

ಚಳ್ಳಕೆರೆ: ತಾಲೂಕಿನ ದೊಡ್ಡಉಳ್ಳಾರ್ತಿ ಗ್ರಾಮದಿಂದ ಅರ್ಧ ಕಿಮೀ ದೂರದಲ್ಲಿರುವ ಕೆರೆ ಏರಿ ಸಮೀಪ ಇತಿಹಾಸ ಕುರುಹುಗಳಾಗಿರುವ ವೀರಗಲ್ಲುಗಳ ಸ್ಥಳಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವೀರಗಲ್ಲುಗಳಿರುವ ಜಮೀನು ಖಾಸಗಿಯವರಿಗೆ ಸೇರಿದೆ ಎಂದು ತಕರಾರು ತೆಗೆದಿರುವ ಹಿನ್ನೆಲೆಯಲ್ಲಿ ಭೇಟಿ ನೀಡಿದ ಅವರು, ಕೂಡಲೇ ಜಮೀನು ಅಳತೆ ಮಾಡಿ, ವೀರಗಲ್ಲುಗಳಿರುವ ಜಾಗವನ್ನು ಪ್ರತ್ಯೇಕಗೊಳಿಸಬೇಕು. ಸುತ್ತಲೂ ಕಟ್ಟಡ ನಿರ್ಮಿಸಿ ಇತಿಹಾಸ ಮಾಹಿತಿ ಫಲಕ ಹಾಕುವಂತೆ ಸ್ಥಳದಲ್ಲಿದ್ದ ತಹಸೀಲ್ದಾರ್ ರೇಹಾನ್ ಪಾಷಾ ಅವರಿಗೆ ಸೂಚಿಸಿದರು.
ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಜಿ. ಪ್ರಹ್ಲಾದ್ ಮಾತನಾಡಿ, ಇಲ್ಲಿನ ವೀರಗಲ್ಲುಗಳು ಯುದ್ದದಲ್ಲಿ ವೀರಮರಣವನ್ನಪ್ಪಿದ ಪರಾಕ್ರಮಿಗಳ ಮಾಹಿತಿ ಸಾರುತ್ತವೆ. ನೊಳಂಬರ ಕಾಲದಲ್ಲಿ ಪ್ರಾಂತ್ಯಗಳ ರಕ್ಷಣೆ ಜವಾಬ್ದಾರಿಯನ್ನು ಒಬ್ಬರಿಗೆ ವಹಿಸುವ ಪದ್ಧತಿ ಇತ್ತು. ಆಗ ಹಸು-ಕರುಗಳನ್ನು ಕದ್ದೊಯ್ಯಲು ಬರುತ್ತಿದ್ದ ತಮಿಳುನಾಡು ಮೂಲದ ಕೊಂಕರ ವಿರುದ್ಧ ಯುದ್ಧಗಳು ನಡೆದಿವೆ. ಇಲ್ಲಿ ವೀರಮರಣ ಹೊಂದಿದವರ ಮತ್ತು ಯುದ್ಧದ ಪ್ರಸಂಗಗಳ ಬಗ್ಗೆ ವೀರಗಲ್ಲುಗಳಲ್ಲಿ ಉಲ್ಲೇಖವಿದೆ. ಬಿ.ಎಲ್. ರೈಸ್ ಅವರ ಕೃತಿಗಳಲ್ಲಿ ಈ ವೀರಗಲ್ಲುಗಳ ಬಗ್ಗೆ ಮಾಹಿತಿ ಲಭ್ಯವಿದೆ ಎಂದು ತಿಳಿಸಿದರು.
ವೀರಗಲ್ಲುಗಳು: ದೊಡ್ಡಉಳ್ಳಾರ್ತಿ ಗ್ರಾಮದ ಹೊರವಲಯದ ಕೆರೆ ಏರಿ ಪಕ್ಕದಲ್ಲಿ ಇತಿಹಾಸ ಹಿನ್ನೆಲೆಯುಳ್ಳ 4 ವೀರಗಲ್ಲುಗಳಿವೆ. ಅವುಗಳಲ್ಲಿ ಒಂದು ಕ್ರಿ.ಶ. 974ರ ಕಲ್ಯಾಣ ಚಾಲುಕ್ಯರ ಕಾಲದ್ದಾದರೆ, ಇನ್ನುಳಿದ ಮೂರು ಕ್ರಿ.ಶ. 800, 900 ರ ನೊಳಂಬರ ಕಾಲದ್ದಾಗಿವೆ ಎಂದು ಗುರುತಿಸಲಾಗಿದೆ.
ಈ ವೀರಗಲ್ಲುಗಳ ಇತಿಹಾಸದ ಮಹತ್ವ ತಿಳಿಸುವ ದೃಷ್ಟಿಯಿಂದ ಸಂರಕ್ಷಿಸುವುದು ಅಗತ್ಯವಾಗಿದೆ. ಸುರಕ್ಷತೆ ಇಲ್ಲದೆ ಅಳಿವಿನ ಅಂಚಿನಲ್ಲಿರುವ ಶಾಸನಗಳ ರಕ್ಷಣೆಗೆ ವಿಜಯವಾಣಿ ವರದಿ ಪ್ರಕಟಿಸಿ ಸಂಬಂಧಪಟ್ಟ ಇಲಾಖೆಗಳ ಗಮನ ಸೆಳೆದಿದ್ದನ್ನು ಸ್ಮರಿಸಬಹುದು.
ಜಿಲ್ಲಾಧಿಕಾರಿ ಭೇಟಿ ವೇಳೆ ತಹಸೀಲ್ದಾರ್ ರೇಹಾನ್ ಪಾಷಾ, ಸಿರಸ್ತೇದಾರ್ ಬಿ. ಗಿರೀಶ, ಗ್ರಾಪಂ ಅಧ್ಯಕ್ಷೆ ಕರಿಯಮ್ಮ, ಶಂಕ್ರಮ್ಮ, ಜಯರಾಮ ಮತ್ತಿತರರು ಇದ್ದರು.