

ರಾಮನಗರ: ಕಂಪನಿ ಕಾರ್ವಿುಕ ವಿರೋಧಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಬಿಡಿದಿ ಟೊಯೋಟಾ ಕಿಲೋಸ್ಕರ್ ಮೋಟಾರ್ಸ್ (ಟಿಕೆಎಂ) ಕಾರ್ವಿುಕ ಸಂಘಟನೆ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.
ರೈತ ಸಂಘದ ವಿವಿಧ ಬಣಗಳ ಮುಖಂಡರು, ಕಾರ್ವಿುಕ ಮುಖಂಡರು ಹಾಗೂ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ನೂರಾರು ಕಾರ್ವಿುಕರು, ಕಂಪನಿ ಧೋರಣೆ ಖಂಡಿಸಿ ಹಾಗೂ ಕೆಲಸದಿಂದ ಅಮಾನತುಗೊಂಡಿರುವ ನೌಕರರನ್ನು ಮರಳಿ ಕೆಲಸಕ್ಕೆ ಪಡೆಯುವಂತೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ, ವಿದೇಶಿ ಕಂಪನಿಗಳು ಸೇರಿದಂತೆ ಅನ್ಯರಿಗೆ ಜಮೀನು, ನೀರು, ವಿದ್ಯುತ್ ನೀಡುವ ಸರ್ಕಾರಗಳು ಕಾರ್ವಿುಕರ ನೆರವಿಗೆ ಧಾವಿಸುತ್ತಿಲ್ಲ. ಸಂವಿಧಾನವೇ ನಮಗೆ ಅನ್ಯಾಯವಾದಾಗ ಪ್ರತಿಭಟಿಸುವ ಅವಕಾಶ ನೀಡಿರುವಾಗ, ಕಾರ್ವಿುಕರನ್ನು ಅಮಾನತುಗೊಳಿಸಿ ಬೆದರಿಸುವ ತಂತ್ರ ಅನುಸರಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಟಿಕೆಎಂ ಕಾರ್ವಿುಕ ಸಂಘದ ಅಧ್ಯಕ್ಷ ಚಕ್ಕೆರೆ ಪ್ರಸನ್ನಕುಮಾರ್ ಮಾತನಾಡಿ, ಕಾರ್ವಿುಕರನ್ನು ವಸ್ತುಗಳಂತೆ ಬಳಕೆ ಮಾಡಿಕೊಳ್ಳಲು ಸಂಸ್ಥೆ ಮುಂದಾಗಿದೆ. ಇದು ಮುಂದುವರಿದರೆ ಇತರ ಕಂಪನಿಗಳು ಇದೇ ಹಾದಿ ತುಳಿಯುತ್ತವೆ. ಸಮಸ್ಯೆಯ ಗಂಭೀರತೆ ಅರಿತ ಜಿಲ್ಲಾಧಿಕಾರಿಗಳು ಗುರುವಾರ ಸಮಸ್ಯೆ ಪರಿಹರಿಸುವ ಯತ್ನ ನಡೆಸಿದ್ದ್ದು. ಆದರೆ ಆಡಳಿತ ಮಂಡಳಿ ಹಠಮಾರಿ ಧೋರಣೆಯಿಂದಾಗಿ ಇದು ವಿಫಲವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಭೈರೇಗೌಡ, ಅನಸೂಯಮ್ಮ, ಬಿಎಸ್ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ, ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಸೇರಿದಂತೆ ಹಲವು ಮಾತನಾಡಿದರು. ಕಾರ್ವಿುಕ ಸಂಘಟನೆಯ ಯೋಗೇಶ್, ಬಸವರಾಜ್ ಹವಾಲ್ದಾರ್, ರಾಜೇಶ್, ಕನ್ನಡ ಪರ ಸಂಘಟನೆ ಮುಖಂಡ ಶಿವುಗೌಡ ಮುಂತಾದವರು ಇದ್ದರು.
ಪ್ರತಿಷ್ಠಿತರ ಮೌನ ಸರಿಯೇ?
ರಾಮನಗರ ಜಿಲ್ಲೆಯ ಪ್ರತಿಷ್ಠಿತ ರಾಜಕಾರಣಿಗಳು ತಮ್ಮದೇ ನೆಲದಲ್ಲಿ ನೂರಾರು ಕಾರ್ವಿುಕರು ಹಕ್ಕುಗಳಿಗೆ ಹೋರಾಟ ಮಾಡುತ್ತಿದ್ದರೂ ದೇವೇಗೌಡರಾಗಲಿ, ಕುಮಾರಸ್ವಾಮಿ ಅವರಾಗಲಿ, ಡಿ.ಕೆ.ಶಿವಕುಮಾರ್ ಅವರಾಗಲೀ ಮೌನ ವಹಿಸಿರುವುದು ಎಷ್ಟು ಸರಿ ಎಂದು ನಾಗೇಂದ್ರ ಪ್ರಶ್ನಿಸಿದರು. ಇಂತಹ ವ್ಯವಸ್ಥೆ ಇಲ್ಲಿ ಮುಂದುವರಿದರೆ ಇಡೀ ಘಟಕವನ್ನೇ ಎತ್ತಂಗಡಿ ಮಾಡಿಸ ಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿನಿಧಿ ನೇಮಿಸಿ
ಟಿಕೆಎಂ ಆಡಳಿತ ಮಂಡಳಿ ನಿಯಂತ್ರಿಸಲು ಸರ್ಕಾರ ಕೂಡಲೇ ಪ್ರತಿನಿಧಿ ನೇಮಕ ಮಾಡಬೇಕು. ಕಂಪನಿ ಸರ್ಕಾರಕ್ಕೆ ಬಾಕಿ ಕಟ್ಟಬೇಕಿದೆ. ಇದರ ವಸೂಲಾತಿಗೂ ಮುಂದಾಗಬೇಕು ಎಂದು ಪ್ರತಿಭಟಕಾಕಾರರು ಆಗ್ರಹಿಸಿದರು. ಕಾರ್ವಿುಕರ ಅಮಾನತು ಆದೇಶವನ್ನು ಹಿಂಪಡೆಯಬೇಕು. ಒಂದು ವೇಳೆ ಕಂಪನಿ ತನ್ನ ನಿರ್ಧಾರವನ್ನು ಬದಲಿಸಿಕೊಳ್ಳದಿದ್ದರೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಪ್ರಸನ್ನ ಕುಮಾರ್ ಹೇಳಿದರು.
ರಸ್ತೆ ಬದಿ ನಿಂತು ಗಮನ ಸೆಳೆದ ಕಾರ್ವಿುಕರು
ಬಿಡದಿಯಿಂದ ಜಿಲ್ಲಾ ಕೇಂದ್ರ ರಾಮನಗರಕ್ಕೆ ವಾಹನಗಳಲ್ಲಿ ಆಗಮಿಸಿದ ಕಾರ್ವಿುಕರು ಮೊದಲು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಬೆಂಗಳೂರು - ಮೈಸೂರು ರಸ್ತೆಬದಿಯಲ್ಲಿ ನಿಂತು, ಕೈಯಲ್ಲಿ ಕೆಂಪು ಬಾವುಟ ಹಿಡಿದು ಬೇಡಿಕೆಗಳ ಈಡೇರಿಕೆಗೆ ಜಿಲ್ಲಾಡಳಿತ ಮತ್ತು ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಧರಣಿ ಕುಳಿತರು.
ಲಾಕೌಟ್, ಮುಷ್ಕರ ಎರಡೂ ಕಾನೂನುಬಾಹಿರ
ಟೊಯೋಟಾ ಕಿಲೋಸ್ಕರ್ ಮೋಟಾರ್ಸ್ ಸಂಸ್ಥೆ ಕಾರ್ವಿುಕರು ನಡೆಸುತ್ತಿರುವ ಮುಷ್ಕರ ಮತ್ತು ಸಂಸ್ಥೆ ಲಾಕೌಟ್ ಘೋಷಿಸಿರುವುದು ಎರಡೂ ಕಾನೂನುಬಾಹಿರವಾಗಿದೆ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ ಎಂದು ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.
ಬನ್ನಿಕುಪ್ಪೆ ಗ್ರಾಮದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಕಂಪನಿ ಮತ್ತು ಕಾರ್ವಿುಕರ ನಡುವೆ ಸಣ್ಣಪುಟ್ಟ ವ್ಯತ್ಯಾಸವಾಗಿದೆ. ಏನೇ ಇದ್ದರೂ ಕಾರ್ವಿುಕ ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳಬೇಕು. ಈಗಾಗಲೇ ಇಬ್ಬರ ನಡುವೆ ಸರ್ಕಾರ ಮಾತುಕತೆ ನಡೆಸಿ ಸೂಚನೆ ಸಹ ನೀಡಿದೆ. ಆದರೆ ಪಾಲನೆ ಆಗಿಲ್ಲ. ಒಳ್ಳೆಯದನ್ನು ಉಳಿಸಿ ಬೆಳೆಸಿಕೊಳ್ಳುವ ಕಡೆ ಚಿಂತನೆ ಮಾಡಬೇಕೇ ಹೊರತು, ಬದುಕನ್ನೇ ಹಾಳು ಮಾಡಿಕೊಳ್ಳುವ ಕಡೆ ಗಮನಹರಿಸಬಾರದು ಎಂದರು.
ಇತರ ದೇಶಗಳಿಗೆ ಹೋಲಿಸಿದರೆ ಕೈಗಾರಿಕಾ ಕ್ಷೇತ್ರದಲ್ಲಿ ನಾವು ಬಹಳ ಹಿಂದುಳಿದಿದ್ದೇವೆ. ಕಂಪನಿಯ ಉತ್ಪಾದನೆ, ವಹಿವಾಟು ಮತ್ತು ಆರ್ಥಿಕ ಶಕ್ತಿ ತುಂಬುವ ವಾತಾವರಣ ನಿರ್ವಿುಸಿದರೆ ಮಾತ್ರ ನಮ್ಮ ನೆಲದಲ್ಲಿ ಕಾರ್ಖಾನೆಗಳು ಉಳಿಯುತ್ತವೆ. ಹಾಗಾಗಿ ಕಾರ್ವಿುಕರು ಕೆಲಸಕ್ಕೆ ತೆರಳಿ ಉತ್ಪಾದನೆಯಲ್ಲಿ ತೊಡಗಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು. ನಾವೇನೂ ಕಂಪನಿ ಪರವಾಗಿಲ್ಲ. ಬದಲಾಗಿ ಸಂಸ್ಥೆಗೆ ಅವರದೇ ಆದ ನೀತಿ ನಿಯಮಗಳಿರುತ್ತವೆ ಎಂದರು.