ಯುದ್ಧಭೂಮಿಯಿಂದ ಹೆತ್ತವರ ಮಡಿಲು ಸೇರಿದ ಶೀತಲ್ ; ಮೃತ ನವೀನ್ ನಾನೂ ಸಹಪಾಠಿಗಳು

6 TPT 1
Published on

ತಿಪಟೂರು : ಎಂಬಿಬಿಎಸ್ ವ್ಯಾಸಂಗಕ್ಕಾಗಿ ಯೂಕ್ರೇನ್‌ಗೆ ಹೋಗಿದ್ದ ನಗರದ ಬಿ.ಎಂ.ಆರ್.ಲೇಔಟ್ ಗುತ್ತಿಗೆದಾರ ರಾಮಚಂದ್ರ, ವೀಣಾ ದಂಪತಿ ಪುತ್ರಿ ಶೀತಲ್, ಯುದ್ಧಭೂಮಿಯಲ್ಲಿ ಕುಡಿಯಲು ನೀರಿಲ್ಲದೆ ಮಂಜು ಗಡ್ಡೆಯನ್ನೇ ಕರಗಿಸಿ ಕುಡಿಯುವ ಸ್ಥಿತಿಯಿಂದ ಪಾರಾಗಿ, ಹೆತ್ತವರ ಮಡಿಲು ಸೇರಿದ್ದಾಳೆ.

ಶೀತಲ್ ಪಿಯುಸಿ ನಂತರ ಎಂಬಿಬಿಎಸ್ ವಿದ್ಯಾಭ್ಯಾಸಕ್ಕಾಗಿ ಕಾರ್ಕೀವ್ ಯೂಕ್ರೇನ್ ಯೂನಿವರ್ಸಿಟಿಗೆ ದಾಖಲಾಗಿದ್ದಳು. ಒಟ್ಟು ನಾಲ್ಕೂವರೆ ವರ್ಷದ 12 ಸೆಮಿಸ್ಟರ್ ಪೈಕಿ 7 ಸೆಮಿಸ್ಟರ್ ಮುಗಿಸಿದ್ದ ಶೀತಲ್, ವೈದ್ಯಕೀಯ ಪದವಿಗೆ ಸನಿಹದಲ್ಲಿದ್ದಾಗ ಯುದ್ಧ ಯೂಕ್ರೇನ್ ತೊರೆಯುವಂತೆ ಮಾಡಿತು.

ಆಕಸ್ಮಿಕ ಗುಂಡು ತಗುಲಿ ಮೃತಪಟ್ಟ ನವೀನ್ ಮತ್ತು ನಾನು ಸಹಪಾಠಿಗಳು. ಒಂದೇ ತರಗತಿಯಲ್ಲಿ ಕಲಿಯುತ್ತಿದ್ದೆವು. ಆತ ಹಾಸ್ಟೆಲಿನಲ್ಲಿದ್ದರೆ, ನಾನು ಅಪಾರ್ಟ್‌ಮೆಂಟಿನಲ್ಲಿದ್ದೆ. ಆತ ಸ್ನೇಹಿತನೊಂದಿಗೆ ಆಹಾರ ಸಾಮಗ್ರಿ ಖರೀದಿಸಲು ಹೊರಗೆ ಹೊರಟಾಗ ಜತೆಯಲ್ಲಿದ್ದ ಸ್ನೇಹಿತನನ್ನು ಜರ್ಕಿನ್ ಹಾಕಿಕೊಂಡು ಬರುವಂತೆ ವಾಪಸ್ ಕಳಿಸಿದ್ದ. ಸಾಲಿನಲ್ಲಿ ನಿಂತಿದ್ದಾಗ ಆಕಸ್ಮಿಕವಾಗಿ ತಗುಲಿದ ಗುಂಡೇಟಿನಿಂದ ಮೃತನಾದ. ಯುದ್ಧ ಶುರುವಾಗುವ 15 ದಿನಗಳ ಮುಂಚೆಯೇ ಭಾರತ ಸರ್ಕಾರ ವಾಪಸ್ ಬನ್ನಿ ಎಂದು ಹೇಳಿತ್ತು. ಆದರೆ ಕಾಲೇಜು ಆಡಳಿತ ಮಂಡಳಿ ಮುಕ್ತಾಯದ ಹಂತದಲ್ಲಿರುವ ಸೆಮಿಸ್ಟರ್ ಮುಗಿಸಿ ಎಂದಾಗ ತಡವಾಗಿತ್ತು. ನಾವೇನೋ ಮುಂಚಿತವಾಗಿ ಕುಡಿಯುವ ನೀರು, ಆಹಾರ ಶೇಖರಿಸಿಟ್ಟುಕೊಂಡಿದ್ದೆವು. ಆದರೆ ಕೆಲವರು ಕುಡಿಯಲು ನೀರಿನ ಸಮಸ್ಯೆಗೆ ಮಂಜನ್ನು ಶೇಖರಿಸಿಟ್ಟುಕೊಂಡು ಬಳಸುವ ಅನಿವಾರ್ಯತೆ ಸೃಷ್ಟಿಯಾಗಿತ್ತು.

ಅಂತೂ ಫೆ.27ರಂದು ದೇಶಕ್ಕೆ ಹೊರಡಲು ತೀರ್ಮಾನಿಸಿ, ಸತತ 20 ಗಂಟೆಗಳ ರೈಲು ಪ್ರಯಾಣ, ನಂತರ ಖಾಸಗಿ ಟ್ಯಾಕ್ಸಿಯಲ್ಲಿ ನಾಲ್ಕಾರು ಗಂಟೆಗಳ ಪ್ರಯಾಣದ ನಂತರ ಪೋಲೆಂಡ್ ಗಡಿ ತಲುಪಿದಾಗ ಇನ್ನು ನಾವು ಸುರಕ್ಷಿತ ಎಂಬ ಭಾವನೆ ಮೂಡಿತ್ತು. ಅಲ್ಲಿನ ರಾಯಭಾರ ಕಚೇರಿಯವರು ನಮ್ಮನ್ನು ಸತ್ಕರಿಸಿದ್ದು ನೋಡಿದರೆ ನಿಜಕ್ಕೂ ನಾವು ಭಾರತೀಯರಾಗಿ ಹುಟ್ಟಿದ್ದು ಸಾರ್ಥಕ ಎನ್ನುವಂತಿತ್ತು ಎಂದು ಶೀತಲ್ ಹೇಳುವಾಗ ಆಕೆಯ ಕಣ್ಣಲ್ಲಿ ಯುದ್ಧಭೂಮಿಯ ಚಿತ್ರಣವಿತ್ತು. ಈಕೆಯ ಆಗಮನದ ಸುದ್ದಿ ತಿಳಿದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶನಿವಾರ ರಾತ್ರಿ ಶೀತಲ್ ಮನೆಗೆ ಆಗಮಿಸಿ ಕುಶಲೋಪರಿ ವಿಚಾರಿಸಿದರು.

ಜಗತ್ತಿನಲ್ಲಿ ಏರ್‌ಲಿಫ್ಟ್ ಮಾಡಿದ ಹೆಗ್ಗಳಿಕೆ ನಮ್ಮ ದೇಶಕ್ಕೆ ಸಲ್ಲುತ್ತೆ. ಕೆಲವೆಡೆ ರೈಲುಗಳಲ್ಲಿ ಭಾರತೀಯರನ್ನು ಹತ್ತಿಸಿಕೊಳ್ಳಲು ನಿರಾಕರಿಸಿದ್ದು ಎಲ್ಲೆಡೆ ಕಂಡು ಬರುವಂತೆ ಅವರಲ್ಲಿರುವ ಸ್ವದೇಶ ಪ್ರೇಮ ಇರಬಹುದು. ರಾಜ್ಯದ 120 ವಿದ್ಯಾರ್ಥಿಗಳು ಸೇರಿ ಒಟ್ಟು 6 ಸಾವಿರ ಭಾರತೀಯ ವಿದ್ಯಾರ್ಥಿಗಳು ಯೂಕ್ರೇನಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರನ್ನು ರಕ್ಷಿಸಿ ಕರೆತರುವ ನಿಟ್ಟಿನಲ್ಲಿ ದೇಶ ಮಾಡುತ್ತಿರುವಷ್ಟು ಪ್ರಯತ್ನ ಬೇರ‌್ಯಾವ ದೇಶದವರೂ ಮಾಡುತ್ತಿಲ್ಲ. ಪ್ರಧಾನಿ ಮೋದಿಯವರಿಗೆ ನನ್ನದೊಂದು ಸಲಾಂ. ಆರ್.ಶೀತಲ್, ತಿಪಟೂರು ಪ್ರಸ್ತುತ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪರ್ಯಾಯದ ಬಗ್ಗೆ ಪರಿಹಾರ ಖಂಡಿತ ಸಿಗಲಿದೆ ಧೈರ್ಯವಾಗಿರಿ. ಬಿ.ಸಿ. ನಾಗೇಶ್, ಶಿಕ್ಷಣ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net