7 ವರ್ಷದಿಂದ ಪುಟಾಣಿ ರೈಲು ಸ್ಥಗಿತ

toy train
Published on

ಮಡಿಕೇರಿ:

ಮಡಿಕೇರಿ ರಾಜಾಸೀಟ್‌ನ ಪುಟಾಣಿ ರೈಲು ಸಂಚಾರ ಸ್ಥಗಿತಗೊಳಿಸಿ ಬರೋಬ್ಬರಿ 7 ವರ್ಷಗಳಾಗಿದೆ. ರೈಲ್ವೇ ಸಂಪರ್ಕವೇ ಇಲ್ಲದ ದೇಶದ ಏಕೈಕ ಜಿಲ್ಲೆ ಕೊಡಗಿನ ಮಕ್ಕಳಲ್ಲಿ 'ರೈಲು ಎಂದರೆ ಹೀಗೆ ಇರುತ್ತದೆ' ಎನ್ನುವ ಕಲ್ಪನೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದ ಈ ಆಟಿಕೆ ರೈಲು ತುಕ್ಕು ಹಿಡಿಯುತ್ತಾ ನಿಂತಿದೆ. ರೈಲ್ವೇ ಕಂಬಿ, ಸ್ಟೇಷನ್ ಕಾಡು ಬೆಳೆದು ಹಾಳಾಗಿದೆ. ಪುನಾರಂಭದ ಭರವಸೆಗಳು ಅಕ್ಷರಶಃ 'ಕಂಬಿ ಇಲ್ಲದ ರೈಲು ಬಿಟ್ಟಂತೆ' ಆಗಿದೆ.

ಹಿಂದೊಮ್ಮೆ ಮಡಿಕೇರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದ್ದ ರಾಜಾಸೀಟ್‌ನ ಪುಟಾಣಿ ರೈಲು ಸಂಚಾರ ಸ್ಥಗಿತವಾದ ನಂತರ ಪುನಾರಂಭದ ಭಾಗ್ಯವೇ ಒದಗಿ ಬಂದಿಲ್ಲ. ಮಕ್ಕಳು ಮಾತ್ರವಲ್ಲದೆ ಹಿರಿಯರನ್ನೂ ಸೆಳೆಯುತ್ತಿದ್ದ 'ಕಾವೇರಿ ಎಕ್ಸ್ಪ್ರೆಸ್' ಹೆಸರಿನ ಈ ಆಟಿಕೆ ರೈಲಿನಲ್ಲಿ ಸಂಚರಿಸುವುದೇ ಒಂದು ವಿಶೇಷ ಅನುಭವ ಆಗಿತ್ತು. 'ಕಾವೇರಿ ಪಟ್ಟಣ'ದಿಂದ ಸಂಚಾರ ಆರಂಭಿಸುತ್ತಿದ್ದ ಪುಟಾಣಿ ರೈಲು 'ಬ್ರಹ್ಮಗಿರಿ ಕಣಿವೆ' ಮೂಲಕ ಸಾಗುವಾಗ ಕಂಡುಬರುತ್ತಿದ್ದ ಪ್ರಾಕೃತಿಕ ವೈಭವವನ್ನು ಕಣ್ತುಂಬಿಸಿಕೊಳ್ಳುವುದಕ್ಕಾಗಿಯೇ ಪ್ರವಾಸಿಗರು ಈ ರೈಲಿನಲ್ಲಿ ಸಂಚರಿಸುತ್ತಿದ್ದರು. ರೈಲು ಸಂಚರಿಸುವಾಗ ಪ್ರಯಾಣಿಕರ ಸಂಭ್ರಮ, ಕಿರುಚಾಟ, ಹಾಡು ರಾಜಾಸೀಟ್ ಸುತ್ತಲಿನ ಬೆಟ್ಟಗಳಲ್ಲಿ ಪ್ರತಿಧ್ವನಿಸುತ್ತಿತ್ತು.

ಆರಂಭದಲ್ಲಿ ಮಡಿಕೇರಿ ಗಾಲ್ಫ್ ಗ್ರೌಂಡ್ ಬಳಿ ಪುಟಾಣಿ ರೈಲು ಸಂಚಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಆ ಪ್ರದೇಶ ನಗರದಿಂದ ದೂರ ಮತ್ತು ಅಲ್ಲಿಗೆ ಹೆಚ್ಚಾಗಿ ಪ್ರವಾಸಿಗರು ತೆರಳುವುದಿಲ್ಲ ಎನ್ನುವ ಕಾರಣಕ್ಕೆ ಸುಮಾರು 25 ವರ್ಷದ ಹಿಂದೆ ರಾಜಾಸೀಟ್‌ಗೆ ಸ್ಥಳಾಂತರಿಸಲಾಗಿತ್ತು. ಮೊದಲೇ ಪ್ರವಾಸಿ ಕೇಂದ್ರವಾಗಿದ್ದ ರಾಜಾಸೀಟ್‌ಗೆ ಪುಟಾಣಿ ರೈಲು ಬಂದ ನಂತರ ಇಲ್ಲಿನ ಆಕರ್ಷಣೆ ಮತ್ತಷ್ಟು ಹೆಚ್ಚಾಗಿತ್ತು. ರಾಜಾಸೀಟ್ ಉದ್ಯಾನವನದಲ್ಲಿ ಅಡ್ಡಾಡಿದವರು ಒಮ್ಮೆ ಪುಟಾಣಿ ರೈಲಿನಲ್ಲಿ ಸಂಚರಿಸದೇ ಮರಳುತ್ತಿರಲಿಲ್ಲ.

ಸ್ಥಳೀಯರು ಮಾತ್ರವಲ್ಲದೆ ಪ್ರವಾಸಿಗರ ಮನವನ್ನೂ ಗೆದ್ದಿದ್ದ ಈ ಪುಟಾಣಿ ರೈಲಿನ ಸಂಚಾರವನ್ನು ಪ್ರವಾಸಿಗರ ಸುರಕ್ಷತೆಯ ಕಾರಣ ನೀಡಿ 2018ರ

ಜನವರಿಯಲ್ಲಿ ನಿಲ್ಲಿಸಲಾಗಿತ್ತು. ನಂತರ ಜಿಲ್ಲೆಯನ್ನು ಕಾಡಿದ್ದ ಪ್ರಾಕೃತಿ ವಿಕೋಪ ಈ ರೈಲು ಸಂಚಾರದ ಮೇಲೂ ಪರಿಣಾಮ ಬೀರಿ ಪುನಾರಂಭಕ್ಕೆ ಕಾಲವೇ ಕೂಡಿಬರುತ್ತಿಲ್ಲ. ಈ ಬಗ್ಗೆ ಅಂದಿನ ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಹ್ಮಣಿ ಸದನದಲ್ಲೂ ಪ್ರಸ್ತಾಪ ಮಾಡಿದ್ದರು. ಈ ಬಗ್ಗೆ 2020ರ ಮಾರ್ಚ್ 17ರಂದು ಉತ್ತರ ನೀಡಿದ್ದ ಆಗಿನ ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಖಾತೆ ಸಚಿವ ನಾರಾಯಣ ಗೌಡ ಪುಟಾಣಿ ರೈಲಿನ ಸಂಚಾರ ಸ್ಥಗಿತಕ್ಕೆ ಕಾರಣವಾಗಿದ್ದ ಅಂಶಗಳ ಮಾಹಿತಿ ಕೊಟ್ಟಿದ್ದರು.

ಸದನದಲ್ಲಿ ಅಂದು ಸಚಿವರು ಕೊಟ್ಟಿದ್ದ ಮಾಹಿತಿ ಪ್ರಕಾರ '2018ರ ಆ.9 ರಂದು ನಡೆಸಿದ್ದ ಪುಟಾಣಿ ರೈಲಿನ ನಿಯತಕಾಲಿಕ ತಪಾಸಣಾ ವರದಿಯಲ್ಲಿ ಹಾಲಿ ಇರುವ ಪುಟಾಣಿ ರೈಲಿನಲ್ಲಿ ಗೇರ್ ಬಾಕ್ಸ್, ಹೈಡ್ರಾಲಿಕ್ ಪವರ್ ಟ್ರಾನ್ಸ್ಮಿಷನ್, ಲೀಫ್ ಸ್ಪಿçಂಗ್‌ಗಳು, ಸೆಂಟರ್ ಪಿಓಟ್‌ಗಳು ಮತ್ತು ರೈಲ್ವೆ ಬಾಡಿ 28 ವರ್ಷ ಹಳೆಯದಾಗಿರುವುದರಿಂದ ಶಿಥಿಲಗೊಂಡು, ತಾಂತ್ರಿಕ ದೋಷದಿಂದ ಕೂಡಿದೆ. ಹಾಗಾಗಿ ಪ್ರಯಾಣಿಕರ ಹಿತದೃಷ್ಟಿಯಿಂದ ಸ್ಥಗಿತಗೊಳಿಸುವಂತೆ ತಿಳಿಸಿರುತ್ತಾರೆ. ಹಳೆಯ ರೈಲಿನ ದುರಸ್ತಿಯ ಬದಲು ಪ್ರವಾಸಿಗರ ಸುರಕ್ಷತಾ ಹಿತದೃಷ್ಠಿಯಿಂದ ಹೊಸದಾಗಿ ರೈಲನ್ನು ಖರೀದಿಸಿ ಚಾಲನೆ ಮಾಡಲು ವರದಿಯಲ್ಲಿ ಸೂಚಿಸಿರುವುದರಿಂದ ಮಕ್ಕಳ ರೈಲನ್ನು ಸ್ಥಗಿತಗೊಳಿಸಲಾಗಿದೆ.,' ಎಂದು ತಿಳಿಸಿದ್ದರು.

ಪುಟಾಣಿ ರೈಲು ಸಂಚಾರ ಪುನಾರಂಭಕ್ಕೆ ನಂತರದ ದಿನಗಳಲ್ಲಿ ಸಾಕಷ್ಟು ಪ್ರಯತ್ನಗಳು ನಡೆದಿವೆಯಾದರೂ ಸೂಕ್ತ ಕಾಲವೇ ಕೂಡಿ ಬರುತ್ತಿಲ್ಲ. 2019ರಲ್ಲಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಅಂದಿನ ಸದಸ್ಯ ಪಿ.ಡಿ. ಪೊನ್ನಪ್ಪ ಇದೇ ವಿಷಯ ಪ್ರಸ್ತಾಪಿಸಿದ್ದರು. ಈ ವೇಳೆ ಉತ್ತರಿಸಿದ್ದ ಅಧಿಕಾರಿಗಳು, 'ಪುಟಾಣಿ ರೈಲನ್ನು ಪರಿಶೀಲಿಸಿರುವ ರೈಲ್ವೇ ಇಲಾಖೆ, ಈ ರೈಲು ಓಡಾಟ ಸುರಕ್ಷಿತ ಅಲ್ಲ. ಅದನ್ನು ಬದಲಾಯಿಸಬೇಕು ಎನ್ನುವ ಸಲಹೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ರೈಲನ್ನು ಬದಲಾಯಿಸುವ ಸಂಬAಧ ಸಿದ್ಧತೆ ನಡೆದಿದೆ. 48 ಜನ ಪ್ರಯಾಣಿಸಬಹುದಾದ ಪುಟಾಣಿ ರೈಲಿಗೆ 1.12 ಕೋಟಿ ವೆಚ್ಚ ಆಗಲಿದೆ. ಇದು ಸಂಪೂರ್ಣ ಸುರಕ್ಷಿತವಾಗಿದ್ದು, ಕೊಡಗಿನ ಹವಾಮಾನ ತಾಳಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಈಗಿರುವ ಹಳಿಗೆ ಬಳಸಿರುವ ಮರವೂ ಹಾಳಾಗಿದ್ದು, ಅದನ್ನೂ 48 ಲಕ್ಷ ವೆಚ್ಚದಲ್ಲಿ ಬದಲಾಯಿಸಿ ಕಾಂಕ್ರಿಟ್ ಅಳವಡಿಸಲಾಗುವುದು,' ಎಂದು ತಿಳಿಸಿದ್ದರು. ನಂತರ ರಾಜಾಸೀಟ್ ಅನ್ನು ಗ್ರೇಟರ್ ರಾಜಾಸೀಟ್ ಆಗಿ ಅಭಿವೃದ್ಧಿ ಪಡಿಸುವ ಸಂದರ್ಭ ಯೋಜನೆಯಲ್ಲಿ ಪುಟಾಣಿ ರೈಲು ಸಂಚಾರ ಸೇರ್ಪಡೆ ಆಯಿತಾದರೂ ಗ್ರೇಟರ್ ರಾಜಾಸೀಟ್ ಕಾಮಗಾರಿ ಪೂರ್ಣಗೊಂಡರೂ ರೈಲು ಸಂಚಾರ ಆರಂಭವಾಗಿಲ್ಲ.

ಕೊಡಗಿನಲ್ಲಿ ಸುಸ್ಥಿರ ಪ್ರವಾಸೋದ್ಯಮ ಬೆಳವಣಿಗೆ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವ ಈಗಿನ ಜಿಲ್ಲಾಧಿಕಾರಿ ವೆಂಕಟ್ ರಾಜಾ ಇದೀಗ ಪುಟಾಣಿ ರೈಲು ಸಂಚಾರ ಪುನಾರಂಭ ಸಂಬAಧ ಪ್ರಯತ್ನಗಳನ್ನು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ರೈಲ್ವೇ ಇಲಾಖೆಯನ್ನು ಕೂಡ ಸಂಪರ್ಕಿಸಿದ್ದಾರೆ. ಅಲ್ಲಿಂದ ಅಧಿಕಾರಿಗಳು ಆಗಮಿಸಿ ಪುಟಾಣಿ ರೈಲು, ರೈಲಿನ ಎಂಜಿನ್, ಹಳಿಗಳ ಪರಿಶೀಲನೆ ನಡೆಸಿದ್ದಾರೆ. ಇದರ ಸಂಪೂರ್ಣ ವರದಿ ಇನ್ನಷ್ಟೇ ಬರಬೇಕಿದ್ದು, ನಂತರ ಪುಟಾಣಿ ರೈಲು ಸಂಚಾರ ಪುನಾರಂಭದ ತೀರ್ಮಾನ ಆಗಲಿದೆ.

ರಾಜಾಸೀಟ್‌ಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ಕೊಡುತ್ತಾರೆ. ಇಲ್ಲಿಯ ಮಳೆ, ಗಾಳಿ, ಇಬ್ಬನಿ ಪ್ರವಾಸಿಗರಿಗೆ ಅಪ್ಯಾಯಮಾನ ಅನುಭವ ಕೊಡುತ್ತದೆ. ಕೆಲವೊಮ್ಮೆ ಇಲ್ಲಿ ಕವಿಯುವ ದಟ್ಟ ಮಂಜಿನಿAದಾಗಿ ಎದುರಿಗೆ ಇರುವವರೇ ಕಾಣುವುದಿಲ್ಲ. ಮಂಜು ಕಡಿಮೆ ಆದಾಗ ಕಡಿಮೆಯಾಗುತ್ತಿದ್ದಂತೆ ರಾಜಾಸೀಟ್‌ನಲ್ಲಿ ಇರುವ ವ್ಯೂ ಪಾಯಿಂಟ್ ಬಳಿಯಿಂದ ನೋಡಿದರೆ ದೂರದಲ್ಲಿ ಭತ್ತದ ಗೆದ್ದೆಗಳ ಹಸಿರು ನೋಟ ಮುದ ಕೊಡುತ್ತದೆ. ಇದರ ಜತೆಗೆ ಪುಟಾಣಿ ರೈಲು ಸಂಚಾರ ಪುನಾರಂಭ ಆದರೆ ರಾಜಾಸೀಟ್‌ನ ಪ್ರವಾಸಿ ಆಕರ್ಷಣೆ ಮತ್ತಷ್ಟು ಹೆಚ್ಚಲಿದೆ. ನಿರ್ವಹಣೆಯ ವಾರ್ಷಿಕ ಟೆಂಡರ್ ಮೂಲಕ ಮಡಿಕೇರಿ ನಗರಸಭೆಗೆ ಅಂದಿನ ದಿನಗಳಲ್ಲೇ ವರ್ಷಕ್ಕೆ 12 ಲಕ್ಷ ರೂ. ಆದಾಯ ತಂದು ಕೊಡುತ್ತಿದ್ದ ಪುಟಾಣಿ ರೈಲಿನ ಸಂಚಾರ ಪುನಾರಂಭಿಸಿದರೆ ಈ ಆದಾಯದ ಪ್ರಮಾಣ ಈಗ ದುಪ್ಪಟ್ಟು ಆಗುವ ಎಲ್ಲಾ ಸಾಧ್ಯತೆಗಳಿವೆ. ಹಾಗಾಗಿ ನಗರಸಭೆ ಇದೂ ಒಂದು ಆದಾಯದ ಮೂಲಕ ಆಗಲಿದೆ.

ಪುಟಾಣಿ ರೈಲು ಸಂಚಾರ ನಿಲ್ಲಿಸಿ ಸಾಕಷ್ಟು ಸಮಯ ಆಗಿದೆ. ಅದರ ಸಂಚಾರ ಮತ್ತೆ ಆರಂಭಿಸುವುದಕ್ಕೂ ಮೊದಲು ಅದರಲ್ಲಿ ಸಂಚರಿಸುವವರ ಸುರಕ್ಷತೆಗೆ ಆದ್ಯತೆ ಕೊಡಬೇಕು. ಹಾಗಾಗಿ ಸಂಚಾರ ಪುನಾರಂಭಕ್ಕೆ ಸಂಬAಧಿಸಿದAತೆ ಮೈಸೂರಿನಿಂದ ರೈಲ್ವೆ ತಜ್ಞ ಎಂಜಿನಿಯರ್‌ಗಳನ್ನು ಕರೆಸಲಾಗಿತ್ತು, ತಾಂತ್ರಿಕ ತಜ್ಞರು ಅದನ್ನು ವೀಕ್ಷಿಸಿದ್ದು, ವರದಿ ಬಂದ ನಂತರ ಇದನ್ನು ಸರಿಪಡಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು.

ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net