ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್‌ಗೆ ಸಿಂಥೆಟಿಕ್ ಟ್ರಾಕ್

25 gkp. 01.
 ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ ಅವರನ್ನು ಅಭಿನಂದಿಸಲಾಯಿತು.
Published on

ಗೋಣಿಕೊಪ್ಪಲು : ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣಕ್ಕೆ (ಮ್ಯಾನ್ಸ್ ಕಾಂಪೌಂಡ್) ಶೀಘ್ರದಲ್ಲೇ ಸಿಂಥೆಟಿಕ್ ಟ್ರಾಕ್ ಅಳವಡಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ ಭರವಸೆ ನೀಡಿದರು.

ಗೋಣಿಕೊಪ್ಪಲುವಿನ ಕಕೂನ್ ಸಭಾಂಗಣದಲ್ಲಿ ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ವತಿಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾವು ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಮೊದಲ ಸಭೆಯಲ್ಲಿ ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್‌ನಲ್ಲಿ ಸಿಂಥೆಟಿಕ್ ಟ್ರಾಕ್ ಅಳವಡಿಸಲು ಮುಖ್ಯಮಂತ್ರಿಗಳ ಬಳಿ ಬೇಡಿಕೆ ಮಂಡಿಸಲಾಯಿತು.

ಬೇಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ಇದಕ್ಕೆ ಕೊಡಗಿನ ಶಾಸಕದ್ವಯರು ಸಹಕಾರ ನೀಡಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಅಭಿವೃದ್ಧಿಗಾಗಿ ಶಾಸಕ ಪೊನ್ನಣ್ಣ ಅವರು 50 ಲಕ್ಷ ರೂ. ಅನುದಾನವನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಅನುದಾನದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಮುಂದುವರೆಯಲಿದೆ. ಮುಂದಿನ ದಿನಗಳಲ್ಲಿ ಸಂಘದ ಸಿಬ್ಬಂದಿಗೆ ಉತ್ತಮ ವೇತನ ಸಿಗುವಂತೆ ಪ್ರಯತ್ನಿಸುವುದಾಗಿ ತಿಳಿಸಿದರು.

ಸಂಘವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಾನಾ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಸದಸ್ಯರು ಸಹಕಾರ ನೀಡುವಂತೆ ಈ ವೇಳೆ ಮನವಿ ಮಾಡಿದರು. ಕ್ರೀಡಾ ಪ್ರಾಧಿಕಾರದ ಜವಾಬ್ದಾರಿ ವಹಿಸಿಕೊಂಡ ನಂತರ ಕೊಡಗಿನ ಜನತೆ ಅಪಾರ ವಿಶ್ವಾಸ ಇಟ್ಟುಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಉಪಾಧ್ಯಕ್ಷ ಮಳವಂಡ ಅರವಿಂದ್ ಕುಟ್ಟಪ್ಪ ಮಾತನಾಡಿ, ಕಿತ್ತಳೆ ಬೆಳೆಗಾರರ ಸಂಘದ ಅಭಿವೃದ್ಧಿಗಾಗಿ ಅರುಣ್ ಮಾಚಯ್ಯ ಅವರು ವಿಶೇಷ ಕೊಡುಗೆ ನೀಡುತ್ತಲೇ ಬಂದಿದ್ದಾರೆ. ಸ್ವತಃ ಕ್ರೀಡಾಪಟುವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕರಾಟೆ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಕ್ರೀಡಾ ಪ್ರಾಧಿಕಾರದ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಹಾಗೂ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಅಚಲ ವಿಶ್ವಾಸ ಹೊಂದಿದ್ದೇವೆ ಎಂದರು.

ಅಭಿನಂದನಾ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಕಿರಿಯಮಾಡ ಅರುಣ್ ಪೂಣಚ್ಚ, ಕಡೇಮಾಡ ಸುನೀಲ್ ಮಾದಪ್ಪ, ಎಸ್.ಎಸ್. ಸುರೇಶ್, ಬಾನಂಡ ಪ್ರಥ್ವಿ, ಕಾಡ್ಯಮಾಡ ಸುಮನ್, ಚಂದ್ರಿಮಾಡ ಕಾಳಯ್ಯ, ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಚೇಂದಂಡ ಸುಮಿಸುಬ್ಬಯ್ಯ, ಶೋಭಾ ಕುಟ್ಟಪ್ಪ, ಮುಖ್ಯಕಾರ್ಯನಿರ್ವಹಣಾಧಿಕಾರಿ ಹೇಮಂತ್, ಚಾಂದಿನಿ ಮಾಚಯ್ಯ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net