ಫೋನ್‌ಪೇ ಮೂಲಕ ಡೀಸೆಲ್ ಹಾಕಿಸಿ ಸಿಕ್ಕಿಬಿದ್ದ ಟ್ರಾೃಕ್ಟರ್ ಕಳ್ಳ

17-RNR-03
Published on

ರಾಣೆಬೆನ್ನೂರ: ಟ್ರಾೃಕ್ಟರ್ ಕಳ್ಳತನ ಮಾಡಿದ್ದ ಆರೋಪಿಯೊಬ್ಬ ಅದಕ್ಕೆ ಫೋನ್‌ಪೇ ಮೂಲಕ ಡೀಸೆಲ್ ಹಾಕಿಸಿ ಇಲ್ಲಿಯ ಶಹರ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬೈಯನ್ ವೈಜಿಕೂರ ಗ್ರಾಮದ ಕೆಂಪೇಗೌಡ ಬಯಣ್ಣ (46) ಭಾನುವಾರ ಪೊಲೀಸರ ಅತಿಥಿಯಾದ ಆರೋಪಿ.
ಘಟನೆ ಹಿನ್ನೆಲೆ…
ಕಳೆದ ವಾರ ದಾವಣಗೆರೆ ಜಿಲ್ಲೆ ಮಾಯಕೊಂಡ ತಾಲೂಕಿನ ಕುಡಗನೂರ ಗ್ರಾಮದ ಪ್ರಶಾಂತ ಎಂಬುವರು ತಮ್ಮ ಟ್ರಾೃಕ್ಟರ್‌ಅನ್ನು ಹುಬ್ಬಳ್ಳಿಯಿಂದ ತಮ್ಮ ಊರಿಗೆ ತೆಗೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ರಾತ್ರಿ ಹೊತ್ತು ರಾಣೆಬೆನ್ನೂರ ನಗರದಲ್ಲಿ ಹೋಟೆಲ್‌ವೊಂದರ ಎದುರು ಊಟಕ್ಕಾಗಿ ನಿಲ್ಲಿಸಿ ಹೋಗಿದ್ದರು.
ಈ ಸಮಯದಲ್ಲಿ ಕೆಂಪೇಗೌಡ ಟ್ರಾೃಕ್ಟರ್ ಕಳ್ಳತನ ಮಾಡಿಕೊಂಡು ಹೋಗಿದ್ದ. ಅಲ್ಲದೆ ತಾಲೂಕಿನ ಮಾಗೋಡ ಗ್ರಾಮದ ಎನ್‌ಎಚ್-48 ರಸ್ತೆಗೆ ಹೊಂದಿಕೊಂಡ ಬಂಕ್‌ನಲ್ಲಿ ಡೀಸೆಲ್ ಹಾಕಿಸಿದ್ದ. ಅಲ್ಲಿ ಫೋನ್‌ಪೇ ಮೂಲಕ ಹಣ ಪಾವತಿ ಮಾಡಿದ್ದನು. ಟ್ರಾೃಕ್ಟರ್ ಕಳ್ಳತನ ಕುರಿತು ಪ್ರಶಾಂತ ದೂರು ನೀಡುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಶಹರ ಠಾಣೆ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ನೇತೃತ್ವದ ತಂಡ ಫೋನ್‌ಪೇ ನಂಬರ್‌ನ ತಾಂತ್ರಿಕ ಮಾಹಿತಿ ಆಧಾರದ ಮೇಲೆ ಆರೋಪಿಯನ್ನು ಕೋಲಾರದಲ್ಲಿ ಬಂಧಿಸಿದೆ.
ಶಹರ ಠಾಣೆ ಸಿಪಿಐ ಶಂಕರ, ಕ್ರೈಂ ಪಿಎಸ್‌ಐ ಎಚ್.ಎನ್. ದೊಡ್ಡಮನಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net