

ನಗರದ ತೊಣಚಿಕೊಪ್ಪಲು ಬಡಾವಣೆಯಲ್ಲಿ ಸೋಮವಾರ ಶಕ್ತಿದೇವತೆ ಬಿಸಿಲು ಮಾರಮ್ಮನ ಹಬ್ಬ(ಜಾತ್ರೆ) ಸಂಭ್ರಮದಿಂದ ನೆರವೇರಿತು.
ಬೆಳಗ್ಗೆ 6 ಗಂಟೆಯಿಂದಲೇ ಅಮ್ಮನವರಿಗೆ ಅಲಂಕಾರ, ಪೂಜೆ, ಹೋಮ ಸೇರಿದಂತೆ ಇತರ ಧಾರ್ಮಿಕ ಕಾರ್ಯಗಳು ನಡೆದವು. ರಾತ್ರಿ 8 ಗಂಟೆವರೆಗೆ ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿತ್ತು. ಈ ಮಧ್ಯೆ ತಂಬಿಟ್ಟು ಹೊತ್ತ ಮಹಿಳೆಯರಿಂದ ತಂಪಿನ ಮೆರವಣಿಗೆ ನಡೆಸಿದರು. ತೊಣಚಿಕೊಪ್ಪಲಿನ ಒಳಭಾಗದ ಹುಚ್ಚಮ್ಮತಾಯಿ ದೇವಸ್ಥಾನದಿಂದ ಆರಂಭವಾಗುವ ಈ ಮೆರವಣಿಗೆ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಸ್ಥಾನದಲ್ಲಿ ಕೊನೆಗೊಂಡಿತು.
ರಾತ್ರಿ 8 ಗಂಟೆಯ ನಂತರ ಹೂವುಗಳಿಂದ ಅಲಂಕಾರಗೊಂಡ ವಾಹನದಲ್ಲಿ ದೇವರ ಉತ್ಸವ ಮೂರ್ತಿ ಮೆರವಣಿಗೆ ನೆರವೇರಿತು. ಮೆರವಣಿಯ ವಾಹನಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದಿಂದ ಪ್ರಾರಂಭವಾದ ಉತ್ಸವಮೂರ್ತಿ ಮೆರವಣಿಗೆ ತೊಣಚಿಕೊಪ್ಪಲಿನ ಮುಖ್ಯರಸ್ತೆಗಳಲ್ಲಿ ಸಾಗಿ ಮುಂಜಾನೆ 4 ಗಂಟೆಗೆ ಹುಚ್ಚಮ್ಮತಾಯಿ ದೇವಸ್ಥಾನ ತಲುಪಿ ಮುಕ್ತಾಯಗೊಂಡಿತು.
ಬಿಸಿಲು ಮಾರಮ್ಮ ಕೊಡಗಿನಿಂದ ಬಂದು ಈ ಸ್ಥಳದಲ್ಲಿ ನೆಲೆಸಿದ್ದಾಳೆ ಎಂಬ ಕಥೆ ಇದೆ. ತೊಣಚಿಕೊಪ್ಪಲಿನ ಗ್ರಾಮಸ್ಥರೊಬ್ಬರು ಕೊಡಗಿನಲ್ಲಿ ಕಿತ್ತಳೆ ವ್ಯಾಪಾರ ಮಾಡಿಕೊಂಡು ಬರುವಾಗ ಮಾರಮ್ಮ ಕೂಡ ಆ ಗಾಡಿಯ ಮೂಲಕವೇ ಬಂದು ಇಲ್ಲಿ ನೆಲೆಸಿದಳೆಂಬ ಪ್ರತೀತಿ ಇದೆ. ಅಂದಿನಿಂದಲೂ ಮಾರಮ್ಮನನ್ನು ಆರಾಧಿಸಲಾಗುತ್ತಿದೆ.
ನೂರಾರು ವರ್ಷಗಳ ಇತಿಹಾಸವಿರುವ ತೊಣಚಿಕೊಪ್ಪಲು ಹಿಂದೆ ಗ್ರಾಮವಾಗಿತ್ತು. 69 ವರ್ಷಗಳ ಹಿಂದೆ ನಗರ ವ್ಯಾಪ್ತಿಗೆ ಸೇರಿ ಬಡಾವಣೆಯಾಯಿತು. ಆದರೂ, ತಮ್ಮ ಬಡಾವಣೆ ಗ್ರಾಮೀಣ ಸೊಗಡು ಮತ್ತು ಜಾನಪದ ಆಚರಣೆಗಳನ್ನು ಉಳಿಸಿಕೊಂಡಿದೆ ಎಂದು ಸ್ಥಳೀಯ ಹಿರಿಯರು ಹೇಳುತ್ತಾರೆ. ತೊಣಚಿಕೊಪ್ಪಲು ನಿವಾಸಿಗಳು ಮಾತ್ರವಲ್ಲದೆ, ನಗರದ ಎಲ್ಲ ಬಡಾವಣೆಗಳ ನಿವಾಸಿಗಳು ಶಕ್ತಿ ದೇವತೆಗೆ ಪೂಜೆ ಸಲ್ಲಿಸುತ್ತಿದ್ದಾರೆ.
ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಫೆ.26 ರಂದು ಬಿಸಿಲು ಮಾರಮ್ಮನ ದೇಗುಲದ ಆವರಣದಲ್ಲಿ ಅನ್ನ ಸಂತರ್ಪಣೆ ಆಯೋಜಿಸಲಾಗಿದೆ. ಅಂದು ಸಂಜೆ 4ಕ್ಕೆ ಬೀರೇಶ್ವರ ಟ್ರಸ್ಟ್ ವತಿಯಿಂದ 15 ಸಾವಿರ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕೂ ಮುನ್ನ ತೊಣಚಿಕೊಪ್ಪಲಿನ ಹುಚ್ಚಮ್ಮ ತಾಯಿ, ಸಿದ್ದಪ್ಪಾಜಿ ಉತ್ಸವಮೂರ್ತಿ ಹಾಗೂ ದೇವರ ಪರಿಕರಗಳನ್ನು ಪೆಟ್ಟಿಗೆಯಲ್ಲಿ ಹೊತ್ತುಕೊಂಡು ಬಲಮುರಿಗೆ ನಡಿಗೆ ಮೂಲಕ ತೆರಳಲಾಗುತ್ತದೆ. ಕಾವೇರಿ ನದಿಯಲ್ಲಿ ಪರಿಕರಗಳನ್ನು ತೊಳೆದು, ಅಲ್ಲಿಯೇ ಸಾಂಪ್ರದಾಯಿಕ ಹೋಮಗಳನ್ನು ನಡೆಸಲಾಗುವುದು. ನಂತರ ಅಲ್ಲಿಂದ ಬಿಸಿಲು ಮಾರಮ್ಮನ ದೇವಸ್ಥಾನಕ್ಕೆ ನಡಿಗೆಯಲ್ಲಿ ವಾಪಸ್ ಬಂದು ಪೂಜೆ ಸಲ್ಲಿಸಿದ ಬಳಿಕ ಆವರಣದಲ್ಲಿ ಅನ್ನ ಸಂತರ್ಪಣೆ ನಡೆಸಲಾಗುತ್ತದೆ ಎಂದು ನಗರ ಪಾಲಿಕೆ ಮಾಜಿ ಸದಸ್ಯರು ಆದ ಬೀರೇಶ್ವರ ಟ್ರಸ್ಟ್ ಸದಸ್ಯ ಗೋಪಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.