂಜೆ ಸಂಗೀತ ರಸಮಂಜರಿ, ಯಕ್ಷಗಾನ ಬಯಲಾಟ ನಡೆಯುವುದು ಎಂದು ವಿವರಿಸಿದರು. 22 ರಂದು ಸಂಘ, ಬಂಟ್ವಾಳ ತುಳುಕೂಟ ಸಂಯೋಜನೆಯಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆ-24 ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಮಂಜುನಾಥ ರೈ ಅಗರಿ, ನಿರ್ದೇಶಕರಾದ ನಾರಾಯಣ ಸಿ.ಪೆರ್ನೆ, ರವೀಂದ್ರ, ಗಜೇಂದ್ರ ಪ್ರಭು, ಸುಧಾಕರ ಸಾಲ್ಯಾನ್, ಹೇಮಂತ್ ಕುಮಾರ್ ಜೈನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ಜೈನ್, ಮೆನೇಜರ್ ಸದಾಶಿವ ಪುತ್ರನ್ ಮೊದಲಾದವರಿದ್ದರು.

332 ಕೋಟಿ ರೂ. ವಹಿವಾಟು

ಸಂಘ ಪ್ರಸ್ತುತ ಸಾಲಿನಲ್ಲಿ 332 ಕೋಟಿ ರೂ. ವಹಿವಾಟು ನಡೆಸಿದೆ. 7,023 ಮಂದಿ ಸದಸ್ಯರನ್ನು ಹೊಂದಿದ್ದು, 1.58 ಕೋಟಿ ರೂ. ಪಾಲು ಬಂಡವಾಳ, ಸುಮಾರು 63 ಕೋಟಿಗಿಂತಲೂ ಹೆಚ್ಚು ಠೇವಣಿ, 70 ಕೋಟಿ ರೂ. ದುಡಿಯುವ ಬಂಡವಾಳವನ್ನು ಹೊಂದಿರುತ್ತದೆ ಎಂದರು. ಸಂಘ 13 ಶಾಖೆ ಹೊಂದಿದ್ದು, ಸದಸ್ಯರಿಗೆ ಶೇ.13 ರಷ್ಟು ಡಿವಿಡೆಂಡ್ ನೀಡಲು ಶಕ್ತವಾಗಿದೆ. ಅಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿ ಪಡೆದಿದೆ ಎಂದು ಅಧ್ಯಕ್ಷ ಸುಭಾಶ್ಚಂದ್ರ ತಿಳಿಸಿದರು. ಸಂಸ್ಥೆ ವಿಂಶತಿ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಪ್ರತಿ ಶಾಖೆಯಲ್ಲಿ ಗ್ರಾಹಕರ ಸಮಾವೇಶ, ಆಟೋಟ ಸ್ಪರ್ಧೆ, ವರ್ತಕ ಗ್ರಾಹಕರಿಗೆ ವಸ್ತುಗಳ ಮಾರಾಟ ಮೇಳ ಆಯೋಜಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net