

ಕುಕನೂರು: ಪ್ರಮುಖ ಬೇಡಿಕೆ ಈಡೇರಿಸುವ ಭರವಸೆಯನ್ನು ತಹಸೀಲ್ದಾರ್ ಎಚ್.ಪ್ರಾಣೇಶ ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ಹಿಂದಕ್ಕೆ ಪಡೆದರು.
ರೈತ ಮುಖಂಡ ದೇವಪ್ಪ ಸೋಬಾನದ್ ಮಾತನಾಡಿ, 40 ವರ್ಷಗಳಿಂದ ಎಪಿಎಂಸಿಯಲ್ಲಿ ವರ್ತಕರು ಟೆಂಡರ್ ಕರೆದು ರೈತರ ಬೆಳೆಗಳನ್ನು ಖರೀದಿಸುತ್ತಿಲ್ಲ. ಎಪಿಎಂಸಿ ಕಚೇರಿ ಲೈಸೆನ್ಸ್ ಹೊಂದಿದ್ದರೂ, ಹೊರಗಡೆ ರೈತರ ಬೆಳೆಯನ್ನು ಖರೀದಿಸುತ್ತಿದ್ದಾರೆ. ಅಧಿಕಾರಿಗಳು ಕೂಡಲೇ ವರ್ತಕರ ಕೆಲವು ಕಾನೂನು ಬಾಹಿರ ಕೆಲಸಗಳನ್ನು ಬಂದ್ ಮಾಡಬೇಕು. ಮಿತಿಮೀರಿದ ಮೋಸಕ್ಕೆ ಕಡಿವಾಣ ಹಾಕಬೇಕು ಎಂದರು.
ತಹಸೀಲ್ದಾರ್ ಎಚ್.ಪ್ರಾಣೇಶ ಮಾತನಾಡಿ, ತಾಲೂಕು ಆಡಳಿತದಿಂದ ರೈತರಿಗೆ ವರ್ತಕರಿಂದ ಆಗುತ್ತಿರುವ ಅನ್ಯಾಯವನ್ನು ಗಮನದಲ್ಲಿಟ್ಟುಕೊಂಡು ಎಪಿಎಂಸಿ ಜಿಲ್ಲಾ ಸಹಾಯಕ ನಿರ್ದೇಶಕ, ವರ್ತಕರೊಂದಿಗೆ ಸಭೆ ನಡೆಸುತ್ತೇವೆ.
ಪ್ರಮುಖ ಬೇಡಿಕೆಗಳಾದ ಟೆಂಡರ್ ಪ್ರಕ್ರಿಯ ನಡೆಸುವುದು. ಬಾದ ಮುರಿಯುವುದನ್ನು ನಿಲ್ಲಿಸಲಾಗುವುದು. ರೈತ ಭವನ ನಿರ್ಮಾಣ, ಪ್ಲಾಸ್ಟಿಕ್ ಚೀಲ ಬಿಟ್ಟು ಕಾಟನ್ ಚೀಲದಲ್ಲಿ ತೂಕ ಮಾಡಬೇಕು ಎನ್ನುವ ಪ್ರಮುಖ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸುವ ಭರವಸೆ ನೀಡಿದರು.
ಎಪಿಎಂಸಿ ಕಾರ್ಯದರ್ಶಿ ಗುರುಸ್ವಾಮಿ ಗುಡಿ, ಪಿಎಸ್‌ಐ ಟಿ.ಗುರುರಾಜ, ಪ್ರಮುಖರಾದ ಯಲ್ಲಪ್ಪ ಹೂಗಾರ, ಬಸವರಾಜ ಈಬೇರಿ, ಕಳಕಪ್ಪ ಕುರಿ, ಬಸವರಾಜ ಲಾಳಗಂಡರ, ಶಿವಪ್ಪ ಸಬರದ, ಶರಣಪ್ಪ ಯತ್ನಟ್ಟಿ, ಕಳಕಪ್ಪ ಯತ್ನಟ್ಟಿ, ರಾಮಣ್ಣ ಬೆದವಟ್ಟಿ, ಗುದ್ನೇಪ್ಪ ಯತ್ನಟ್ಟಿ, ಬಸವರಾಜ ಮಳಗಿ, ಮಲ್ಲಿಕಾರ್ಜುನ ತಳಬಾಳ, ಬಸಪ್ಪ ಮಂಡಲಗೇರಿ, ವೀರಯ್ಯ ಕಳ್ಳಿಮಠ, ಶರಣಯ್ಯ ಕೋಮಾರ, ಕಳಕಪ್ಪ ಕ್ಯಾದಗುಂಪಿ, ವಜೀರ್‌ಸಾಬ ತಳಕಲ್, ಗಂಗಮ್ಮ ಹುಡೆದ್ ಇತರರಿದ್ದರು.