ಕುಡಿಯುವ ನೀರಿಗೆ ಸಮಸ್ಯೆಯಾಗದಿರಲಿ

1755859750019
ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಆಡಳಿತಾಧಿಕಾರಿ ಅಬ್ದುಲ್ ನಭಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
Published on

ಸೋಮವಾರಪೇಟೆ: ಜಲಜೀವನ್ ಮಿಷನ್ ಯೋಜನೆಯಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಬೇಕೆಂದು ಇಲಾಖಾಧಿಕಾರಿಗೆ ಆಡಳಿತಾಧಿಕಾರಿ ಅಬ್ದುಲ್ ನಭಿ ಸೂಚನೆ ನೀಡಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಗೆ ಸಂಬಂಧಿಸಿದಂತೆ ಸೋಮವಾರಪೇಟೆ ತಾಲೂಕಿನಲ್ಲಿ 248 ಹಾಗೂ ಕುಶಾಲನಗರ ತಾಲೂಕಿನಲ್ಲಿ 218 ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇನ್ನು ಎರಡು ತಾಲೂಕಿನಲ್ಲಿ ಒಟ್ಟು 27ಕಾಮಗಾರಿ ಬಾಕಿ ಇದ್ದು, ಇನ್ನು ಒಂದು ತಿಂಗಳೊಳಗಾಗಿ ಪೂರ್ಣಗೊಳಿಸಲಾಗುವುದು ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್ ವೀರೇಂದ್ರ ಸಭೆಗೆ ಮಾಹಿತಿ ನೀಡಿದರು.

ತಾಲೂಕಿನ ಎಲ್ಲ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಿದ್ದು, ಖಾಲಿ ಇರುವ ಹುದ್ದೆಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ಶೇಖಡವಾರು ಉತ್ತಮ ಫಲಿತಾಂಶ ದೊರೆತಿದೆ. ಮಳೆಗಾಲದ ರಜೆಯನ್ನು ಸರಿದೂಗಿಸಲು ಈಗಾಗಲೇ ಬೆಳಗ್ಗೆ ಮತ್ತು ಸಂಜೆ ವಿಶೇಷ ತರಗತಿಗಳು ಹಾಗೂ ಶನಿವಾರ ಸಂಜೆಯವರೆಗೂ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಮಾಹಿತಿ ನೀಡಿದರು.

ಮಕ್ಕಳ ಆರೋಗ್ಯದ ದೃಷ್ಠಿಯಿಂದ ತಾಲೂಕಿನಲ್ಲಿರುವ ಶಾಲೆಗಳ 301 ಅಡುಗೆ ಸಿಬ್ಬಂದಿಗೂ ಕಡ್ಡಾಯವಾಗಿ ಆರೋಗ್ಯ ತಪಾಸಣೆ ನಡೆಸುವುದು ಅಗತ್ಯ ಎಂದು ತಾಪಂ ಇಒ ಪರಮೇಶ್‌ಕುಮಾರ್ ಅವರು ಅಕ್ಷರ ದಾಸೋಹ ಸಹಾಯಕ ನಿರ್ದೆಶಕ ಹೇಮಂತ್ ಕುಮಾರ್ ಅವರಿಗೆ ಸೂಚಿಸಿದರು.

ಪಶು ಸಂಗೋಪನೆ ಇಲಾಖೆಯಿಂದ ಈಗಾಗಲೇ ರಾಸುಗಳಿಗೆ ಕಾಲು ಬಾಯಿ ಜ್ವರದ ಲಸಿಕೆ, ಚರ್ಮಗಂಟು ನಿವಾರಣಾ ಲಸಿಕೆ ನೀಡಲಾಗಿದೆ. ಹಾಲು ಮಾರಾಟ ಕೇಂದ್ರಗಳ ಸಂಖ್ಯೆ ಕಡಿಮೆ ಇರುವ ಕಾರಣ ಹಸು ಸಾಕಾಣಿಕೆ ಕಡಿಮೆಯಾಗಿದೆ. ಆದರೂ ತಾಲೂಕಿನಲ್ಲಿ ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೆಶಕ ಡಾ.ರಾಜಶೇಖರ್ ತಿಳಿಸಿದರು.

ಪ್ರಸಕ್ತ ಮಳೆಗಾಲದಲ್ಲಿ ಸೋಮವಾರಪೇಟೆ ತಾಲೂಕಿನಲ್ಲಿ 660 ವಿದ್ಯುತ್ ಕಂಬಗಳು ಹಾಗೂ 15 ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದ್ದು, ಸೆಸ್ಕ್ ಇಲಾಖೆಯಿಂದ ದುರಸ್ತಿಪಡಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲಾಗಿದೆ ಎಂದು ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದರು.

ಅರಣ್ಯ, ಕೃಷಿ, ಮೀನುಗಾರಿಕೆ, ಶಿಶು ಅಭಿವೃದ್ಧಿ ಇಲಾಖೆ, ಜಿಪಂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net