

ತಿಪಟೂರು : ಡಾ.ಬಿ.ಆರ್.ಅಂಬೇಡ್ಕರ್, ದೇವರಾಜು ಅರಸು, ಡಾ.ಬಾಬು ಜಗಜೀವನ್ ರಾಂ ಹೆಸರಿನ ಕಟ್ಟಡವು ಬರೀ ಇಟ್ಟಿಗೆ ಮರಳಿನಿಂದ ಕಟ್ಟಿದ ಕಟ್ಟಡಗಳಲ್ಲ, ಅವುಗಳು ದೇಶಭಕ್ತಿಯಿಂದ ದೇಶಕಟ್ಟುವ ಕೆಲಸದಲ್ಲಿ ಸಾಗಿದವರು ನಿರ್ಮಿಸಿದ ಕಟ್ಟಡಗಳು. ಇವು ಭವಿಷ್ಯದ ಪೀಳಿಗೆಗೆ ದಾರಿಯಾಗಿವೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.
ತಾಲೂಕು ಆಡಳಿತದಿಂದ ಸೋಮವಾರ ಅಗ್ನಿಶಾಮಕ ಠಾಣೆ ಮುಂಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ನಾಮಲಕ ಹಾಗೂ ಡಾ.ಬಾಬು ಜಗಜೀವನ್ ರಾಂ ಭವನ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಹಿಂದುಳಿದ ವರ್ಗದವರು ಹಾಗೂ ಶೋಷಿತರನ್ನು ಮೇಲೆತ್ತುವ ಕೆಲಸವನ್ನು ಮೋದಿ ನೇತೃತ್ವದ ಸರ್ಕಾರ ಮಾಡುತ್ತಿದೆ. ತ್ಯಾಗ ಬಲಿದಾನ ಮೂಲಕ ಮಹಾನ್ ನಾಯಕರ ಹೋರಾಟಗಳೇ ಇಂದು ಹಲವು ಕೆಳಮಟ್ಟದ ಸಮುದಾಯಗಳು ಸುಸ್ಥಿತಿಯಲ್ಲಿ ಇರಲು ಕಾರಣವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗಳು ನಡೆಯದಿದ್ದರೆ ಯಾವುದೇ ದೇಶ, ಸಮಾಜವು ಮುಂದುವರಿಯಲು ಸಾಧ್ಯವಿಲ್ಲ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಭಾರತದಲ್ಲಿ ರಾಜಕಾರಣವನ್ನು ವೃತ್ತಿಯಾಗಿಸಿಕೊಂಡವರು ಲಕ್ಷ ಮಂದಿ ಆದರೆ, ಅದನ್ನು ವ್ರತವಾಗಿ ಸ್ವೀಕರಿಸುವವರು ಕೆಲವೇ ಮಂದಿ ಇದ್ದು, ಅಂತಹವರು ಸಮಾಜಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲದಲ್ಲಿರುತ್ತಾರೆ ಎಂದರು.
ದೇವರಾಜು ಅರಸು ಹೇಳಿಕೊಟ್ಟ ನಡೆಯುವ ದಾರಿ, ಕುಡಿಯುವ ನೀರು, ಸಾವು ಬದುಕಿನ ನಡುವೆ ಹೋರಾಟ ಮಾಡುವ ರೋಗಿಯ ಮಧ್ಯೆ ಈ ಮೂರು ವಿಚಾರಗಳ ಬಗ್ಗೆ ಯಾವತ್ತೂ ರಾಜಕಾರಣ ಮಾಡಬಾರದು ಎಂದು ತಿಳಿಸಿದಂತಂಹ ಮಹಾನ್ ನಾಯಕ ಹೆಸರಿನಲ್ಲಿ ನಡೆಯುವ ಎಲ್ಲ ನಿಗಮಗಳು ಶಕ್ತಿಯುತವಾದವು ಎಂದು ತಿಳಿಸಿದವರು. ರಾಜ್ಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ 2500ಕ್ಕೂ ಹೆಚ್ಚು ಸಮುದಾಯ ಭವನಗಳ ಕಾರ್ಯ ಪ್ರಗತಿಯಲ್ಲಿದೆ. ಕರೊನಾ ಕಾರಣಗಳಿಗೆ ಕೊಂಚ ತಡವಾಗಿದ್ದು, ಶೀಘ್ರವೇ ಅವುಗಳನ್ನು ಪೂರ್ಣಗೊಳಿಸಲಾಗುವುದು ಎಂದರು.
ನಗರಸಭೆ ಉಪಾಧ್ಯಕ್ಷ ಸೊಪ್ಪು ಗಣೇಶ್, ಸದಸ್ಯ ಶಶಿಕಿರಣ್, ಉಪವಿಭಾಗಾಧಿಕಾರಿ ದಿಗ್ವಿಜಯ ಬೋಡ್ಕೆ, ಡಿವೈಎಸ್‌ಪಿ ಸಿದ್ದಾರ್ಥ ಗೋಯಲ್, ದಂಡಾಧಿಕಾರಿ ಆರ್.ಜೆ.ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜೆ.ದಿನೇಶ್, ಹಿಂದುಳಿದ ವರ್ಗಗಳ ಇಲಾಖೆ ಸಹಾಯಕ ನಿರ್ದೇಶಕಿ ಜಲಜಾಕ್ಷಮ್ಮ, ತಾಪಂ ಮುಖ್ಯಕಾರ್ಯನಿರ್ವಹಕಾಧಿಕಾರಿ. ಎಚ್.ಎಂ.ಸುದರ್ಶನ್, ಪೌರಾಯುಕ್ತ ಉಮಾಕಾಂತ್ ಇದ್ದರು.
ಶೇ.100 ಪ್ರಗತಿ ಕಾಣುತ್ತಿದೆ ತಿಪಟೂರು : ತಿಪಟೂರು ಶೈಕ್ಷಣಿಕವಾಗಿ ಮುಂದುವರಿದಿದ್ದು, ನಗರದಲ್ಲಿ ಮಹಾಲಿಂಗಪ್ಪ ಅವರ ಪರಿಶ್ರಮದಿಂದ 50 ವರ್ಷದ ಹಿಂದೆಯೇ ಪದವಿ ಕಾಲೇಜು ನಿರ್ಮಾಣವಾಗಿದೆ. ವೈದ್ಯಕೀಯ ಶಿಕ್ಷಣ ಹೊರತುಪಡಿಸಿ ಎಲ್ಲ ರೀತಿಯ ಶಿಕ್ಷಣವೂ ದೊರೆಯುತ್ತಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯದ ಅವಶ್ಯಕತೆ ಹೆಚ್ಚಾಗಿದೆ. ಆದ್ದರಿಂದ ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯದ ಅವಶ್ಯಕತೆಯಿದೆ. ತಾಲೂಕಿನ ಎಲ್ಲ ರಸ್ತೆಗಳು ಶೇ.90 ಮುಗಿದಿದ್ದು, ಶೇ.100 ಪ್ರಗತಿಯನ್ನು ಕಾಣುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.