

ಹುಬ್ಬಳ್ಳಿ: ತಾಲೂಕಿನ ಯಾವುದೇ ಹಳ್ಳಿಯಲ್ಲಿ ಕುಡಿಯುವ ನೀರಿನ ಕೊರತೆಯಾಗಬಾರದು, ಇದಕ್ಕಾಗಿ ಎಲ್ಲ ಅಧಿಕಾರಿಗಳು ಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಹೇಳಿದರು.
ಇಲ್ಲಿಯ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಕರ್ನಾಟಕ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದಿಂದ ಎಲ್ಲೆಲ್ಲಿ ಅಗತ್ಯ ಇದೆಯೋ ಅಲ್ಲಿ ಕೊಳವೆ ಬಾವಿ ಕೊರೆಸಿ ನೀರು ಪೂರೈಸಬೇಕು. ಇದಕ್ಕಾಗಿ ಬೇಡಿಕೆಯನ್ನು ಆಯಾ ಪಂಚಾಯಿತಿಯವರು ಸಲ್ಲಿಸಬೇಕು. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕೊಳವೆ ಬಾವಿ ನೀರನ್ನು ಆಗಾಗ ಪರೀಸಿ ಕುಡಿಯಲು ಯೋಗ್ಯ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ಒಂದು ವೇಳೆ ಕಲುಷಿತ ಎಂದು ಕಂಡು ಬಂದಲ್ಲಿ ಹಿರಿಯ ಅಧಿಕಾರಿಗಳಿಗೆ ವರದಿ ಮಾಡಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಹೊಸಮನಿ ಸೂಚಿಸಿದರು.
ಉಮಚಗಿಯಲ್ಲಿ ನೀರಿನ ಮೂಲ ಇಲ್ಲ. ಹಾಗಾಗಿ ಕೋಳಿವಾಡದಲ್ಲಿ ಕೊಳವೆ ಬಾವಿ ಕೊರೆದು ನೀರು ತರುವ ಬಗ್ಗೆ ಸ್ಥಳಿಯರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ಬಗ್ಗೆ ಸಭೆಯಲ್ಲಿ ಚಚಿರ್ಸಲಾಯಿತು.
ಹಿಂದುಳಿದ ವರ್ಗಗಳ ಹಾಸ್ಟೇಲ್ಗಳಿಗೆ ಬಿಲ್ ತುಂಬಿಲ್ಲ ಎಂದು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಬಾರದು. ಸಮಯಾವಕಾಶ ನೀಡಬೇಕು ಎಂದು ಇಲಾಖೆ ಅಧಿಕಾರಿ ಕರವೀರಮಠ ಮನವಿ ಮಾಡಿದರು. ಹಾಸ್ಟೇಲ್ಗಳಲ್ಲಿ ಊಟದ ಗುಣಮಟ್ಟ ಕಾಪಾಡಲು ಹಿರಿಯ ಅಧಿಕಾರಿಗಳು ಆಗಾಗ ಅಲ್ಲಿಯೇ ಊಟ ಮಾಡಬೇಕು ಎಂದು ಹೇಳಿದರು.
ಸಾಮಾಜಿಕ ಅರಣ್ಯ ವಿಭಾಗ ಹಾಗೂ ಅರಣ್ಯ ಇಲಾಖೆ ನೆಟ್ಟಿರುವ ಸಸಿಗಳನ್ನು ಮಳೆ ಕೊರತೆ ಹಿನ್ನೆಲೆಯಲ್ಲಿ ಟ್ಯಾಂಕರ್ ನೀರು ಪೂರೈಸಿ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಲಾಯಿತು.
ಶಾಲೆಗಳ ಶೌಚಗೃಹ ಸ್ವಚ್ಛತೆ ಬಗ್ಗೆ ಚರ್ಚೆ ನಡೆಯಿತು. ಬಿಇಒ ಉಮೇಶ ಬೊಮ್ಮಕ್ಕನವರ ಮಾತನಾಡಿ, ತಾಲೂಕಿನಲ್ಲಿ 120 ಶಾಲೆಗಳಿವೆ. 15 ಶಾಲೆಗೆ ಮಾತ್ರ ಗ್ರುಪ್ ಡಿ ನೌಕರರು ಇದ್ದಾರೆ. ಹಾಗಾಗಿ ಶೌಚಗೃಹ ಸ್ವಚ್ಛತೆ ಸವಾಲಿನ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.
ಬರ ಅಧ್ಯಯನ ತಂಡ ಜಿಲ್ಲೆಗೆ ಆಗಮಿಸುವ ಹಿನ್ನೆಲೆಯಲ್ಲಿ ಅಗತ್ಯ ಮಾಹಿತಿ ಪೂರೈಸಲು ಕೃಷಿ ಇಲಾಖೆ ಸನ್ನದ್ಧವಾಗಿದೆ ಎಂದು ಹುಬ್ಬಳ್ಳಿ ತಾಲುಕು ಕೃಷಿ ಸಹಾಯಕ ನಿರ್ದೇಶಕ ರಾಜಶೇಖರ ಅಣಗೌಡರ ತಿಳಿಸಿದರು.
ಕಚೇರಿ ಕಟ್ಟಡ ಕ್ಲೀನ್:
ಸರ್ಕಾರಿ ಕಚೇರಿಗಳ ಮಾಳಿಗೆ ಹಾಗೂ ಅಕ್ಕಪಕ್ಕದ ಜಾಗದಲ್ಲಿ ಕ್ಲೀನ್ ಇಟ್ಟುಕೊಳ್ಳಬೇಕು. ಆಯಾ ಕಚೇರಿ ಕೆಲಸಗಾರರಿಗೆ ಹೇಳಿ ಕೆಲಸ ಮಾಡಿಸಬೇಕು. ಇದರ ಬಗ್ಗೆ ಕಚೇರಿಯ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು ಎಂದು ಇಒ ರಾಮಚಂದ್ರ ಹೊಸಮನಿ ಹೇಳಿದರು.
ವಿವಿಧ ಇಲಾಖೆ ಅಧಿಕಾರಿಗಳು ಪ್ರಗತಿ ವರದಿ ಮಂಡನೆ ಮಾಡಿದರು.