

ರಾಯಚೂರು ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಿಂದ ಬರಪೂರವಾಗಿ ಈರುಳ್ಳಿಯನ್ನು ರೈತರು ಬೆಳೆಯಲಾಗಿದ್ದು,,ಮಾರುಕಟ್ಟೆಗೆ ತೆಗೆದುಕೊಂಡು ಆಗಮಿಸಿದ ರೈತರಿಗೆ ಈರುಳ್ಳಿ ಕೊಳ್ಳುವವರು ಇಲ್ಲದೆ ಇರುವುದು ಒಂದು ಕಡೆಯಾದರೆ ದರ ಇಲ್ಲದೆ ಇರುವುದು ಮತ್ತೋಂದು ಸಮಸ್ಯೆಯಾಗಿದ್ದರಿಂದ ರೈತ ಸಮೂಹ ಅಕ್ಷರಂಶ ಕಂಗಾಲಗಿದ್ದಾರೆ.
ಕಳೆದ ಕೆಲ ವಷರ್ಗಳ ಹಿಂದೆ ಅತ್ಯಧಿಕ ದರಕ್ಕೆ ಮಾರಾಟವಾಗಿ ಮೆರೆದಿದ್ದ ಈರುಳ್ಳಿಯನ್ನು ಇಂದು ಕೇಳುವವರಿಲ್ಲದಂತಾಗಿದೆ ಖರೀದಿದಾರರು ಇಲ್ಲದೆ ಇರುವುದರಿಂದ ರೈತರಿಗೆ ತೀವ್ರ ತೊಂದರೆ ಎದುರಾಗಿದೆ. ಎಪಿಎಂಸಿಗೆ ನಿತ್ಯ 100 ರಿಂದ 200 ಸಾವಿರ ಕ್ವಿಂಟಲ್ ವರೆಗೂ ಈರುಳ್ಳಿ ಬರುತ್ತಿದೆ. ಆದರೆ ಕ್ವಿಂಟಲ್ ಈರುಳ್ಳಿಗೆ 705 ರಿಂದ 910 ರವರೆಗೆ ದರ ನಿಗದಿಯಾಗಿರುವುದರಿಂದ ಕೆಜಿಗೆ 01 ರೂ. ಸಹ ದೊರೆಯದೆ ಇರುವುದರಿಂದ ಜಿಲ್ಲೆಯ ರೈತನೋರ್ವ ಸುಮಾರು 250 ಪ್ಯಾಕೇಟ್‌ಗಳಲ್ಲಿ ತಂದಿದ್ದ ತನ್ನ 62 ಕ್ವಿಂಟಾಲ್ ಈರುಳ್ಳಿಯನ್ನು ನಗರದ ರಾಜೇಂದ್ರ ಗಂಜ್ ಎಂಪಿಎಂಸಿ ಆವರಣದಲ್ಲೇ ಬಿಟ್ಟು ಹೋಗಿದ್ದಾನೆ. ಮಾರಾಟ ಮಾಡಲು ಕುಳಿತರೆ ಈರುಳ್ಳಿ ಸಾಗಣೆ ಖರ್ಚು ಸಹ ಹುಟ್ಟಲ್ಲಾ, ಮಾರಾಟವಾಗುವವರೆ ರಾಯಚೂರಿನಲ್ಲೇ ಉಳಿದರೇ ಅನಗತ್ಯ ಖರ್ಚು ಎಂದು ಬೆವರು ಸುರಿಸಿ ಬೆಳೆದ ಬೆಳೆಯನ್ನು ಹಾಗೆಯೇ ಬಿಟ್ಟು ಹೋಗಿದ್ದಾನೆ. ರೈತನ ಬೆವರಿನ ಈರುಳ್ಳಿ ಈಗ ಜಾನುವಾರುಗಳ ಪಾಲಾಗುತ್ತಿದೆ.
ಮಳೆಗೆ ಈರುಳ್ಳಿ ಹಾಳು
ಜಿಲ್ಲೆಯಲ್ಲಿ ಈ ಬಾರಿ 753 ಹೆಕ್ಟರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯನ್ನು ಬೆಳೆಯಲಾಗಿದ್ದು, ಈರುಳ್ಳಿಗೆ ಭಾರೀ ಬೇಡಿಕೆಯಿದ್ದು, ಆದರೆ ಈಚೆಗೆ ಸುರಿದ ಮಳೆಯಿಂದ ಕೆಲ ಭಾಗದಲ್ಲಿ ಈರುಳ್ಳಿ ಕೊಳೆತು ರೈತರು ನಷ್ಟಕ್ಕೆ ತುತ್ತಾಗಿದ್ದಾರೆ. ಈಗ ಮಾರುಕಟ್ಟೆಯಲ್ಲೂ ಖರೀದಿ ಮಾಡದಿರುವುದು ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ರಾಯಚೂರು, ದೇವದುರ್ಗ, ಲಿಂಗಸೂಗೂರು ತಾಲೂಕು ಭಾಗದಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆಯಲಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ರೈತರಿಗೆ ಸಾಗಣೆ ವೆಚ್ಚ ಉಳಿಯುತ್ತಿತ್ತು. ಜಿಲ್ಲೆಯಿಂದ ಮಾತ್ರವಲ್ಲ, ಅಕ್ಕಪಕ್ಕದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಿಂದಲೂ ರೈತರು ಈರುಳ್ಳಿ ತರುತ್ತಿದ್ದರು. ಈಗ ಖರೀದಿ ದಾರರೇ ಇಲ್ಲದ ಕಾರಣಕ್ಕೆ ದೂರದ ಹೈದರಾಬಾದ್ ಸೇರಿ ಬೇರೆ ಕಡೆಗೆ ಸಾಗಣೆ ಮಾಡಬೇಕಿದ್ದು, ರೈತರಿಗೆ ಹೊರೆಯಾಗಲಿದೆ. ಹೀಗಾಗಿ ಕೆಲ ರೈತರು ಎರಡು ದಿನಗಳಿಂದ ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲೇ ಈರುಳ್ಳಿ ಮಾರಾಟ ಮಾಡಿದ್ದಾರೆ. ಆದರೆ ಇಲ್ಲಿ ಹೆಚ್ಚಿನ ಕಮಿಷನ್ ಪಡೆಯುತ್ತಿದ್ದು, ಇಲ್ಲೂ ನಷ್ಟ ಉಂಟಾಗುತ್ತಿದೆ.
ಖರೀದಿಗೆ ವರ್ತಕರಿಲ್ಲ!
ರಾಯಚೂರಿನ ರಾಜೇಂದ್ರ ಗಂಜ್ ಇಡೀ ರಾಜ್ಯದಲ್ಲಿಯೇ ದೊಡ್ಡ ಮಾರುಕಟ್ಟೆ ಎಂಬ ಹೆಸರು ಹೊಂದಿತ್ತು. ಆದರೆ ಇಂಥ ಎಪಿಎಂಸಿಯಲ್ಲಿ ಈರುಳ್ಳಿ ಖರೀದಿಸುವ ವರ್ತಕರು ಕೇವಲ ಮೂವರೇ ಇದ್ದಾರೆ. ಇದರಿಂದ ಅವರು ಮನಬಂದಂತೆ ದರ ನಿಗದಿ ಮಾಡುತ್ತಾರೆಂಬ ಆರೋಪಗಳಿವೆ. ಮಾರುಕಟ್ಟೆಗೆ ಎಷ್ಟೆೇ ಉತ್ಪನ್ನ ಬಂದರೂ ಈ ಮೂವರೇ ಖರೀದಿಸಬೇಕಿದೆ. ನಮಗೆ ಬೇಡಿಕೆ ಬಂದಿಲ್ಲ. ಹೀಗಾಗಿ ನಾವು ಖರೀದಿಸುವುದಿಲ್ಲ. ರೈತರು ಬೇರೆ ಎಲ್ಲಿಯಾದರೂ ಮಾರಿಕೊಳ್ಳಬಹುದು ಎನ್ನುತ್ತಿದ್ದಾರೆ.
ತರಾಕಾರಿ ಮಾರುಕಟ್ಟೆಯಲ್ಲಿ ಮಾರಾಟ
ಈರುಳ್ಳಿ ಖರೀದಿಸಲು ಹೆಣಗಾಡುತ್ತಿರುವ ವರ್ತಕರು ಈರುಳ್ಳಿ ಖರೀದಿಗೆ ನಿರಾಸಕ್ತಿ ತೋರುತ್ತಿದ್ದಾರೆ.ವರ್ತಕರ ಸಮಸ್ಯೆಯಿಂದ ಈರುಳ್ಳಿ ಖರೀದಿಯಾಗದಿರುದರಿಂದ ರೈತರು ಸ್ಥಳೀಯ ತರಕಾರಿ ಮಾರುಕಟ್ಟೆಗಳಿಗೆ ಈರುಳ್ಳಿ ಮಾರಾಟ ಮಾಡುತ್ತಿದ್ದು, ಗುಣಮಟ್ಟ ಈರುಳ್ಳಿ ಪ್ರತಿ ಕ್ವಿಂಟಾಲ್‌ಗೆ 2000 ರೂ.ಗಳವರೆಗೆ ಹೋಗುತ್ತಿದೆ. ಗುಣಮಟ್ಟಕ್ಕೆ ಅನುಸಾರವಾಗಿ ಎರಡರಿಂದ ಮೂರು ಸಾವಿರ ರೂ.ವರೆಗೆ ತರಕಾರಿ ಖರೀದಿದಾರರಿಗೆ ಮಾರಾಟ ಮಾಡಲಾಗುತ್ತಿದೆ. ಅನ್ಯ ಜಿಲ್ಲೆಗಳಿಗೆ ಈರುಳ್ಳಿ ಮಾರಾಟ ಮಾಡಲು ಹೆಚ್ಚಿನ ಸಾಗಣೆ ವೆಚ್ಚ ಆಗುವುದರಿಂದ ಹೊರೆಯಾಗಿ ಪರಿಣಮಿಸಿದೆ. ಒಂದೆಡೆ ಬೆಳೆದ ಬೆಳೆ ಹಾನಿಯಾಗಿದ್ದು, ಇನ್ನೊಂದೆಡೆ ಹೆಚ್ಚಿನ ಸಾಗಣೆ ವೆಚ್ಚ ಭರಿಸುವಲ್ಲಿ ರೈತ ನಿತ್ರಾಣ ಆಗಿದ್ದಾನೆ.
ಇಚೇಗೆ ಸುರಿದ ಮಳೆಯಿಂದ ಉತ್ತಮವಾಗಿ ಬೆಳೆದ ಈರುಳ್ಳಿ ಬೆಳೆ ಸಂಪೂರ್ಣವಾಗಿ ಹಾನಿಯಾಗಿದ್ದು, ಉಳಿದ ಅಲ್ಪ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕು ಎಂದರೇ ಖರೀದಿದಾರರು ಇಲ್ಲ. ಬೆಳೆದ ಈರುಳ್ಳಿಗೆ ಮಾಡಿದ ಖರ್ಚು ಸಹ ಸಿಗುತ್ತಿಲ್ಲ.
ಲಕ್ಷ್ಮಣಗೌಡ ಕಡಗಂದೊಡ್ಡಿ ರೈತ ರಾಯಚೂರು.
ಇಚೇಗೆ ಸುರಿದ ಮಳೆಯಿಂದ ಈರುಳ್ಳಿ ಸೇರಿ ಅನೇಕ ಬೆಳೆಗಳ ಹಾನಿಯಾಗಿದ್ದು, ರಾಯಚೂರಿನ ಎಪಿಎಂಸಿಯಲ್ಲಿ ಹೆಚ್ಚಿನ ದರ ದೊರೆಯದಿರುವುದರಿಂದ ರೈತ ಈರುಳ್ಳಿಯನ್ನು ಬಿಸಾಡಿ ಹೋಗಿದ್ದಾನೆಂದು ಮಾಹಿತಿ ಬಂದಿದೆ. ಶೀಘ್ರದಲ್ಲಿ ಪರಿಹಾರ ನೀಡಲಾಗುತ್ತದೆ. ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ವರ್ತಕರುಯ ಭಾಗವಹಿಸುವಂತೆ ಎಪಿಎಂಸಿಗೆ ಸೂಚನೆ ನೀಡಲಾಗುತ್ತದೆ. ಡಾ.ಶರಣ ಪ್ರಕಾಶ ಪಾಟೀಲ್ ಜಿಲ್ಲಾ ಉಸ್ತುವಾರಿ ಸಚಿವ ರಾಯಚೂರು