

ತಿಪಟೂರು ; ಮಕ್ಕಳಿಗಾಗಿ ನಿರ್ಮಿಸಲಾಗಿರುವ ಅಂಗನವಾಡಿ ಕಟ್ಟಡ 12 ವರ್ಷಗಳಾದರೂ ಉದ್ಘಾಟನೆ ಭಾಗ್ಯ ಕಾಣದೆ ಗೆದ್ದಲು ತಿನ್ನುತ್ತಿದೆ. ಹೊನ್ನವಳ್ಳಿಯ ಮಂಜುನಾಥ ನಗರದಲ್ಲಿ ಸುವರ್ಣ ಗ್ರಾಮ ಯೋಜನೆಯಡಿ ತುಮಕೂರು ಜಿಲ್ಲಾ ಪಂಚಾಯತ್ ರಾಜ್ ವಿಭಾಗ ಮತ್ತು ತಿಪಟೂರು ಜಿಲ್ಲಾ ಪಂಚಾಯತ್ ರಾಜ್ ಉಪ-ವಿಭಾಗ ದಡಿ 2009-10ರಲ್ಲಿ ಅಂದಾಜು 2.50 ಲಕ್ಷ ರೂಪಾಯಿ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಕಟ್ಟಡ ನಿರ್ಮಾಣಗೊಂಡು 12 ವರ್ಷಗಳಾದರೂ ಇಲ್ಲಿವರೆಗೂ ಉದ್ಘಾಟನೆ ಮಾಡಿಲ್ಲ, ಹೀಗಾಗಿ ನಿರುಪಯುಕ್ತವಾಗಿದೆ.
ಕಟ್ಟಡದ ಸುತ್ತಲೂ ಮುಳ್ಳಿನ ಗಿಡಗಳು ಬೆಳೆದಿದ್ದು, ಹಾವು, ಚೇಳುಗಳ ವಾಸಸ್ಥಾನವಾಗಿದೆ. ಇದೇ ಕಟ್ಟಡ ಸರ್ಕಾರಿ ಶಾಲೆಯ ಆಸು, ಪಾಸಿನಲ್ಲಿ ಇದ್ದಿದ್ದರೆ, ಕೊಠಡಿಗಳ ಕೊರತೆಯಾದರೂ ನೀಗುತ್ತಿತ್ತು ಎನ್ನುವ ಇಲ್ಲಿನ ನಿವಾಸಿಗಳು, ರಾಜಕಾರಣಿಗಳು ಮತಯಾಚನೆಗೆ ಬಂದು ಹೋಗುವಾಗ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಟ್ಟಡದ ದುಸ್ಥಿತಿ ಅವರ ಗಮನಕ್ಕೆ ಬರಲ್ಲವೇ ಎಂದು ಪ್ರಶ್ನಿಸುತ್ತಾರೆ.
ರಾಜಕಾರಣಿಗಳಿಗೆ ಹೊನ್ನವಳ್ಳಿ ಎಂದರೆ ಅಸಡ್ಡೆ. ನೀರಿನ ವಿಷಯದಲ್ಲೂ ಇದೇ ರೀತಿ ತಾತ್ಸಾರ ಮಾಡಿದರು. ಈಗ ನೋಡಿದರೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾಗಿರುವ ಅಂಗನವಾಡಿ ಕಟ್ಟಡ ನಿರುಪಯುಕ್ತವಾಗಿ ಬಿದ್ದಿದೆ. ಇದಕ್ಕೆ ಕಾರಣ ತಿಳಿಸಬೇಕಾದ್ದು, ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿ. ಎ.ಆರ್. ನಂಜಪ್ಪ, ಹೊನ್ನವಳ್ಳಿ ಇದು, ಸುವರ್ಣ ಗ್ರಾಮ ಯೋಜನೆಯಡಿ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ನಿರ್ಮಿಸಲಾಗಿರುವ ಕಟ್ಟಡ, ಇದುವರೆಗೂ ಇಲಾಖೆಗೆ ಹಸ್ತಾಂತರವಾಗಿಲ್ಲ. ಜತೆಗೆ ಹೊನ್ನವಳ್ಳಿ ಯಾವುದೇ ಮಕ್ಕಳು ಸೌಲಭ್ಯದಿಂದ ವಂಚಿತರಾಗದಂತೆ 5 ಕಡೆ ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸಮರ್ಪಕ ಸೇವೆ ನೀಡಲಾಗುತ್ತಿದೆ. ಕಟ್ಟಡ ಹಸ್ತಾಂತರಿಸಿ, ಸರ್ಕಾರದಿಂದ ಕೇಂದ್ರ ಪ್ರಾರಂಭಿಸಲು ಸೂಚನೆ ಬಂದರೆ ಕಟ್ಟಡ ಬಳಸಲಾಗುವುದು. ಪಿ.ಓಂಕಾರಪ್ಪ, ಸಿಡಿಪಿಒ, ತಿಪಟೂರು ಸುವರ್ಣ ಗ್ರಾಮ ಯೋಜನೆಯಡಿ ಜಿಲ್ಲಾ ಪಂಚಾಯತ್ ರಾಜ್ ವಿಭಾಗದಿಂದ ನಿರ್ಮಿಸಲಾಗಿರುವ ಅಂಗನವಾಡಿ ಕೇಂದ್ರ ಇಲ್ಲಿವರೆಗೂ ನಮ್ಮ ಇಲಾಖೆಗೆ ಹಸ್ತಾಂತರವಾಗಿಲ್ಲ. ಹೊನ್ನವಳ್ಳಿಯಲ್ಲಿ ಒಟ್ಟು 4 ಅಂಗನವಾಡಿ ಕೇಂದ್ರಗಳು ಸ್ವಂತದ್ದಾಗಿದ್ದು, ಉಳಿದ ಒಂದು ಎಸ್ಸಿ ಕಾಲನಿಯ ಕೇಂದ್ರವನ್ನು ತಾತ್ಕಾಲಿಕವಾಗಿ ಹಳೇ ಆಸ್ಪತ್ರೆಯ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಮಂಜುನಾಥ ನಗರ ಬಡಾವಣೆಯಲ್ಲಿ ಅಂಗನವಾಡಿ ಕೇಂದ್ರ ಪ್ರಾರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿ 2 ವರ್ಷಗಳಾಗಿದೆ, ಇನ್ನೂ ಮಂಜೂರಾತಿ ದೊರೆತಿಲ್ಲ. ಬಿ.ಎನ್. ಪ್ರೇಮ, ಮೇಲ್ವಿಚಾರಕಿ, ಸಿಡಿಪಿಒ ಇಲಾಖೆ. ಹೊನ್ನವಳ್ಳಿ ವಿಭಾಗ