

ಹೊಸಪೇಟೆ: ಈ ಬಾರಿಯ ಕೈಲಾಸಂ ಪ್ರಶಸ್ತಿಗೆ ಧಾರವಾಡದ ಹವ್ಯಾಸಿ ರಂಗಭೂಮಿ ಕಲಾವಿದ ರವಿ ಕುಲಕರ್ಣಿಯನ್ನು ಆಯ್ಕೆ ಮಾಡಲಾಗಿದ್ದು, ಜು.30 ರಂದು ಆಯೋಜಿಸಿರುವ ಟಿ.ಪಿ.ಕಲಾಸಂ ದಿನಾಚರಣೆ-2022 ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ಟಿ.ಬಿ.ಡ್ಯಾಂ ಕನ್ನಡ ಕಲಾ ಸಂಘದ ಕಾರ್ಯದರ್ಶಿ ಎಸ್.ಎಸ್.ಚಂದ್ರಶೇಖರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು. ನಗರದ ಅಮರಾವತಿಯ ಪಂಪಾ ಕಲಾ ಮಂದಿರದಲ್ಲಿ ಅಂದು ಸಂಜೆ 6.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಜಿ.ನಾಗಮೋಹನ ಅಧ್ಯಕ್ಷತೆ ವಹಿಸುವರು. ಕನ್ನಡ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾಧ್ಯಕ್ಷ ಡಾ.ನಿಷ್ಠ ರುದ್ರಪ್ಪ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ನರೇಂದ್ರ ಬಾಬು, ತುಂಗಭದ್ರಾ ಮಂಡಳಿ ಅಧೀಕ್ಷಕ ಅಭಿಯಂತರ ಆರ್.ಶ್ರೀಕಾಂತ ರೆಡ್ಡಿ, ಕಾರ್ಯಪಾಲಕ ಅಭಿಯಂತರ ಜಿ.ಟಿ.ರವಿಚಂದ್ರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು. ಸಂಘದ ಹಿರಿಯ ಸದಸ್ಯ ರಾಜು ಕುಲ್ಕರ್ಣಿ ಇದ್ದರು.