

ಮಂಡ್ಯ: ಸಿಗುವ ಅವಕಾಶ ಬಳಸಿಕೊಂಡರೆ ಜೀವನದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ಟೊಯೋಟ ಕಂಪನಿ ಅಧಿಕಾರಿ ಅಕ್ಷತಾ ಹೇಳಿದರು.
ಇಲ್ಲಿನ ಅರ್ಕೇಶ್ವರನಗರದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಿರ್ಲೋಸ್ಕರ್ ಟೊಯೋಟ ಹಾಗೂ ಅನನ್ಯ ಹಾರ್ಟ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ‘ಟೊಯೋಟ ಕೌಶಲ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಕಂಪನಿಯಲ್ಲಿ ಹಲವಾರು ಹುದ್ದೆ ಖಾಲಿ ಉಳಿಯುತ್ತಿದ್ದು, ಉದ್ಯೋಗ ಮಾಡುವವರಿಗೆ ಸಾಕಷ್ಟು ಅವಕಾಶಗಳಿವೆ. ಇದನ್ನು ಬಳಸಿಕೊಂಡಲ್ಲಿ ನಿಮ್ಮ ಜೀವನ ಸುಗಮವಾಗಲಿದೆ. ಟೊಯೋಟ ಮತ್ತು ಕಿರ್ಲೋಸ್ಕರ್ ಕಂಪನಿ ಇಂಡಿಯಾ ಮತ್ತು ಜಪಾನ್‌ನೊಂದಿಗೆ ವಿಲೀನವಾಗಿದೆ. ಮಾರುಕಟ್ಟೆಯಲ್ಲಿ ಬೃಹತ್‌ಮಟ್ಟದಲ್ಲಿ ಬೆಳೆದಿದ್ದು ಮಹಿಳೆಯರಿಗೆ ಸಾಕಷ್ಟು ಉದ್ಯೋಗ ಅವಕಾಶ ನೀಡುತ್ತಿದೆ ಎಂದರು.
ಟೊಯೋಟ ಕಂಪನಿಯಲ್ಲಿ 16,000ಕ್ಕೂ ಹೆಚ್ಚು ಜನ ಕಾರ್ಯ ನಿರ್ವಹಿಸುತ್ತಿದ್ದು, ವಿದ್ಯಾಭ್ಯಾಸ ಮುಗಿಸಿ ಕೆಲಸ ಹುಡುಕುತ್ತಿರುವವರಿಗೆ ಒಂದು ಒಳ್ಳೆಯ ಅವಕಾಶವಾಗಿದ್ದು ಇದರ ಸದುಪಯೋಗಪಡಿಸಿಕೊಳ್ಳಿ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮೂರು ತಿಂಗಳು ತರಬೇತಿ ನೀಡಲಿದ್ದು, ಈ ತರಬೇತಿಯಲ್ಲಿ ಉಚಿತ ವಸತಿ ಊಟ ಮತ್ತು ಸಂಬಳವೂ ನೀಡಲಿದ್ದೇವೆ. ನಮ್ಮ ಕಂಪನಿಯ ಉದ್ದೇಶ ಕಲಿಕೆ ಜತೆಗೆ ಗಳಿಕೆ ಮಾಡಬೇಕು ಎಂಬುದಾಗಿದೆ ಎಂದು ಹೇಳಿದರು.
ಉಪನ್ಯಾಸಕರಾದ ಹನುಮಂತಯ್ಯ, ಮೃತ್ಯುಂಜಯ, ಗಾಮನಹಳ್ಳಿ ಸ್ವಾಮಿ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್. ಅನುಪಮಾ, ಟೊಯೋಟ ಕಂಪನಿಯ ಅಮರ್ ಇದ್ದರು. ಇದೇ ವೇಳೆ 40ಕ್ಕೂ ಹೆಚ್ಚು ಯುವತಿಯರು ಸಂದರ್ಶನದಲ್ಲಿ ಪಾಲ್ಗೊಂಡರು.