

ಚಿಕ್ಕಬಳ್ಳಾಪುರ: ಜಿಲ್ಲೆಯ ಜಲಮೂಲಗಳಿಗೆ ಕೈಗಾರಿಕೆಗಳ ಅಪಾಯಕಾರಿ ರಾಸಾಯನಿಕ ತ್ಯಾಜ್ಯ ಸೇರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಜಂಟಿ ಸಮೀಕ್ಷೆಗೆ ಮುಂದಾಗಿದೆ.
ಜಕ್ಕಲಮಡು ಜಲಾಶಯದ ಕಾಲುವೆಗೆ ಬುಧವಾರ ಭೇಟಿ ನೀಡಿದ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ರಾಸಾಯನಿಕಯುಕ್ತ ನೀರಿನ ಮಾದರಿ ಸಂಗ್ರಹಿಸಿತು. ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರಕ್ಕೆ ಕುಡಿಯುವ ನೀರು ಪೂರೈಸುವ ಜಲಾಶಯದ ಕಾಲುವೆಗೆ ಕಿಡಿಗೇಡಿಗಳು ಟ್ಯಾಂಕರ್ನಲ್ಲಿ ವಿಷಯುಕ್ತ ರಾಸಾಯನಿಕ ತ್ಯಾಜ್ಯ ಸುರಿದಿದ್ದು ನೀರಿಗೆ ಸೇರ್ಪಡೆಯಾಗಿರುವ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದೂರುಗಳು ಹಾಗೂ ವಿಜಯವಾಣಿ ಡಿ.15ರಂದು ‘ಜಲಮೂಲಕ್ಕೆ ಕೈಗಾರಿಕೆ ವಿಷ’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಹಾಗೂ ದೂರುಗಳಿಂದ ಎಚ್ಚೆತ್ತ ಪರಿಸರ, ಪೊಲೀಸ್, ಕಂದಾಯ, ಮೀನುಗಾರಿಕೆ, ಸಣ್ಣ ನೀರಾವರಿ, ಅರಣ್ಯ, ಕೈಗಾರಿಕೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಅಧಿಕಾರಿಗಳ ತಂಡ ಸ್ಥಳ ಪರಿಶೀಲಿಸಿ ಮಾದರಿ ಸಂಗ್ರಹಿಸಿತು.
ಜಕ್ಕಲಮಡು ಕ್ರಾಸ್ ಹಾಗೂ ಶ್ರೀನಿವಾಸ ಸಾಗರದ ಬಳಿ ಸುರಿಯಲಾಗಿರುವ ರಾಸಾಯನಿಕ ತ್ಯಾಜ್ಯ ನೀರು (ಜನರಲ್ ಪ್ಯಾರಾಮೀಟರ್, ಆಯಿಲ್ ಆಂಡ್ ಗ್ರೀಸ್, ಹೆವಿ ಮೆಟಲ್ ಮತ್ತು ಸೈನೈಡ್) ಮತ್ತು ಮಣ್ಣಿನ ಮಾದರಿ ಸಂಗ್ರಹಿಸಲಾಗಿದ್ದು, ಬೆಂಗಳೂರಿನ ಕೇಂದ್ರ ಪರಿಸರ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ತ್ವರಿತವಾಗಿ ಫಲಿತಾಂಶದ ವರದಿ ಬರಲಿದೆ ಎಂದು ಜಿಲ್ಲಾ ಪರಿಸರ ಅಧಿಕಾರಿ ಸಿದ್ದೇಶ್ವರ ಬಾಬು ತಿಳಿಸಿದರು.
ತಂಡದಲ್ಲಿ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಾಧುರಿ, ಕೈಗಾರಿಕಾ ಇಲಾಖೆ ಉಪನಿರ್ದೇಶಕ ಶರೀಫ್, ತಹಸೀಲ್ದಾರ್ ಗಣಪತಿಶಾಸ್ತ್ರಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ (ಎಚ್.ಎನ್ ವ್ಯಾಲಿ ಯೋಜನೆ)ಯ ಸಹಾಯಕ ಕಾರ್ಯಪಾಲಕ ಅಭಿಯಂತ ರವೀಂದ್ರನಾಥ್ ಮತ್ತಿತರರು ಇದ್ದರು.
ಮೀನು ಹಿಡಿಯದಂತೆ ಸೂಚನೆ: ಕೈಗಾರಿಕೆಗಳ ಮಾರಕ ತ್ಯಾಜ್ಯ ಸೇರ್ಪಡೆಯ ಸಾಧ್ಯತೆ ಹಿನ್ನೆಲೆಯಲ್ಲಿ ಶ್ರೀನಿವಾಸಸಾಗರ ಜಲಾಶಯದಲ್ಲಿ ಮೀನು ಹಿಡಿಯದಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಜತೆಗೆ ಕೆರೆಯ ನೀರು ಮತ್ತು ಮೀನನ್ನು ಪರೀಕ್ಷೆಗಾಗಿ ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಸಂಶೋಧನಾ ಕೇಂದ್ರದ ಪ್ರಯೋಗಾಲಯಕ್ಕೆ ಕಳುಹಿಸಿಕೊಡುವುದಾಗಿ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಾಧುರಿ ಮಾಹಿತಿ ನೀಡಿದರು.
ನೀರು ಸೇವಿಸದಿರಲು ಎಚ್ಚರಿಕೆ: ನೀರು ಹಾಗೂ ಮಣ್ಣಿನ ಮಾದರಿಯ ವರದಿ ಪ್ರಯೋಗಾಲಯದಿಂದ ಬರುವವರೆಗೂ ಜಲಾಶಯದ ಸುತ್ತಮುತ್ತಲಿನ ಜನರು ನೀರು ಸೇವಿಸದಂತೆ ಜಾಗೃತಿ ಮೂಡಿಸಲು ತಾಲೂಕು ಆಡಳಿತ ಮುಂದಾಗಿದೆ. ಶ್ರೀನಿವಾಸಸಾಗರ ಮತ್ತು ಜಕ್ಕಲಮಡು ಜಲಾಶಯದ ಸುತ್ತಲಿನ ಗ್ರಾಮಗಳ ಜನರು, ಜಾನುವಾರುಗಳು ಕೆರೆಯ ನೀರನ್ನು ಸೇವಿಸದಿರಲು ಮುಂಜಾಗ್ರತೆ ಕೈಗೊಳ್ಳಲಾಗುವುದು. ಆಯಾ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲು ಪೋಶೆಟ್ಟಿಹಳ್ಳಿ ಗ್ರಾಪಂಗೆ ಸೂಚಿಸಲಾಗಿದೆ ಎಂದು ತಾಪಂ ಇಒ ಹರ್ಷವರ್ಧನ್ ತಿಳಿಸಿದ್ದಾರೆ.
ಕಪು್ಪ ಬಣ್ಣದ ರಾಸಾಯನಿಕ: ಇತ್ತೀಚೆಗೆ ಜಿಲ್ಲೆಯ ಕೆರೆ-ಕೆಟ್ಟೆಗಳಿಗೆ, ಅರಣ್ಯ ಪ್ರದೇಶದ ಎಲ್ಲೆಂದರಲ್ಲಿ ಕಿಡಿಗೇಡಿಗಳು ಕೈಗಾರಿಕಾ ತ್ಯಾಜ್ಯದ ನೀರನ್ನು ಸುರಿದು ಹೋಗುತ್ತಿರುವಂತಹ ಪ್ರಕರಣಗಳು ವರದಿಯಾಗುತ್ತಿವೆ. ಇತ್ತೀಚೆಗೆ ಶ್ರೀನಿವಾಸ ಸಾಗರದ ಜಲಾಶಯದ ಕ್ರಾಸ್ ಬಳಿ ಕಪ್ಪು ಬಣ್ಣದ ರಾಸಾಯನಿಕಗಳನ್ನೊಳಗೊಂಡ ತ್ಯಾಜ್ಯ, ನೀರಿಗೆ ಮಿಶ್ರಣವಾಗಿದ್ದು ಇದರ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು.
ಆತಂಕ: ಫ್ಲೋರೈಡ್, ನೈಟ್ರೇಟ್ ಸೇರಿ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚಿಗೆ ನಾನಾ ಲವಣಾಂಶಗಳಿಂದ ಕೂಡಿರುವ ನೀರನ್ನು ಸೇವಿಸಿ ಈ ಭಾಗದ ಜನರು ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಶುದ್ಧ ನೀರಿನ ಸೇವನೆ ಜಾಗೃತಿ, ವ್ಯವಸ್ಥೆಯಿಂದ ಜಿಲ್ಲೆ ನಿಧಾನವಾಗಿ ಸುಧಾರಿಸಿಕೊಳ್ಳುತ್ತಿವೆ. ಇದರ ನಡುವೆ ಬೆಂಗಳೂರು ಸುತ್ತಮುತ್ತಲಿನ ಕೈಗಾರಿಕೆಗಳ ವಿಷ ಇಲ್ಲಿನ ಜಲಮೂಲವನ್ನು ನೆರವಾಗಿ ಸೇರುತ್ತಿರುವುದು ಮತ್ತೆ ಆತಂಕದ ಕಾಮೋಡ ಕವಿದಿದೆ.
ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು: ಮಾರಕ ರಾಸಾಯಾನಿಕ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುತ್ತಿರುವ ಕೈಗಾರಿಕೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಲಾಗುವುದು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ತಿಳಿಸಿದ್ದಾರೆ. ನೈಸರ್ಗಿಕ ಪರಿಸರ ಹಾಳುವ ಮಾಡುವ, ಜನ ಜಾನುವಾರುಗಳ ಜೀವದೊಂದಿಗೆ ಚೆಲ್ಲಾಟವಾಡುವ ಯಾವುದೇ ಕುಕೃತ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇದರ ಬಗ್ಗೆ ಮಂಡಳಿಯ ಗಮನ ಸೆಳೆಯಲಾಗುವುದು ಎಂದಿದ್ದಾರೆ.