ಹಾಲೇನಹಳ್ಳಿ ರಸ್ತೆಯಲ್ಲೇ ನಿಂತ ಮಳೆ ನೀರು ; ಜಾಗದ ವಿವಾದ ಅಭಿವೃದ್ಧಿ ಹಿನ್ನಡೆಗೆ ಕಾರಣ ; ಎಚ್ಚೆತ್ತುಕೊಳ್ಳದ ಗ್ರಾಪಂ

23,TPT-2
Published on

ತಿಪಟೂರು : ಹಾಲೇನಹಳ್ಳಿಯಲ್ಲಿ ಚರಂಡಿ, ಮಳೆ ನೀರು ರಸ್ತೆ ಸೇರುತ್ತಿದ್ದು, ರಸ್ತೆಯೇ ಕಟ್ಟೆಯಂತೆ ಕಾಣುತ್ತಿದೆ. ರಸ್ತೆಯ ಜಾಗ ನಮಗೆ ಸೇರಿದ್ದು ಎಂಬುದನ್ನು ಪ್ರತಿಷ್ಠೆಯಾಗಿಸಿರುವುದೇ ಅಧ್ವಾನಕ್ಕೆ ಕಾರಣ ಎನ್ನಲಾಗಿದೆ.

ಮಣಕೀಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲೇನಹಳ್ಳಿಯಲ್ಲಿ ಗೊಲ್ಲರಹಟ್ಟಿ, ಭೋವಿ ಕಾಲನಿ, ಹೊಸೂರು, ಕಂಬದಹಳ್ಳಿ ಸೇರಿ ಹಲವು ಗ್ರಾಮಗಳು ಹಾಗೂ ಯಾದವ ಸಮುದಾಯದ ಹಾಲಪ್ಪ ಸ್ವಾಮಿ ಮತ್ತು ಕರಿಯಮ್ಮ ದೇವಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಹಾದು ಹೋಗಿದ್ದು, ಪ್ರಸ್ತುತ ಹಾಲೇನಹಳ್ಳಿಯ ಕೆಲವರು ರಸ್ತೆ ಹಾದು ಹೋಗಿರುವ ಜಾಗ ನಮಗೆ ಸೇರಿದ್ದು ಎಂಬುದನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಕಾರಣ, ಪ್ರಗತಿಗೆ ಹಿನ್ನಡೆ ತಂದಿದೆ.

ಸ್ಥಳೀಯ ಗ್ರಾಪಂ ಹಾಗೂ ಶಾಸಕರ ನಿಧಿಯಿಂದ ಹಣ ಬಿಡುಗಡೆ ಮಾಡಿಸಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಿಸಲು ಮುಂದಾದರು. ರಸ್ತೆ ಅಕ್ಕಪಕ್ಕದ ನಿವಾಸಿಗಳು ಕಾಮಗಾರಿಗೆ ಅವಕಾಶ ನೀಡದ ಪರಿಣಾಮ ಕಾಮಗಾರಿ ಸ್ಥಗಿತಗೊಂಡು, ಇಲ್ಲಿಗೆ ಮಂಜೂರಾಗಿದ್ದ ಕಾಮಗಾರಿ ಬೇರೆಡೆಗೆ ಹೋಗಿದೆ ಎನ್ನಲಾಗಿದೆ.

ಎಂದೋ ಆಗಬೇಕಿದ್ದ ಸಿ.ಸಿ.ರಸ್ತೆ ನಿರ್ಮಾಣಕ್ಕೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅವಕಾಶ ನೀಡುತ್ತಿಲ್ಲ. ಸಾರ್ವಜನಿಕ ರಸ್ತೆಯನ್ನು ತಮ್ಮದೆಂದು ತಿಳಿದಿದ್ದಾರೆ. ಮುಂದಿನ ಗ್ರಾಮಗಳಾದ ಗೊಲ್ಲರಹಟ್ಟಿ, ಭೋವಿ ಕಾಲನಿ ಮತ್ತು ಹೊಸೂರಿಗೆ ಹೋಗಿ ಬರಲು ಈ ರಸ್ತೆ ಬಿಟ್ಟರೆ ಬೇರೆ ಮಾರ್ಗವಿಲ್ಲ. ಮಳೆ ಬಂದಾಗ ಈ ರಸ್ತೆಯಲ್ಲಿ ಹಾದು ಹೋಗುವುದು ಅಪಾಯಕಾರಿಯಾಗಿದೆ. ರಸ್ತೆ ನಿರ್ಮಿಸಿ ಜನರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿ. ರಾಮಣ್ಣ, ಹಾಲೇನಹಳ್ಳಿ ಗ್ರಾಮಸ್ಥ ತಿಪಟೂರು ತಾಲೂಕು ರಸ್ತೆಯ ಜಾಗ ತಮ್ಮದೆಂದು ತಿಳಿದಿರುವ ಕೆಲವರು ರಸ್ತೆ ನಿರ್ಮಾಣಕ್ಕೆ ಅವಕಾಶ ಕೊಡಲಿಲ್ಲ. ಇಲ್ಲಿ ರಸ್ತೆ ನಿರ್ಮಾಣಕ್ಕೆ ಮಂಜೂರಾಗಿದ್ದ ಶಾಸಕರ ನಿಧಿ ಬೇರೆ ಕಡೆಗೆ ಹೋಗಿದೆ. ಸಮಸ್ಯೆಗೆ ಪರ್ಯಾಯ ಮಾರ್ಗ ಕಂಡುಕೊಳ್ಳಲಾಗಿದ್ದು, ಶೀಘ್ರದಲ್ಲಿ ಇಲ್ಲಿನ ರಸ್ತೆ ಸಮಸ್ಯೆ ಬಗೆಹರಿಯಲಿದೆ. ಕೆ.ಆರ್.ಹನುಮರಾಜು, ಪಿಡಿಒ, ಮಣಕಿಕೆರೆ ಗ್ರಾಪಂ ತಿಪಟೂರು ತಾಲೂಕು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net