ಇಂಧನ ವಂಚನೆ ಜಾಲ ಭೇದಿಸಿದ ಪೊಲೀಸರು ; ಬೇಬಿ ಟ್ಯಾಂಕರ್ ಮೂಲಕ ಇಂಧನ ಕಳವು ; ತಿಪಟೂರಿನಲ್ಲಿ ಟ್ಯಾಂಕರ್ ಲಾರಿ ವಶಕ್ಕೆ ಪಡೆದ ಪೊಲೀಸರು

Alteration in Petrol-Diesel Tank (4)
Published on

ತಿಪಟೂರು : ಪೆಟ್ರೋಲ್ ಟ್ಯಾಂಕರ್ ಒಳಗೆ ಪ್ರತ್ಯೇಕ ಬೇಬಿ ಟ್ಯಾಂಕರ್ ಅಳವಡಿಸಿಕೊಂಡು ಇಂಧನ ಕಳವು ಮಾಡಿ, ಬಂಕ್ ಮಾಲೀಕರನ್ನು ವಂಚಿಸುತ್ತಿದ್ದ ಜಾಲವನ್ನು ನಗರ ಠಾಣೆ ಪೊಲೀಸರು ಭೇದಿಸಿದ್ದು, ಟ್ಯಾಂಕರ್ ವಶಕ್ಕೆ ಪಡೆಯಲಾಗಿದೆ.

ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಆದಿತ್ಯ ಪೆಟ್ರೋಲ್ ಬಂಕ್‌ಗೆ ಎಚ್‌ಪಿ ಕಂಪನಿಯ ಪೆಟ್ರೋಲ್, ಡೀಸೆಲ್ ಸರಬರಾಜು ಆಗುತ್ತಿತ್ತು. ಹಲವು ತಿಂಗಳುಗಳಿಂದ ಹಣದ ಲೆಕ್ಕದಲ್ಲಿ ಎಷ್ಟೇ ನಿಗಾವಹಿಸಿದರೂ ಪ್ರತಿ ಲೋಡಿನಲ್ಲಿ 10 ರಿಂದ 15 ಸಾವಿರ ರೂಪಾಯಿ ವ್ಯತ್ಯಾಸವಾಗುತ್ತಿತ್ತು. ಜೂ.28ರಂದು ಇದೇ ಪೆಟ್ರೋಲ್ ಬಂಕ್ ಪಕ್ಕ ಅನುಮಾನಾಸ್ಪದವಾಗಿ ನಿಂತಿದ್ದ ಟ್ಯಾಂಕರ್ ಬಗ್ಗೆ ಪೊಲೀಸ್ ಗುಪ್ತ ವಾರ್ತೆ ವಿಭಾಗ ನೀಡಿದ ಮಾಹಿತಿ ಮತ್ತು ಆದಿತ್ಯ ಪೆಟ್ರೋಲ್ ಬಂಕ್ ಮಾಲೀಕರು ಟ್ಯಾಂಕರ್ ವಿನ್ಯಾಸದ ಬಗ್ಗೆ ಅನುವಾನ ವ್ಯಕ್ತಪಡಿಸಿದ ನಂತರ ನಗರ ಠಾಣೆ ಇನ್‌ಸ್ಪೆಕ್ಟರ್ ಎಂ.ಬಿ.ಶಿವಕುಮಾರ್ ಟ್ಯಾಂಕರ್ ಪರಿಶೀಲಿಸಿ ಮಾಹಿತಿ ದೊರಕದ ಕಾರಣ ಹಾಸನದ ಎಚ್‌ಪಿಸಿಎಲ್ ಟರ್ಮಿನಲ್ ಗಮನಕ್ಕೆ ತಂದಿದ್ದರು. ಅವರೂ ಕೂಡ ಟ್ಯಾಂಕರ್‌ನ ಒಳಭಾಗದಲ್ಲಿ ಪ್ರತ್ಯೇಕ ಟ್ಯಾಂಕ್ ಇರುವ ಬಗ್ಗೆ ಸಂಶಯ ವ್ಯಕ್ತಪಡಿಸಿ, ದೃಢಪಡಿಸಿಕೊಳ್ಳಲು ಸೂಚಿಸಿದ್ದರು.

ಬಳಿಕ ಲಾರಿಯನ್ನು ಹಾಸನಕ್ಕೆ ಕೊಂಡೊಯ್ದು ಜಿಲ್ಲಾ ಅಳತೆ ಮತ್ತು ಮಾಪನ ಶಾಸ್ತ್ರ ಅಧಿಕಾರಿಗಳು ಪರಿಶೀಲಿಸಿದಾಗ ಪ್ರತ್ಯೇಕ ಟ್ಯಾಂಕ್ ವಿನ್ಯಾಸ ಮಾಡಿಕೊಂಡು ವಂಚಿಸುತ್ತಿದ್ದುದು ಸ್ಪಷ್ಟವಾಗಿದೆ.

ಹಾಸನ್ ಎಚ್‌ಪಿಸಿಎಲ್ ಟರ್ಮಿನಲ್ ಮಾಹಿತಿ ಪ್ರಕಾರ ಧನಲಕ್ಷ್ಮೀ ಟ್ರಾನ್ಸ್‌ಪೋರ್ಟ್ ಎಂಬ ಗುತ್ತಿಗೆದಾರರ ಹೆಸರಿನಲ್ಲಿ ಇಂಧನ ಪೂರೈಕೆಯಾಗಿದ್ದು, ಗುತ್ತಿಗೆದಾರರ ಹೆಸರಿನಲ್ಲಿದ್ದ ಇಂತಹ 8 ರಿಂದ 10 ಟ್ಯಾಂಕರ್‌ಗಳನ್ನು ಹಾಸನ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಪ್ರತಿ ಲೋಡ್‌ನಲ್ಲಿ 100 ರಿಂದ 120 ಲೀಟರ್ ಪೆಟ್ರೋಲ್, ಡೀಸೆಲ್ ಲೆಕ್ಕದಲ್ಲಿ ಪ್ರತಿ ದಿನ ಒಂದು ಲೋಡಿನಲ್ಲಿ ಕನಿಷ್ಠ 10 ಸಾವಿರ ಮೌಲ್ಯದ ಇಂಧನ ಕದಿಯಲಾಗಿದೆ. ಹಾಸನ ಮತ್ತು ತಿಪಟೂರು ಠಾಣೆಗಳಲ್ಲಿ ವಂಚನೆ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದ್ದು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ಕಾರ್ಯಕ್ಷಮತೆ ಕೊಂಡಾಡಿದ ಎಸ್ಪಿ : ತಿಪಟೂರಿನಲ್ಲಿ ಪ್ರಪ್ರಥಮವಾಗಿ ಪ್ರಕರಣ ದಾಖಲಾದ ನಂತರ ಹಾಸನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 9 ರಿಂದ10 ಟ್ಯಾಂಕರ್‌ಗಳಲ್ಲಿ ಇದೇ ರೀತಿಯ ವಂಚನೆ ಪತ್ತೆ ಹಚ್ಚಲಾಗಿದೆ. ಸುಮೊಟೋ ಪ್ರಕರಣ ದಾಖಲಿಸಿದ ಅಂದಿನ ಇನ್‌ಸ್ಪೆಕ್ಟರ್ ಎಂ.ಬಿ.ಶಿವಕುಮಾರ್ ವರ್ಗಾವಣೆಗೂ, ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿರುವುದಾಗಿ ತುಮಕೂರು ಎಸ್ಪಿ ರಾಹುಲ್‌ಕುವಾರ್ ಶಹಾಪುರ್‌ವಾಡ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದು, ಡಿವೈಎಸ್‌ಪಿ ಎನ್.ಚಂದನ್ ಕುಮಾರ್, ನಗರ ಠಾಣೆಯ ಇನ್‌ಸ್ಪೆಕ್ಟರ್ ಮತ್ತು ಸಿಬ್ಬಂದಿ ಕಾರ್ಯಕ್ಷಮತೆ ಕೊಂಡಾಡಿದ್ದಾರೆ.

ಹಾಸನ ಪೊಲೀಸರು ವಶಪಡಿಸಿಕೊಂಡಿರುವ 10 ಟ್ಯಾಂಕರ್ ಸೇರಿ ಸುಮಾರು 25 ಟ್ಯಾಂಕರ್‌ಗಳಲ್ಲಿ ಇದೇ ರೀತಿ ವಂಚನೆ ನಡೆದಿದೆ. ಅಂದಾಜಿನಂತೆ ಪ್ರತಿ ದಿನ ಒಂದು ಲೋಡ್‌ನಲ್ಲಿ 10 ಸಾವಿರ ಮೌಲ್ಯದ ಇಂಧನ ಕಳವಾದರೆ, ತಿಂಗಳ ಲೆಕ್ಕದಲ್ಲಿ 75 ಲಕ್ಷ ರೂಪಾಯಿ ಮೌಲ್ಯದ ಇಂಧನ ಕಳುವಾಗುತ್ತಿದೆ. ಇದರ ಹಿಂದೆ ದೊಡ್ಡ ಜಾಲವೇ ಇರಬಹುದು. ಎನ್.ಚಂದನ್ ಕುಮಾರ್, ಡಿವೈಎಸ್‌ಪಿ ತಿಪಟೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net