

- ಭೂ ಪರಿವರ್ತನೆಗೆ 40ಸಾವಿರ ರೂ. ಲಂಚದ ಬೇಡಿಕೆ
ಬೆಳಗಾವಿ: ಭೂ ಪರಿವರ್ತನೆ ಮಾಡಿಕೊಡಲು 40 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ, ಬೆಳಗಾವಿ ತಾಪಂ ಕಾರ್ಯ ನಿರ್ವಾಹಕ ಹಾಗೂ ಗ್ರೇಡ್-2 ಕಾರ್ಯದರ್ಶಿ ಶುಕ್ರವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ತಾಪಂ ಕಾರ್ಯ ನಿರ್ವಹಣಾಧಿಕಾರಿ ರಾಮರೆಡ್ಡಿ ಪಾಟೀಲ ಹಾಗೂ ಗ್ರೇಡ್-2 ಕಾರ್ಯದರ್ಶಿ ವೈಜನಾಥ ಸನದಿ ಬಂಧಿತರು.
ನಗರದ ಕಾಕತಿವೇಸ್ ಪ್ರದೇಶದ ನಿವಾಸಿ ಶಾನವಾಜ್‌ಖಾನ್ ಪಠಾಣ (52) ಅವರು ತಮ್ಮ ನಿವೇಶನವನ್ನು ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ರಾಮರೆಡ್ಡಿ 40 ಸಾವಿರ ರೂ. ಲಂಚ ಕೇಳಿದ್ದರು. ಶಾನವಾಜ್‌ಖಾನ್ ಅವರನ್ನು ಹಲವು ದಿನಗಳಿಂದ ಪದೇಪದೇ ಕಚೇರಿಗೆ ಅಲೆದಾಡಿಸಿದ್ದರು.
ಶಾನವಾಜ್‌ಖಾನ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಪೂರ್ವ ಯೋಜನೆಯಂತೆ ಶಾನವಾಜ್‌ಖಾನ್ ಅವರು ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿಗೆ ಬಂದು ಅಧಿಕಾರಿಗಳ ಕೈಗೆ ಲಂಚದ ಹಣ ಕೊಟ್ಟರು. ಆಗ ದಾಳಿ ಮಾಡಿದ ಇನ್‌ಸ್ಪೆಕ್ಟರ್ ಅನ್ನಪೂರ್ಣ ಹುಲಗೂರು ಅವರು ಆರೋಪಿಗಳನ್ನು ಬಂಧಿಸಿದರು. ತನಿಖೆ ಮುಂದುರಿದಿದೆ ಎಂದು ಅಧಿಕಾರಿಗಳು ತಿಳಿಸಿದರು.